ಧಾರ್ಮಿಕ ಆಚರಣೆಗಳಿಂದ ಸೌಹಾರ್ದ: ಸಾಲಿಮಠ
ಗಜೇಂದ್ರಗಡ: ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆ ಮೂಡಿಸುವುದರ ಜತೆಗೆ ಉತ್ತಮ ಭಾಂಧವ್ಯ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ವೇ.ಮು. ಶಂಕ್ರಯ್ಯ ಸಾಲಿಮಠ ಹೇಳಿದರು. ಸಮೀಪದ ರಾಜೂರ ಗ್ರಾಮದಲ್ಲಿ ಗುರುವಾರ ಶರಣ ಬಸವೇಶ್ವರರ 66ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಶರಣಬಸವೇಶ್ವರ ಪುರಾಣ ಪ್ರವಚನ ಮಹಾಮಂಗಲ, ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ ಹಾಗೂ 151 ಕುಂಭ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ವರು ಸಮಾನತೆಯ ಸಂಕಲ್ಪ ತೊಟ್ಟು ಧಾರ್ಮಿಕ ಆಚರಣೆಗಳಲ್ಲಿ ತೊಡಗಿದಾಗ ಸಮಾಜದಲ್ಲಿ ಅನ್ಯೋನತೆ ಮೂಡುತ್ತದೆ ಎಂದರು.
ಯಲ್ಲಾಪುರ ಶ್ರೀಗುರು ಸಿದ್ಧೇಶ್ವರ ಶಾಸ್ತ್ರೀಗಳು ಮಾತನಾಡಿ, ಈ ಜಗದಲ್ಲಿ ದೇವರು ಸರ್ವಾಂತರಯಾಮಿಯಾಗಿದ್ದಾನೆ. ಭಾವೈಕ್ಯತೆಯಿಂದ ಸಮೂದಾಯ ಮತ್ತು ಸುತ್ತಲಿನ ಜನರೊಂದಿಗೆ ಬಾಳಿದಲ್ಲಿ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ. ಅನುಮಾನವೆಂಬುದು ಮನುಷ್ಯನ ಬೆಳವಣಿಗೆಗೆ ಮಾರಕವಾಗಿದ್ದು, ಪರಸ್ಪರ ನಂಬಿಕೆ ವಿಶ್ವಾಸದಿಂದ ಜೀವಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದ ನೂರಾರು ಮಹಿಳೆಯರು ಕುಂಭ ಹಾಗೂ ಆರತಿತಟ್ಟೆಯೊಂದಿಗೆ ಭಾಗವಹಿಸಿ ಭಕ್ತಿ-ಭಾವ ಮೆರೆದರು.
ಎಸ್.ಆರ್. ಪಾಟೀಲ, ಎಸ್.ಟಿ. ಕುಡಗುದ್ರಿ, ವಿ.ಬಿ. ಹಪ್ಪಳದ, ಎಸ್.ಎಸ್. ಕೋರಿ, ವಿ.ಎಸ್.ಕೋರಿ, ಚಂದ್ರಗೌಡ ಪಾಟೀಲ, ಎಂ.ಮುಜಾವರ, ಶರಣಪ್ಪ ರಾಠೋಡ, ಸಂತೋಷ ಹಳ್ಳದ, ಪಿ.ಸಿ. ಮಳಗಿ, ರಾಜು ಮೂಗನೂರ, ಎಸ್. ಪಾಟೀಲ ಇದ್ದರು.