ಸ್ವರಕ್ಷಣೆಗೆ ಕರಾಟೆ ಕಲಿಯಿರಿ
ಕನ್ನಡಪ್ರಭ ವಾರ್ತೆ, ಗದಗ, ಮೇ 2
ಮಹಿಳೆಯರು ಕರಾಟೆ, ಜುಡೋಗಳನ್ನು ಕಲಿತು ಸ್ವರಕ್ಷಣೆಗೆ ಮುಂದಾಗಬೇಕೆಂದು ಡಾ.ರಾಧಿಕಾ ಕುಲಕರ್ಣಿ ಮಹಿಳೆಯರಿಗೆ ಕರೆ ನೀಡಿದರು. ಅವರು ಗುರುವಾರ ಗದುಗಿನ ಮಾಡೆಲ್ ಬಾಲಕರ ಶಾಲೆಯ ಆವರಣದಲ್ಲಿ ಚೇತನ್ ಕರಾಟೆ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್, ಜ್ಞಾನಸಾಗರ ಸ್ಟಡಿ ಸರ್ಕಲ್ ಆಶ್ರಯದಲ್ಲಿ ನಡೆದ ಮಹಿಳೆಯರಿಗೆ ಒಂದು ವಾರದ ಉಚಿತ ಕರಾಟೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಂದಿಗ್ಧತೆಯ ಕಾಲವಿದು. ಆಕಸ್ಮಿಕ ಮತ್ತು ಉದ್ದೇಶಪೂರ್ವಕವಾಗಿ ನಡೆಯುವ ದಾಳಿಯಿಂದ ರಕ್ಷಿಸಿಕೊಳ್ಳಲು ಮಹಿಳೆಯರಿಗೆ ಈ ಕಲೆ ಅವಶ್ಯ ಎಂದರು. ಅತಿಥಿಗಳಾಗಿ ಕರಾಟೆ ಪಾತ್ರಕ್ಷಿಕೆ ನೀಡಿ ಮಾತನಾಡಿದ ಚೇತನ್ ಕರಾಟೆ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಹಬೀಬ, ಕರಾಟೆ ಕಲಿಯಲು ಮಹಿಳೆಯರು ಹೆಚ್ಚು ಉತ್ಸುಕರಾಗಿದ್ದು ಸ್ವಪ್ರೇರಣೆಯಿಂದ ಕಲಿಯಲು ಬರುತ್ತಿರುವುದು ಸ್ವಾಗತಾರ್ಹ ಎಂದರು. ಮೀನಾಕ್ಷಿ ಸಜ್ಜನರ ಹಾಗೂ ಆಶಾ ಹುಕ್ಕೇರಿ ಅವರು ಮಾತನಾಡಿ ಮಹಿಳೆಯರಿಗೆ ಕರಾಟೆ ಕಲಿಯುವುದು ಇಂದಿನ ದಿನಗಳಲ್ಲಿ ಅವಶ್ಯ ಹಾಗೂ ಅನಿವಾರ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಪ್ರತಿನಿತ್ಯ ಮಹಿಳೆಯರ ಮೇಲೆ ಒಂದಿಲ್ಲ ಒಂದು ಅನ್ಯಾಯಗಳು ಜರುಗುತ್ತಿವೆ. ಮಹಿಳೆಯರು ಏಕಾಂಗಿಯಾಗಿ ಅಡ್ಡಾಡಲು ಸಾಧ್ಯವಾಗದಂಥ ಸಂದರ್ಭಗಳಿವೆ. ಆದ್ದರಿಂದ ಸ್ವಯಂ ರಕ್ಷಣೆಗಾಗಿ ಯುವತಿಯರು ಹಾಗೂ ಮಹಿಳೆಯರು ಕರಾಟೆ ಕರಗತ ಮಾಡಿಕೊಳ್ಳಲು ಮುಂದಾಗಬೇಕೆಂದರು.
ಜ್ಞಾನಸಾಗರ ಸ್ಟಡಿ ಸರ್ಕಲ್‌ನ ವ್ಯವಸ್ಥಾಪಕ ಶಿವರಾಜ ಪಾಟೀಲ ಮಾತನಾಡಿದರು. ಯಲ್ಲಪ್ಪ ಹುಂಬಿ ಸ್ವಾಗತಿಸಿದರು. ಕವಿತಾ ದಂಡಿನ ನಿರೂಪಿಸಿದರು. ಸುಲೋಚನಾ ಐಹೋಳಿ ವಂದಿಸಿದರು. ಸುವರ್ಣ ವಸ್ತ್ರದ, ಎಸ್.ಎಂ. ಗೊರವರ, ಮಂಜುನಾಥ ಕುರಿ, ಪರಶುರಾಮ, ಸಂಧ್ಯಾ ಕೋಟಿ, ಸುಮಾ ಪಾಟೀಲ, ಶಿವಲೀಲಾ ಅಕ್ಕಿ, ಸವಿತಾ ಪಾಟೀಲ, ಸಂತೃಪ್ತಿ ಮುಂದಿನಮನಿ ಇದ್ದರು.
ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.