ಇಂದು ಅನ್ನದಾನೀಶ್ವರ ಶ್ರೀಗಳ 73ನೇ ಜನ್ಮದಿನ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 3
ಸಾಹಿತ್ಯಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಇತಿಹಾಸದಲ್ಲಿಯೇ ದಾಖಲಾರ್ಹ ಸಾಧನೆ ಮಾಡುವ ಮೂಲಕ ಬರಗಾಲದ ನಾಡೆಂದೇ ಹೆಸರಾದ ಮುಂಡರಗಿಯನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ 1969ರಲ್ಲಿ ಶ್ರೀ ಮಠದ 10ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ಜಗದ್ಗುರು ಡಾ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ.
ಮುಂಡರಗಿ ಜಗದ್ಗುರು ಡಾ. ಅನ್ನದಾನೀಶ್ವರ ಸ್ವಾಮೀಜಿ ವಿಜಾಪುರ ಜಿಲ್ಲೆಯ ಪೀರಾಪುರ ಗ್ರಾಮದಲ್ಲಿ 1943ರ ಮೇ 4ರಂದು ವೀರಭದ್ರಯ್ಯ ಮತ್ತು ಬಸಮ್ಮ ದಂಪತಿ ತೃತೀಯ ಪುತ್ರರಾಗಿ ಜನಿಸಿದ ಶ್ರೀಗಳು ಇಂದು ತಮ್ಮ 73ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1956ರಲ್ಲಿ ಶಿವಯೋಗ ಮಂದಿರದಲ್ಲಿ ಸಾಧಕರಾಗಿ ಕಾರ್ಯನಿರ್ವಹಿಸಿ ತಮ್ಮ 18ನೇ ವಯಸ್ಸಿನಲ್ಲಿಯೇ ಮುಂಡರಗಿ ಮಠದ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಪ್ರಶಸ್ತಿಗಳ ಗರಿ: ಪೂಜ್ಯರು ಅಂದಿನಿಂದ ಇಂದಿನವರೆಗೂ ಒಂದು ವಿಶ್ವವಿದ್ಯಾಲಯ ಮಾಡಲಾರದಷ್ಟು ಕೆಲಸ ಮಾಡಿದ್ದಾರೆ. ಇವರ ಸಾಧನೆ ಮೆಚ್ಚಿಯೇ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ಹಾಗೂ ನಾಡಿನ ವಿವಿದೆಡೆಗಳಿಂದ ಹತ್ತು ಹಲವಾರು ಸಂಘ ಸಂಸ್ಥೆಗಳು, ಗಣ್ಯಮಾನ್ಯರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
116 ಕೃತಿ ರಚನೆ: ಈ ನಾಡಿನ ಸಾಮಾಜಿಕ ಮತ್ತು ಆರ್ಥಿಕ ಬದುಕನ್ನು ಸುಧಾರಿಸುವಲ್ಲಿ ಶ್ರೀಗಳ ಪಾತ್ರ ಅಮೋಘವಾಗಿದೆ. ಎಲ್ಲ ವರ್ಗದ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಾದ ನಿಲಯ ಪ್ರಾರಂಭಿಸಿ ಅವರ ಬದುಕಿಗೆ ಆಶ್ರಯ ನೀಡುವುದರ ಜೊತೆಗೆ, ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ. ಅನ್ನದಾನ ಶ್ರೀಗಳು ನಿರಂತರ ಅಧ್ಯಯನ ನಡೆಸಿ 116 ಕೃತಿ ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕನಕಗಿರಿಯ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಗಳು ಚನ್ನಬಸವಣ್ಣನವರ ಜೀವನ ಸಾಧನೆ ಕುರಿತು, ಪ್ರೊ. ಕೆ.ಎಚ್. ಬೇಲೂರ ಧರ್ಮ, ಸಾಹಿತ್ಯಗಳ ಸಂಗಮ ಶ್ರೀ ಸನ್ನಿಧಿಯವರು ಕುರಿತು ಮತ್ತು ಕೆ.ಎ. ಬಳಿಗಾರ ಬಸವಣ್ಣನವರ ಸಾಮಾಜಿಕ ಮೌಲ್ಯಗಳು ಕುರಿತು ಮಾತನಾಡುವರು.
ಕೃತಿ ಬಿಡುಗಡೆ: ಇದೇ ಸಂದರ್ಭದಲ್ಲಿ ಜ. ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಕ್ಕಳಿಗಾಗಿ ರಚಿಸಿದ ಶ್ರೀ ಅನ್ನದಾನೀಶ್ವರ ವಚನಗಳು ಎಂಬ 3ನೇ ಮುದ್ರಣ ಕೃತಿ ಬಿಡುಗಡೆಗೊಳ್ಳುವುದು.
ಅಕ್ಕನ ಬಳಗದವರಿಂದ ಶ್ರೀಗಳ ಪಾದಪೂಜೆ ಮತ್ತು ಬೆಳಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು ವಿತರಣೆ ಮಾಡಲಾಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಾತ್ರಾ ಕಮಿಟಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮನವಿ ಮಾಡಿದ್ದಾರೆ.