ಗಜೇಂದ್ರಗಡ ಪುರಸಭೆಯಿಂದ ತುಘಲಕ್ ಆಡಳಿತ
ಗಜೇಂದ್ರಗಡ: ಸ್ಥಳೀಯ ಬಿಜೆಪಿ ನೇತೃತ್ವದ ಪುರಸಭೆ ಆಡಳಿತ ಅಕ್ರಮಕೋರರಿಗೆ ಬೆಂಗಾವಲಾಗಿ ಕಾನೂನು ಗಾಳಿಗೆ ತೂರಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪುರಸಭೆಗೆ ಬೀಗ ಜಡಿದು ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ಹೇಳಿದರು.
ಅವರು ಶನಿವಾರ ಪಟ್ಟಣದ ತಮ್ಮ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುರಸಭೆಯ 21ನೇ ವಾರ್ಡಿನ ಚೌಕಿಮಠ ಬಳಿಯ ಪುರಸಭೆ ಜಾಗೆಯಲ್ಲಿ ಕನಕಪ್ಪ ಅರಳಿಗಿಡದ ಎಂಬವರು ಖೊಟ್ಟಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರು ಪುರಸಭೆಗೆ ತಕರಾರು ನೀಡಿದರೂ ಪುರಸಭೆ ಆಡಳಿತ ಮಾತ್ರ ತಲೆಕೆಡಿಸಿಕೊಳ್ಳದೆ ಅಕ್ರಮಕೋರರ ಪರವಾಗಿ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಟ್ಟಡ ಕಾಮಗಾರಿ ಅನಧಿಕೃತ ಹಾಗೂ ದಾಖಲೆಗಳು ಖೊಟ್ಟಿ ಎಂದು ಪುರಸಭೆ ಅಧಿಕಾರಿಗಳು ದಾಖಲೆ ಸಮೇತ ನೀಡಿದರೂ ಆಡಳಿತ ನಡೆಸುತ್ತಿರುವ ಬಿಜೆಪಿಯ ಸದಸ್ಯರು ಮಾತ್ರ ಅಕ್ರಮಕೋರರ ಪರವಾಗಿಯೇ ವರ್ತಿಸಿ ಅಧಿಕಾರಿಗಳಿಗೆ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಉಪಾಧ್ಯಕ್ಷ ಸುಭಾನಸಾಬ್ ಆರಗಿದ್ದಿ ಮಾತನಾಡಿ, ಕಳೆದ ಹಾಗೂ ಈ ಬಾರಿ ಆಡಳಿತ ನಡೆಸುತ್ತಿರುವ ಬಿಜೆಪಿ ಆಡಳಿತವು ಸಂಪೂರ್ಣವಾಗಿ ಭ್ರಷ್ಟಾಚಾರ, ಸ್ವಜನಪಾತದಲ್ಲಿ ಮುಳುಗಿ ಪ್ರಜಾತಂತ್ರ ವ್ಯವಸ್ಥೆಯ ಕಗ್ಗೋಲೆ ಮಾಡುತ್ತಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಲಾಗಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಮೋಹನಸಾ ರಾಯಬಾಗಿ, ಶ್ರೀಧರ ಗಂಜಿಗೌಡರ, ಅಜೀತ ವಂದಕುದರಿ, ಪ್ರಶಾಂತ ರಾಠೋಡ, ಹಸನ ತಟಗಾರ, ಕೊಟ್ರೇಶ ಚಿಲಕಾ, ದಾದೇಸಾಬ್ ಹಣಗಿ, ಶಂಕರ ರಾಠೋಡ್, ಅನೀಲ ಕರ್ಣಿ, ವೆಂಕಟೇಶ ಮುದಗಲ್, ಭೀಮಣ್ಣ ತಳವಾರ, ಈರಣ್ಣ ಕಲ್ಲಿಗನೂರ, ತುಳಸಿರಾಮ ಮಾಳೋತ್ತರ, ಚಂದ್ರಶೇಖರ ಬೋಸಲೆ, ನಾಸೀರಲಿ ಸುರಪುರ ಉಪಸ್ಥಿತರಿದ್ದರು.
ಇಂದು ವಿದ್ಯುತ್ ವ್ಯತ್ಯಯ
ಗದಗ: ಮೇ 4ರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಗದಗ ಹುಬ್ಬಳ್ಳಿ ರಸ್ತೆಯಲ್ಲಿರುವ ಮುಖ್ಯ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ಮೂಲಕ ವಿದ್ಯುತ್ ಪೂರೈಕೆಯಾಗುತ್ತಿರುವ ಹುಡ್ಕೋ ಕಾಲೋನಿ, ಮುಳಗುಂದ ರಸ್ತೆ, ಒಡ್ಡರಗೇರಿ, ಆದರ್ಶನಗರ, ಕಳಸಾಪುರ ರಸ್ತೆ, ಮುಂಡರಗಿ ರಸ್ತೆ, ಹೊಸ ಬಸ್ಸ್ಟ್ಯಾಂಡ್ ರಸ್ತೆ, ಸವಡಿ ಲೇಔಟ್, ಎಂಜಿನಿಯರಿಂಗ್ ಕಾಲೇಜು ಈ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಇಲಾಖೆಯ ತಿಳಿಸಿದೆ.
ಪಪಂ ಸದಸ್ಯತ್ವ ಅನರ್ಹ
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹರಿಪುರ ಗ್ರಾಮದ 2ನೇ ವಾರ್ಡ್ನ ಜೆಡಿಎಸ್ ಬೆಂಬಲಿತ ಸದಸ್ಯ ಬಾಲಚಂದ್ರ ಬಸವಣ್ಣೆಪ್ಪ ಇಟಗಿ ಅವರು ಪಪಂ ಅಧ್ಯಕ್ಷ ಸ್ಥಾನಕ್ಕೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಜರುಗಿದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಪಕ್ಷಾಂತರ ಚಟುವಟಿಕೆ ಮಾಡಿದ್ದಾರೆ ಎಂದು ತಾಲೂಕು ಜನತಾ ದಳದ ಅಧ್ಯಕ್ಷರು ಸಲ್ಲಿಸಿದ್ದ ಅರ್ಜಿ ಪರಿಗಣಿಸಿ ಪಕ್ಷಾಂತರ ನಿಷೇಧ ಕಾಯ್ದೆ 1987ರ ಕಲಂ (1)(ಬಿ)ನೇದ್ದರನ್ವಯ ಸದಸ್ಯತ್ವದಿಂದ ಜಿಲ್ಲಾಧಿಕಾರಿಗಳು ಅನರ್ಹಗೊಳಿಸಿದ್ದಾರೆ.
ಶಾಂತಾಬಾಯಿ ಇಂಗಳಳ್ಳಿ ನಿಧನ
ನರಗುಂದ: ಪಟ್ಟಣದ ಜವಳಿ ಬಜಾರದ ಶಾಂತಾಬಾಯಿ ಇಂಗಳಳ್ಳಿ(90) ಶನಿವಾರ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗ ಇದ್ದಾರೆ.
ಗಣಿ ಕಣಿವೆಯಲ್ಲಿ ಲಾಭ ನಷ್ಟದ ಲೆಕ್ಕಾಚಾರ
ಎ ಮತ್ತು ಬಿ ಕೆಟಗರಿ ಗಣಿ ಕಂಪನಿಗಳ ಗುತ್ತಿಗೆದಾರರಿಗೆ ದಂಡ ವಿಧಿಸುವ ಮೂಲಕ ಗಣಿಗಾರಿಕೆ ಆರಂಭಿಸಲು ಸಮ್ಮತಿಸಿದ್ದರೆ, ಸಿ ಕೆಟಗರಿಯಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅದನ್ನು ಜಾಗತಿಕ ಟೆಂಡರ್ ಪ್ರಕ್ರಿಯೆ ಮೂಲಕ ಹರಾಜು ಉದ್ದೇಶದಿಂದ ಎಲ್ಲ ಸಿದ್ಧತೆಯನ್ನು ಸಿಇಸಿ ಆದೇಶದಂತೆ ರಾಜ್ಯ ಸರ್ಕಾರ ಮಾಡುತ್ತಿದೆ. ಸಿ ಕೆಟಗರಿಯ ಅದಿರು ನಷ್ಟವಾಗಿರುವುದನ್ನು ಪತ್ತೆಹಚ್ಚಿ, ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣದ ಸಿದ್ಧತೆಗಳು ಭರದಿಂದ ಸಾಗಿವೆ.
ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸಂಸ್ಥೆ ಪೈಲಟ್ ಪ್ರಾಜೆಕ್ಟಾಗಿ ಸಿ ಕೆಟಗರಿಯ ಕಂಪನಿಯಲ್ಲಿ ಸಂಗ್ರಹವಿರುವ ಅದಿರು ಪ್ರಮಾಣವನ್ನು ಲೆಕ್ಕ ಹಾಕುತ್ತಿದೆ. ಇದರ ಬೆನ್ನಲ್ಲೇ ಐಸಿಎಫ್ಆರ್ಇ ತಂಡ ಸಿ ಕೆಟಗರಿಯಲ್ಲಿರುವ ಪರಿಸರ ಪುನರುಜ್ಜೀವನ ಹಾಗೂ ಪುನರ್ನಿರ್ಮಾಣ (ಆರ್ ಅಂಡ್ ಆರ್) ಯೋಜನೆ ಸಿದ್ಧ ಮಾಡುತ್ತಿದೆ. ಸಿ ಕೆಟಗರಿಯಲ್ಲಿ ಆಗಿರುವ ನಷ್ಟ ಕಂಡು ಹಿಡಿಯಲು ರಾಜ್ಯ ಸರ್ಕಾರದ ಲಾಸ್ ಅಸೆಸ್ಮೆಂಟ್ ಕಮಿಟಿಯ ರಿಮೋಟ್ ಸೆನ್ಸಿಂಗ್ ಏಜೆನ್ಸಿ ಬಳ್ಳಾರಿಗೆ ಆಗಮಿಸಿದೆ.
ನಷ್ಟದ ಪತ್ತೆ ಕಾರ್ಯ: ರಿಮೋಟ್ ಸೆನ್ಸಿಂಗ್ ಏಜೆನ್ಸಿ ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿರುವ ಸಿ ಕೆಟಗರಿಯ 51 ಗಣಿ ಕಂಪನಿಗಳಲ್ಲಿ ಈವರೆಗೆ ಎಷ್ಟು ಅದಿರನ್ನು ತೆಗೆಯಲಾಗಿದೆ, ಎಷ್ಟು ನಷ್ಟವಾಗಿದೆ ಎಂಬುದನ್ನು ಪತ್ತೆಮಾಡಲಿದೆ. ಜಿಡಿಪಿಎಸ್ ಹಾಗೂ ಏರಿಯಲ್ ಸರ್ವೆ ಮೂಲಕ ಸಿ ಕೆಟಗರಿಯ ಗಣಿ ಗುತ್ತಿಗೆ ಪ್ರಕಾರವಾಗಿ ನಷ್ಟವನ್ನು ಕಂಡು ಹಿಡಿದು, ವರದಿ ಸಲ್ಲಿಸಲಿದೆ. ಸಿ ಕೆಟಗರಿಯಲ್ಲಿ ಗಣಿ ಕಂಪನಿಗಳಿಂದ ಮಾಡಿರುವ ನಷ್ಟ, ಅದನ್ನು ತುಂಬುವ ನಿಟ್ಟಿನಲ್ಲಿ ಆಲೋಚನೆ ಸಾಧ್ಯವಾಗುತ್ತದೆ.
ನಷ್ಟ ತುಂಬುವ ಚಿಂತನೆ: ಎ ಮತ್ತು ಬಿ ಕೆಟಗರಿಯಲ್ಲಿ ಆರ್ ಅಂಡ್ ಆರ್ ಯೋಜನೆಯನ್ನು ಆಯಾ ಗಣಿ ಗುತ್ತಿಗೆ ಪ್ರದೇಶದವರು ಅನುಷ್ಠಾನ ಮಾಡುವ ಮೂಲಕ ಗಣಿ ಗುತ್ತಿಗೆ ಪರವಾನಿಗೆ ಪಡೆದಿದ್ದರೆ, ಸಿ ಕೆಟಗರಿಯಲ್ಲಿ ಗಣಿ ಗುತ್ತಿಗೆ ಪ್ರದೇಶದಲ್ಲಿ ಸಾಕಷ್ಟು ಅಕ್ರಮವಾಗಿರುವುದರಿಂದ ಪರಿಸರ ಹಾನಿ ಹಾಗೂ ಅದಿರು ನಷ್ಟವನ್ನು ಪತ್ತೆ ಮಾಡಿ, ನಷ್ಟವನ್ನು ಆಯಾ ಕಂಪನಿಯವರು ಭರಿಸುವ, ಅವರ ಮೂಲಕ ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಮಾಡುವುದರ ಬಗ್ಗೆ ಸರ್ಕಾರ ನಿರ್ಧರಿಸುವುದು ಅಥವಾ ಮ್ಯಾನಿಟರಿಂಗ್ ಕಮಿಟಿ ನಷ್ಟವನ್ನು ವಸೂಲಿ ಮಾಡಿ, ಆರ್ ಆಂಡ್ ಆರ್ ಯೋಜನೆ ಅನುಷ್ಠಾನಕ್ಕೆ ಮುಂದಾಗಲು ಸಾಧ್ಯವಾಗುತ್ತದೆ. ಆದರೆ ಗುತ್ತಿಗೆಯನ್ನು ಅವರಿಗೆ ನೀಡದೆ, ಜಾಗತಿಕ ಟೆಂಡರ್ ಮೂಲಕ ಹರಾಜು ಮಾಡಲಿದೆ.
ಏಕಕಾಲದಲ್ಲಿ ಸಿದ್ಧತೆ: ಏಕಕಾಲದಲ್ಲಿ ಸಿ ಕೆಟಗರಿಯ ಗಣಿ ಗುತ್ತಿಗೆ ಪ್ರದೇಶದಲ್ಲಿರುವ ಅದಿರು ಪ್ರಮಾಣ, ಅದಿರು ನಷ್ಟವನ್ನು ಕಂಡು ಹಿಡಿಯುವುದು ಹಾಗೂ ಆರ್ ಅಂಡ್ ಆರ್ ಯೋಜನೆ ಸಿದ್ಧತೆ ನಡೆಸಲಾಗುತ್ತಿದೆ. ಸುರತ್ಕಲ್ನ ಎನ್ಐಟಿಕೆ ಅದಿರು ಸಂಗ್ರಹ ಮಾಹಿತಿ ಕಲೆ ಹಾಕುತ್ತಿದ್ದರೆ, ಐಸಿಎಫ್ಆರ್ಇ ತಂಡ ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣಕ್ಕೆ ಯೋಜನೆ ಸಿದ್ಧಮಾಡುತ್ತಿದೆ. ಈಗ ಲಾಸ್ ಅಸೆಸ್ಮೆಂಟ್ ಕಮಿಟಿ ಅಧೀನದ ರಿಮೋಟ್ ಸೆನ್ಸಿಂಗ್ ಏಜೆನ್ಸಿಯ ಸಲೀಂ ಎಂಬುವರ ನೇತೃತ್ವದಲ್ಲಿ 15 ಜನರ ತಂಡ ಬಳ್ಳಾರಿಗೆ ಗುರುವಾರದೊಳಗೆ ಆಗಮಿಸಿ, ಸಿ ಕೆಟಗರಿಯಲ್ಲಿ ಅದಿರು ನಷ್ಟದ ಪ್ರಮಾಣವನ್ನು ಪತ್ತೆ ಹಚ್ಚಲಿದೆ. ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ಬಿಡಾರ ಹೂಡುವ ಸಾಧ್ಯತೆ ಇದೆ.
ಸಿ ಕೆಟಗರಿಯಲ್ಲಿರುವ ರಾಜ್ಯದ 51 ಕಂಪನಿಗಳ ಗಣಿ ಗುತ್ತಿಗೆ ಪ್ರದೇಶವನ್ನು ಜಾಗತಿಕ ಟೆಂಡರ್ ಹಾಕುವುದರಿಂದ ಸಾಕಷ್ಟು ಪ್ರಮಾಣದ ಆದಾಯ ಸರ್ಕಾರಕ್ಕೆ ಹರಿದು ಬರಲಿದೆ. ಅಕ್ರಮದಿಂದ ಆಗಿರುವ ನಷ್ಟವನ್ನು ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಯೋಜನೆ ಸಿದ್ಧಗೊಳಿಸಿ, ಆಯಾ ಗಣಿ ಕಂಪನಿಗಳಿಂದ ಭರಿಸುವ ಕೆಲಸ ಆಗುತ್ತಿದೆ. ಜತೆಗೇ ಸಿ ಕೆಟಗರಿ ಗಣಿ ಕಂಪನಿಗಳ ಗಣಿ ಗುತ್ತಿಗೆ ಪ್ರದೇಶಗಳನ್ನು ಜಾಗತಿಕ ಟೆಂಡರ್ ಮೂಲಕ ಹರಾಜು ಮಾಡುವ ಸಿದ್ಧತೆಯೂ ಭರದಿಂದ ನಡೆಯುತ್ತಿದೆ.