ಹಿರೇಹಾಳ: ಇಂದು ಕೋಲಾಟ ಕಾರ್ಯಕ್ರಮ
ರೋಣ: ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ನಿಮಿತ್ತವಾಗಿ ಕುಮಾರೇಶ್ವರ ಗೆಳೆಯರ ಬಳಗ, ವೀರಭದ್ರೇಶ್ವರ ಯುವಕ ಮಂಡಳ, ಶಿವಶಕ್ತಿ ಸ್ಪೋರ್ಟ್ಸ ಕ್ಲಬ್ ಮತ್ತು ಮಾರುತೇಶ್ವರ ಯುವಕ ಮಂಡಳ ಅವರ ಆಶ್ರಯದಲ್ಲಿ ಕೋಲಾಟ ಕಾರ್ಯಕ್ರಮ ಮೇ 4ರಂದು ಸಂಜೆ 6ಕ್ಕೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಜರುಗಲಿದೆ. ಹುನಗುಂಡಿ ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ಉದ್ಘಾಟಿಸುವರು. ಕೆ.ಬಿ. ಸಾಲಮನಿ ಅಧ್ಯಕ್ಷತೆ ವಹಿಸುವರು. ಸಿ.ಎಸ್. ವಸ್ತ್ರದ, ಪಿ.ಸಿ. ಪೊಲೀಸ್ಪಾಟೀಲ, ಪಿ.ವಿ. ಜಕ್ಕನ್ನವರ, ಎಲ್.ಎಸ್. ಗೌಡರ, ಸಿ.ಬಿ. ಕುದರಿ, ಶಿವಪ್ಪ ಗಾಣಿಗೇರ, ನೀಲಪ್ಪ ತಲಬಟ್ಟಿ, ಬಸನಗೌಡ ಕರಿಗೌಡರ, ವಿನೋದ ಲಕ್ಕರ, ಸುಮಿತ್ರಾ ತಾಳಿ, ಗೀತಾ ಗೌಡರ, ಅಮೃತಗೌಡ ಗೌಡರ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ವಿದ್ಯುತ್ ಸ್ಪರ್ಶ: ಓರ್ವ ಸಾವು
ಲಕ್ಷ್ಮೇಶ್ವರ: ಸಮೀಪದ ಪುಟಗಾವಂ ಬಡ್ನಿ ಗ್ರಾಮದ ಲಕ್ಷ್ಮಣ ರಾಮಪ್ಪ ತಳವಾರ (22) ಎನ್ನುವನು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ. ತೋಟದ ಮನೆಯಲ್ಲಿರುವ ಪಂಪ್ಸೆಟ್ ಚಾಲೂ ಮಾಡಲು ಹೋದಾಗ ವಿದ್ಯುತ್ ಅವಘಡ ಸಂಭವಿಸಿ ಮೃತಪಟ್ಟಿರುವ ಘಟನೆ ಜರುಗಿದೆ. ಕಂದಾಯ ನಿರೀಕ್ಷಕ ಎಫ್.ಎನ್. ಹುಬ್ಬಳ್ಳಿ ಹಾಗೂ ಸಿಪಿಐ ಶ್ರೀನಿವಾಸ ಮೇಟಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ-ಓರ್ವ ಸಾವು: ಲಕ್ಷ್ಮೇಶ್ವರ: ಪಟ್ಟಣದ ಪಂಪ ವೃತ್ತದ ಹತ್ತಿರ ಶುಕ್ರವಾರ ರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಸಂಶಿ ಗ್ರಾಮದ ನಿಂಗಪ್ಪ ಮರಿಯಪ್ಪ ತಳ್ಳಪ್ಪನವರ(65) ಎನ್ನುವ ವ್ಯಕ್ತಿ ಮೃತಪಟ್ಟಿರುವ ಘಟನೆ ಜರುಗಿದೆ. ಶುಕ್ರವಾರ ರಾತ್ರಿ 9ರ ಸುಮಾರಿಗೆ ತುಂತುರು ಮಳೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಚಾಲಕನು ವಾಹನ ಸಮೇತ ಪರಾರಿಯಾಗಿದ್ದಾನೆ. ಗಾಯಾಳನ್ನು ಪಟ್ಟಣದ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಸಿಪಿಐ ಶ್ರೀನಿವಾಸ ಮೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.