ಶಾಂತಿ, ನೆಮ್ಮದಿ ಮೂಡಿಸಿದ ಬಸವಣ್ಣ
ಗಜೇಂದ್ರಗಡ: ಸಮಾಜದಲ್ಲಿನ ಜಾತಿಯ ಪೆಡಂಭೂತಕ್ಕೆ ತಿಲಾಂಜಲಿ ನೀಡಿ ವಚನ ಕಾಯಕ ತತ್ವದ ಮೂಲಕ ಸೌಹಾರ್ದ ಬದುಕಿಗೆ ಚಾಲನೆ ನೀಡಿ ಬದುಕಲ್ಲಿ ಶಾಂತಿ ನೆಮ್ಮದಿಯ ಬೀಜ ಮಂತ್ರ ಬಿತ್ತಿದ ಮಾನವತಾವಾದಿ ಬಸವಣ್ಣನವರ ಆದರ್ಶಗಳು ಸಾರ್ವಕಾಲಿಕ ಎಂದು ವೀರಶೈವ ಸಮಾಜದ ಅಧ್ಯಕ್ಷ ಬಿ.ಎಂ. ಸಜ್ಜನ ಹೇಳಿದರು.
ಬಸವ ಜಯಂತಿ ನಿಮಿತ್ತ ಇತ್ತೀಚೆಗೆ ಗಜೇಂದ್ರಗಡ-ಉಣಚಗೇರಿ ವೀರಶೈವ ಸಮಾಜದಿಂದ ಜಗಜ್ಯೋತಿ ಬಸವೇಶ್ವರರ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾರ್ಥಕ್ಕಾಗಿ ಬಾಳದೆ ಸಮಾಜದ ಒಳತಿಗಾಗಿ ಶ್ರಮಿಸಿ ಜಾತಿ-ಭೇದ ತೊರೆದು ಸಹಬಾಳ್ವೆಗೆ ಮುಂದಾಗಿ ಎಂದು ವಚನಗಳ ಸಾರದೊಂದಿಗೆ ವಿಶ್ವಕ್ಕೆ ಸಂದೇಶ ನೀಡಿ ವಿಶ್ವ ಗುರುವೆಂದೆಸಿಕೊಂಡ ಬಸವಣ್ಣನವರ ಸಾಮಾಜಿಕ ಕಳಕಳಿ ಅನನ್ಯ. ಈ ನಿಟ್ಟಿನಲ್ಲಿ ಕೀಳರಿಮೆ ತೊರೆದು ನಿಸ್ವಾರ್ಥ ಭಾವನೆಯ ಮಹತ್ವ ಅರಿತು ಸಮಾಜದಲ್ಲಿ ಸೌಹಾರ್ದ ಬದುಕು ನಡೆಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು.ಬಸವಣ್ಣನವರು ಭಕ್ತಿ-ಭಾವಕ್ಕೆ ಮಹತ್ವ ನೀಡಿ ಜ್ಞಾನ ವೈರಾಗ್ಯದ ಉದಯಕ್ಕೆ ಚಾಲನೆ ನೀಡಿ ಸಕಲ ಜೀವಾತ್ಮರಿಗೆ ಕಾಯಕ ಮಂತ್ರದ ಮಾಧ್ಯಮ ದಂಡದ ಸಂದೇಶವನ್ನು ಕೂಡಲಸಂಗಮನ ಗುರುಕುಲದಲ್ಲಿ ಅಧ್ಯಯನ ಮಾಡಿ ಸರ್ವರನ್ನು ಸುಜ್ಞಾನಿಯನ್ನಾಗಿಸಲು ಶ್ರಮಿಸಿದ ಬಸವಣ್ಣನವರು ಮಹಾನ್ ಚೇತನರಾಗಿದ್ದಾರೆ ಎಂದರು. ಎಸ್.ಎಸ್. ಪಟ್ಟೇದ, ವೀರೇಶ ನಂದಿಹಾಳ, ಶರಣಪ್ಪ ರೇವಡಿ, ಪ್ರಭು ಚವಡಿ, ಪ್ರಕಾಶ ಜಾಲಿಹಾಳ, ಮುತ್ತಣ್ಣ ಚಟ್ಟೇರ, ಚನ್ನಪ್ಪ ಮ್ಯಾಗೇರಿ, ಅಂದಪ್ಪ ಸಂಕನೂರ ಇತರರು ಪಾಲ್ಗೊಂಡಿದ್ದರು.