ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

10, 11ರಂದು ಮೇ ಸಾಹಿತ್ಯ ಮೇಳ

Mainashree
Updated On : 7 May 2014, 9:41 am

ಕನ್ನಡಪ್ರಭ ವಾರ್ತೆ, ಗದಗ, ಮೇ 6
ಶ್ರಮಿಕರ ತಿಂಗಳೆಂದೇ ಪರಿಗಣಿಸಲಾಗಿರುವ ಮೇ ತಿಂಗಳಲ್ಲಿ ಗದಗನ ಲಡಾಯಿ ಪ್ರಕಾಶನದಿಂದ ಮೇ ಸಾಹಿತ್ಯ ಮೇಳವನ್ನು ಮೇ 10, 11ರಂದು ಹಾವೇರಿ ನಗರದ ಗೆಳೆಯರ ಬಳಗದ ಮಣಿಭಾಯಿ ಲೋಡಾಯ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಲಡಾಯಿ ಪ್ರಕಾಶನದ ಮಾಲೀಕ, ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮೇಳದ ಕುರಿತು ಮಾಹಿತಿ ನೀಡಿದರು. ಕೌರವ ಪತ್ರಿಕೆ, ಚಿತ್ತಾರ ಕಲಾ ಬಳಗ ಧಾರವಾಡ, ಕನ್ನಡ ಸಂಸ್ಕೃತಿ ಇಲಾಖೆ, ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ, ಕರ್ನಾಟಕ ಜನಸಾಹಿತ್ಯ ಸಂಘಟನೆ ಸಹಭಾಗಿತ್ವದಲ್ಲಿ ಮೇಳ ಆಯೋಜಿಸಲಾಗಿದೆ. ಮೇ 10ರ ಬೆಳಗ್ಗೆ 10.30ಕ್ಕೆ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೈದ್ರಾಬಾದ್‌ನ ಡಾ.ಕೆ. ಶಿವಾರೆಡ್ಡಿ ಉದ್ಘಾಟಿಸುವರು. ಡಾ.ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸುವರು. ಡಾ.ಎಚ್.ಎಸ್. ಅನುಪಮಾ ಪ್ರಾಸ್ತಾವಿಕ ಮಾತುಗಳನ್ನಾಡುವರು. ಮಧ್ಯಾಹ್ನ 12ಕ್ಕೆ ಪುಸ್ತಕ ಬಿಡುಗಡೆ ನಡೆಯಲಿದ್ದು, ಡಾ.ನಾ. ಡಿಸೋಜಾ ಪುಸ್ತಕ ಬಿಡುಗಡೆಗೊಳಿಸುವರು. ಡಾ. ಶೈಲಜಾ ಹಿರೇಮಠ, ಡಾ. ಅಪ್ಪಗೆರೆ ಸೋಮಶೇಖರ, ಡಾ. ಸುರೇಶ ನಾಗಲಮಡಿಕೆ ಪುಸ್ತಕಗಳ ಕುರಿತು ಮಾತನಾಡುವರು. ಜ.ಹೊ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸುವರು. ನಗ್ನಮುನಿ ಡಾ.ಟಿ.ಆರ್. ಚಂದ್ರಶೇಖರ, ಪ್ರೊ. ಬಿ. ಗಂಗಾಧರಮೂರ್ತಿ, ರಾಹು, ಬಸವರಾಜ ಹೂಗಾರ, ಚಂದ್ರಕಾಂತ ಪೋಕಳೆ, ಡಾ. ಸಿದ್ಧರಾಮ ಕಾರಣಿಕ, ಡಾ. ಜೆ.ಪಿ. ದೊಡ್ಡಮನಿ, ಡಾ. ಐ.ಜೆ. ಮ್ಯಾಗೇರ, ಡಾ. ಎಚ್.ಎಸ್. ಅನುಪಮಾ ಇರುವರು.
ನಾಟಕ ಪ್ರದರ್ಶನ: ಮಧ್ಯಾಹ್ನ 3ಕ್ಕೆ 'ಅಸಮಾನ ಕರ್ನಾಟಕ ಪ್ರತಿರೋಧದ ನೆಲೆಗಳು' ವಿಷಯ ಕುರಿತು ಚರ್ಚೆ ನಡೆಯಲಿದ್ದು, ಡಾ. ಟಿ.ಆರ್. ಚಂದ್ರಶೇಖರ ಆಶಯ ನುಡಿಗಳನ್ನಾಡುವರು. 'ತಳಸಮುದಾಯಗಳ ನೆಲೆ' ಕುರಿತು ಡಾ. ಚಂದ್ರ ಪೂಜಾರಿ, 'ವರ್ಗಮೂಲ ಚಳವಳಿ' ಕುರಿತು ಪ್ರೊ. ವಿ.ಎಸ್. ಶ್ರೀಧರ, 'ಮಹಿಳಾ ನೆಲೆ' ಕುರಿತು ಡಾ. ಮೀನಾಕ್ಷಿ ಬಾಳಿ, 'ಪತ್ರಿಕಾ ನೆಲೆ' ಕುರಿತು ದಿನೇಶ ಅಮಿನಮಟ್ಟು ಮಾತನಾಡುವರು. ಸನತಕುಮಾರ ಬೆಳಗಲಿ ಅಧ್ಯಕ್ಷತೆ ವಹಿಸುವರು. ಡಾ. ಎಚ್.ವಿ. ವಾಸು, ನಾರಾಯಣ ಬೆಳಕುರ್ಕಿ, ಪದ್ಮಶ್ರೀ ಟಿ., ಪ್ರತಿಕ್ರಿಯಿಸುವರು. ಸಂಜೆ 6.15ಕ್ಕೆ 'ನನ್ನ ಬದುಕು ನನ್ನ ಕವಿತೆ' ಕುರಿತು ದು. ಸರಸ್ವತಿ, ಎಚ್.ಎನ್. ಆರತಿ ನಡೆಸುವರು. ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ಲ ಚಾಲನೆ ನೀಡುವರು. ಶಶಿಕಲಾ ಹುಡೇದ ಅಧ್ಯಕ್ಷತೆ ವಹಿಸುವರು. ಎ. ರೇವತಿಯವರ ಹಿಜ್ರಾ ಒಬ್ಬಳ ಆತ್ಮಕತೆ ಆಧಾರಿತ ಕನ್ನಡದ ಪ್ರಥಮ ನಾಟಕ 'ಬದುಕು ಬಯಲು' ಪ್ರದರ್ಶನಗೊಳ್ಳುವುದು.
ಮೇ 11ರ ಬೆಳಗ್ಗೆ 9ಕ್ಕೆ ಕವಿಯೊಂದಿಗೆ ಸಂವಾದ ನಡೆಯಲಿದೆ. ಹೈದ್ರಾಬಾದ್‌ನ ನಗ್ನಮುನಿ, ಡಾ. ಬಂಜಗೆರೆ ಜಯಪ್ರಕಾಶ, ಸುಜ್ಞಾನಮೂರ್ತಿ, ಡಾ. ದೇವೇಂದ್ರಪ್ಪ ಜಾಜಿ, ಡಾ. ವೆಂಕಟಗಿರಿ ದಳವಾಯಿ, ಎಂ.ಕೆ. ಕಲ್ಲಜ್ಜನವರ, ಶಿವಕುಮಾರ ಕಂಪ್ಲಿ, ಕೆ. ಖಾದರ್ ಭಾಷಾ ಸಿಂಧನೂರ, ಸೃಜನ್, ಡಾ. ಜಗನ್ನಾಥ ಗೆನಣ್ಣನವರ ಭಾಗವಹಿಸುವರು. ಬೆಳಗ್ಗೆ 10.30ಕ್ಕೆ 'ವರ್ತಮಾನದ ಸವಾಲುಗಳು-ಭವಿಷ್ಯದ ಕರ್ನಾಟಕ' ವಿಷಯ ಕುರಿತು ಚರ್ಚೆ ನಡೆಯಲಿದೆ. ಡಾ. ವಿ. ಲಕ್ಷ್ಮೀನಾರಾಯಣ ಆಶಯ ನುಡಿಗಳನ್ನಾಡುವರು. ಡಾ. ಮುಜಾಫರ್ ಅಸಾದಿ ಮಾತನಾಡುವರು. ಪ್ರೊ. ಬಿ. ಗಂಗಾಧರಮೂರ್ತಿ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 12.15ಕ್ಕೆ 'ಜನಸಾಹಿತ್ಯದ ಹೊಳಹುಗಳು' ಕಾರ್ಯಕ್ರಮ ನಡೆಯಲಿದ್ದು, ಡಾ. ರಹಮತ್ ತರೀಕೆರೆ ಆಶಯ ನುಡಿಗಳನ್ನಾಡುವರು. ಕಾವ್ಯದ ಕುರಿತು ಶಂಕರ ಕಟಗಿ, ಕತೆ-ಕಾದಂಬರಿ ಕುರಿತು ಸರ್ಜಾ ಶಂಕರ ಹರಳೀಮಠ, ವಿಚಾರ ಸಾಹಿತ್ಯದ ಕುರಿತು ಡಾ. ರಂಗನಾಥ ಕಂಟನಕುಂಟೆ ಮಾತನಾಡುವರು. ಡಾ. ಬಿ.ಎನ್. ಸುಮಿತ್ರಾಬಾಯಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3ಕ್ಕೆ ನಡೆಯುವ ಕವಿಗೋಷ್ಠಿಗೆ ಪ್ರೊ. ಅಶೋಕ ಶೆಟ್ಟರ ಚಾಲನೆ ನೀಡುವರು. ಕೆ.ಪಿ. ಸುರೇಶ ಅಧ್ಯಕ್ಷತೆ ವಹಿಸುವರು. ಮೇ 11ರ ಸಂಜೆ 5ಕ್ಕೆ ನಡೆಯುವ ಸಾಹಿತ್ಯ ಮೇಳದ ಸಮಾರೋಪದಲ್ಲಿ ವಿಭಾ ಸಾಹಿತ್ಯ ಪ್ರಶಸ್ತಿ ವಿತರಣೆ ನಡೆಯಲಿದೆ. ಈ ಸಾಲಿನ ಪ್ರಶಸ್ತಿಯು ಕೆ.ಪಿ. ಮೃತ್ಯುಂಜಯ ಅವರ 'ನಿನ್ನ ಶಬ್ದ ನನ್ನಲಿ ಬಂದು' ಎಂಬ ಹಸ್ತಪ್ರತಿಗೆ ಸಂದಿದೆ. ಪ್ರಶಸ್ತಿಯು ರು.5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ ಎಂದರು. ಡಿ.ವಿ. ಗವಾನಿ, ಕಳಕೇಶ ಗುಡ್ಲಾನೂರು, ಡಾ. ರಾಮಚಂದ್ರ ಹಂಸನೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement