ಗಡಾದ ಸಂತ್ಯಾಗ ಎತ್ತುಗಳ ಖರೀದಿ ಜೋರು...
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 6
ಗಡಾದ ಸಂತ್ಯಾಗ ಎತ್ತುಗಳ ಮಾರಾಟ ಬಲು ಜೋರು, ಒಳ್ಳೆಯ ರಾಸುಗಳಿಗೆ ಡಿಮ್ಯಾಂ ಡೋ, ಡಿಮ್ಯಾಂಡ್. ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಸುರಿದ ಮುಂಗಾರು ಹಂಗಾಮಿನ ಮಳೆಯಿಂದಾಗಿ ಕೃಷಿ ಚಟುವಟಿಕೆ ಜೋರಾಗಿದೆ. ಕೃಷಿಗೆ ಅವಶ್ಯವಿರುವ ಜಾನುವಾರುಗಳ ವಹಿವಾಟು ಮಂಗಳವಾರ ಸಂತೆಯಲ್ಲಿ ಭರ್ಜರಿಯಾಗಿ ನಡೆಯಿತು.
ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಸುರಿದ ಮುಂಗಾರು ಹಂಗಾಮಿನ ಮಳೆ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಮುಂದೆಯೂ ಉತ್ತಮ ಮಳೆ ಸುರಿಯುವ ಆಶಾಭಾವನೆಯಿಂದ ರೈತರು ಎತ್ತುಗಳನ್ನು ಹೆಚ್ಚಿನ ಬೆಲೆಯನ್ನಾದರೂ ನೀಡಿ ಖರೀದಿಸುತ್ತಿದ್ದಾರೆ.
ಬೆಲೆ ಲೆಕ್ಕಿಸದೆ ಖರೀದಿ ಜೋರು: ಹಿಂದಿನ ಸಂತೆಯಲ್ಲಿ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರೂ ಕೊಳ್ಳುವವರಿಲ್ಲದೆ ಜೋಡೆತ್ತುಗಳ ಬೆಲೆ ಕಡಿಮೆಯಾಗಿತ್ತು. ಪ್ರಸ್ತುತ ಮಳೆ ಆರಂಭವಾಗಿದ್ದರಿಂದ ಬಿತ್ತನೆ ಪೂರ್ವದಲ್ಲಿ ಹೊಲ ಉಳಿಮೆ ಮಾಡಲು ಎತ್ತುಗಳು ಆವಶ್ಯಕ. ಸಹಜವಾಗಿ ಈ ವಾರ ಸಂತೆಯಲ್ಲಿ ಸೀಮೆ ಎತ್ತು ಮತ್ತು ಜವಾರಿ ಎತ್ತುಗಳು ರು.25ರಿಂದ 60 ಸಾವಿರದವರೆಗೂ ಮಾರಾಟವಾಗಿವೆ. ಟ್ರ್ಯಾಕ್ಟರ್ ಇನ್ನಿತರ ಯಂತ್ರಗಳನ್ನು ಅವಲಂಬಿಸಿದ ಕೃಷಿಕರಿಗೂ ಬಿತ್ತನೆ, ಕೃಷಿ ಚಟುವಟಿಕೆಗೆ ಎತ್ತುಗಳು ತೀರಾ ಆವಶ್ಯಕ. ಹಾಗಾಗಿ ಬೆಲೆ ಲೆಕ್ಕಿಸದೆ ರೈತರು ಜಾನುವಾರು ಖರೀದಿಗೆ ಮುಂದಾದರು.
ಕೂಲಿ ಕಾರ್ಮಿಕರು ಸ್ವಗ್ರಾಮದತ್ತ: ಬರಗಾಲದ ಬವಣೆಗೆ ಸಿಲುಕಿ ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲದೆ ಗೋವಾ, ಮಂಗಳೂರ ಇತರ ಕಡೆ ಕೆಲಸ ಅರಿಸಿ ಗುಳೆಹೊಗಿದ್ದ ಕೃಷಿ ಕೂಲಿ ಕಾರ್ಮಿಕರು ಇದೀಗ ಸ್ವಗ್ರಾಮದತ್ತ ಮುಖ ಮಾಡುತ್ತಿದ್ದಾರೆ. ಈ ಬಾರಿ ಮುಂಗಾರು ಹಂಗಾಮು ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುವುದೆನ್ನುವ ಹವಾಮಾನ ಇಲಾಖೆಯ ವರದಿ ರೈತಾಪಿ ವರ್ಗದಲ್ಲಿ ನಿರಾಳ ಭಾವನೆ ಮೂಡಿದೆ.
ಹೊಲಗಳು ಬಿತ್ತನೆಗೆ ಸಿದ್ಧ: ಸದಾ ಬರಗಾಲ ಬವಣೆಗೆ ತುತ್ತಾಗಿ ಕಷ್ಟ ಅನುಭವಿಸಿದ ಗಜೇಂದ್ರಗಡ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಗೋಗೇರಿ, ಮಾಟರಂಗಿ, ರಾಮಾಪುರ, ಪುರ್ತಗೇರಿ, ಕೊಡಗಾನೂರು, ವೀರಾಪುರ, ಚಿಲ್ಝರಿ, ಕಾಲಕಾಲೇಶ್ವರ, ಬೈರಾಪುರ, ಜಿಗೇರಿ, ರಾಜೂರು, ದಿಂಡೂರು, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ, ನಿಡಗುಂದಿ, ಸೂಡಿ, ಮತ್ತಿತರ ಗ್ರಾಮಗಳ ಅನ್ನದಾತರಿಗೆ ಮಳೆ ಭರವಸೆ ಚಿಗುರಿಸಿತು. ಮಳೆಯ ನೀರಿಕ್ಷೆಯಿಂದ ಹೊಲಗಳನ್ನು ಹರಗಿ ಹದಗೊಳಿಸಿ ಬಿತ್ತನೆಗೆ ಸಿದ್ಧಪಡಿಸಿರುವರು. ಮಳೆಯಿಂದ ರೈತರು ಹೊಲಗಳತ್ತ ಮುಖ ಮಾಡಿದ್ದಾರೆ. ಚಕ್ಕಡಿ, ಜೋಡೆತ್ತಿನ ಸಹಿತ ಬಿತ್ತನೆ ಕೂರ್ಗಿ, ಬಿತ್ತುವ ಬೀಜ, ಗೊಬ್ಬರ ಸಹಿತ ಬಿತ್ತನೆಗೆ ಪೂರ್ವ ತಯಾರಿ ನಡೆಸಿದ್ದಾರೆ.
ಡಿ.ಜಿ. ಮೋಮಿನ್