ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೇನಾಮಿ ಹೆಸರಲ್ಲಿ ಆಸ್ತಿ ಹಂಚಿಕೆ: ಆರೋಪ

Mainashree
Updated On : 7 May 2014, 9:42 am

ಶಿರಹಟ್ಟಿ: ಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಿ ಪಟ್ಟಾ ವಿತರಿಸಬೇಕೆಂಬ ಸರ್ಕಾರದ ನಿಯಮವಿದ್ದರೂ ತಾಲೂಕಿನ ಕೊಂಚಿಗೇರಿ ಗ್ರಾಪಂ ವ್ಯಾಪ್ತಿಯ ಬಿಜ್ಜೂರ ಗ್ರಾಮದಲ್ಲಿ ಬೇನಾಮಿ ಹೆಸರಿನಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಮುಖಂಡ ಎಸ್.ಎಚ್. ನದಾಫ್ ತಾಪಂ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿವೇಶನ ಹಂಚಿಕೆಯಾಗಿರುವ ಕುರಿತು ಅನೇಕ ಬಾರಿ ತಕರಾರು ಅರ್ಜಿ ಸಲ್ಲಿಸಿದ್ದರೂ ಗ್ರಾಪಂ ಅಧಿಕಾರಿ ಇದನ್ನು ಗಮನಿಸದೇ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಈ ಕೆಲಸಕ್ಕೆ ಮುಂದಾಗಿದ್ದಾರೆ. ತಾಪಂನಲ್ಲಿ ಜಿಪಿಎಸ್ ಮಾಡುವ ಮೊದಲೇ ತಕರಾರು ಅರ್ಜಿ ನೀಡಿದರೂ ಅಧಿಕಾರಿಗಳು ಗಮನಿಸದೇ ಕೆಲ ಫಲಾನುಭವಿಗಳಿಗೆ ಚೆಕ್ ನೀಡಿ ತಪ್ಪು ಮಾಡಿದ್ದಾರೆ ಎಂದು ದೂರಿದರು.
ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ಹಂತದಲ್ಲಿಯೂ ಅಧಿಕಾರಿಗಳು ಯಾರದೋ ಪ್ರಭಾವಕ್ಕೆ ಒಳಗಾಗಿ ಕಾನೂನನ್ನು ಗಾಳಿಗೆ ತೂರಿ ಬೇಜವಾಬ್ದಾರಿತನದ ವರ್ತನೆ ಮಾಡುತ್ತಿದ್ದಾರೆ. 110 ಫಲಾನುಭವಿಗಳ ಯಾದಿಯನ್ನು ಜಾಗ್ರತ ಸಮಿತಿಯಲ್ಲಿ ರದ್ದುಪಡಿಸಿದ್ದು, ನಿವೇಶನ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕೆಂದು ತಿಳಿಸಿದ್ದರೂ ಗಣನೆಗೆ ತೆಗೆದುಕೊಳ್ಳದೆ ಚೆಕ್ ನೀಡಿದ್ದು, ಕಾನೂನುಬಾಹೀರ ಕ್ರಮವಾಗಿದೆ ಎಂದು ಆರೋಪಿಸಿದರು. ಕಳೆದ ಒಂದು ವಾರದ ಹಿಂದೆ ಲೋಕಾಯುಕ್ತ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಮತ್ತು ತಾಲೂಕು ಪಂಚಾಯಿತಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ತನಿಖೆ ಪ್ರಾರಂಭವಿದ್ದರೂ ಉಳ್ಳವರಿಗೆ ಮತ್ತು ಸದಸ್ಯರ ಸಂಬಂಧಿಗಳಿಗೆ ಮತ್ತು ಬೇನಾಮಿ ಹೆಸರಿನಲ್ಲಿ ನಿವೇಶನ ಹಂಚಿಕೆ ಮಾಡಿ ತರಾತುರಿಯಲ್ಲಿ ಚೆಕ್ ನೀಡಿ ಸರ್ಕಾರದ ಹಣ ಲೂಟಿ ಮಾಡುತ್ತಿರುವ ಅಧಿಕಾರಿಗಳ ಕ್ರಮಕ್ಕೆ ಹರಿಹಾಯ್ದರು.
ಕೆಲ ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಪ್ರಾರಂಭಿಸಿದ್ದು ಕೂಡಲೇ ಅದನ್ನು ತಡೆಯುವಂತೆ ಒತ್ತಾಯಿಸಿದ ಅವರು, ವಿಳಂಬ ನೀತಿ ಅನುಸರಿಸಿದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಚ.ಚ. ಹಸವಿಮಠ, ವಿ.ಎಸ್. ಹಸವಿಮಠ, ಚ.ಚ. ಹಿರೇಮಠ, ಪೀರಸಾಬ, ಫಕೀರಪ್ಪ ಹರಿಜನ, ಈರಯ್ಯ ಹಸವಿಮಠ, ಮರಿಯಪ್ಪ ಹರಿಜನ, ಅಂದಾನೆಪ್ಪ ಜಕ್ಕಲಿ, ಗಂಗಯ್ಯ ಇಚ್ಚಂಗಿಮಠ, ಹೋನೂರಸಾಬ ನದಾಫ್, ರಮಜಾನಸಾಬ ಬಟ್ಟೂರ, ಎಂ.ಸಿ. ಮತ್ತೂರ, ರಾಜೇಸಾಬ ನದಾಫ್, ಹನಮಪ್ಪ ಹರಿಜನ, ನಿಂಗಪ್ಪ ಮೋರೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement