ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

26 ದಿನಗೂಲಿ ಕಾರ್ಮಿಕರಿಗೆ ಪಗಾರ ಕೊಡ್ರಿ

Mainashree
Updated On : 8 May 2014, 10:43 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 7
ಪುರಸಭೆಯಲ್ಲಿ ಅನೇಕ ತಿಂಗಳಿನಿಂದ ಕೆಲಸ ಮಾಡುತ್ತಿರುವ 26 ದಿನಗೂಲಿ ಕಾರ್ಮಿಕರಿಗೆ ಈ ಹಿಂದಿನ ಮುಖ್ಯಾಧಿಕಾರಿ 2 ತಿಂಗಳಿನ ಪಗಾರ ಕೊಟ್ಟಿದ್ದರು. ನೀವೂ 2 ತಿಂಗಳ ಪಗಾರ ಕೊಟ್ಟು, ಇದೀಗ ಕೊಡಲು ಬರಲ್ಲ ಎಂದು ಅನೇಕ ತಿಂಗಳಿನ ಪಗಾರ ನೀಡಿಲ್ಲ. ಅವ್ರು ಹೆಂಗ್ ಜೀವ್ನಾ ಮಾಡಬೇಕು, ಅವರಿಗೆ ಪಗಾರ ಕೊಡ್ರಿ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ಪ್ರಭು ಅಬ್ಬಿಗೇರಿ ಹಾಗೂ ಸದಸ್ಯ ರಿಹಾನಾಬೇಗಂ ಕೆಲೂರ ಅವರು ವೀರೇಶ ಸಜ್ಜನರ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಮುಂಡರಗಿ ಪುರಸಭೆಯ ಸಭಾಭವನದಲ್ಲಿ ಜರುಗಿದ ಪುರಸಭೆ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಮಾತನಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ರಮೇಶ ಸುಣಗಾರ ಪುರಸಭೆ ವ್ಯಾಪ್ತಿಯ ಜನಸಂಖ್ಯೆ ಆಧಾರದ ಮೇಲೆ ಎಷ್ಟು ಕಾರ್ಮಿಕರು ಬೇಕು, ಅಷ್ಟು ಕಾರ್ಮಿಕರು ಇದ್ದಾರೆ. ಹೆಚ್ಚುವರಿಯಾಗಿರುವ 26 ಕಾರ್ಮಿಕರ ವೇತನ ಕೊಡಲು ನಮಗೆ ಅಧಿಕಾರವಿಲ್ಲ. ಅವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಅಲ್ಪಸ್ವಲ್ಪ ನೀಡಲಾಗಿದೆ. ಇದೀಗ ಅವರು ಕೆಲಸಕ್ಕೆ ಅವಶ್ಯವಿಲ್ಲವೆಂದರೂ ಒತ್ತಾಯ ಪೂರ್ವಕವಾಗಿ ಬರುತ್ತಿದ್ದಾರೆ ಎಂದರು.
ಸಾಕಷ್ಟು ಕಾರ್ಮಿಕರಿದ್ದರೂ ಚರಂಡಿಗಳು ತುಂಬಿ ಗಬ್ಬು ವಾಸನೆ ಬೀರುತ್ತಿವೆಯಲ್ಲ ಎಂದು ಸದಸ್ಯ ಪರುಶುರಾಮ ಕರಡಿಕೊಳ್ಳ ಪ್ರಶ್ನಿಸಿದರು. ಈಗಿರುವ ಕಾರ್ಮಿಕರು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ 26 ಕಾರ್ಮಿಕರ ಗುಂಪಿನಲ್ಲಿ ಚೆನ್ನಾಗಿ ಕೆಲಸ ಮಾಡುವವರನ್ನು ಸೇರಿಸಿಕೊಳ್ಳಿ ಎಂದರು. ಅದಕ್ಕೆ ಸದಸ್ಯ ರಾಘವೇಂದ್ರ ಕುರಿಯವರ ಸಹ ಒಪ್ಪಿಗೆ ಸೂಚಿಸಿದರು.
ಬಯೋಗ್ಯಾಸ್ ಬೇಡ: ಮುಂಡರಗಿಗೆ ಬಂದಾಗ ಪ್ರಾರಂಭದಲ್ಲಿ ಪ್ರತಿದಿನ ಬೆಳಗ್ಗೆ 5.30ಕ್ಕೆ ಎಲ್ಲ ವಾರ್ಡ್ಗಳಿಗೂ ಭೇಟಿ ನೀಡಿ ವೀಕ್ಷಿಸುತ್ತಿದ್ದರು. ಇದೀಗ ವಾರ್ಡ್ಗಳತ್ತ ಸುಳಿಯುತ್ತಿಲ್ಲ. ವಾರ್ಡ್ 3ರಲ್ಲಿ ಚರಂಡಿ ತುಂಬಿವೆ. ಈ ಕುರಿತು ಏನು ಕ್ರಮ ಕೈಗೊಂಡಿದ್ದೀರಿ ಎಂದು ಬಸವರಾಜ ರಾಮೇನಹಳ್ಳಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತ್ಯಾಜ್ಯ ವಸ್ತು ಸಂಗ್ರಹಾಲಯಕ್ಕೆ ಹಾಗೂ ಬಯೋಗ್ಯಾಸ್ಗಾಗಿ ಸರ್ಕಾರ ಅನುದಾನ ಕಾಯ್ದಿರಿಸಿದೆ ಎಂದು ಮುಖ್ಯಾಧಿಕಾರಿ ಹೇಳುತ್ತಿದ್ದಂತೆ ನಮಗೆ ಬಯೋಗ್ಯಾಸ್ ಬೇಡ, ನಮ್ಮದು ರೈತಾಪಿ ಜನ ಇರುವ ಪಟ್ಟಣ, ಅದೇ ಹಣದಲ್ಲಿ ರೈತರ ಕೃಷಿಗಾಗಿ ಬೇಕಾಗುವ ಸಾಮಗ್ರಿ ನೀಡಿರಿ ಎಂದು ವಿ.ಪ. ನಾಯಕ ಪ್ರಭು ಅಬ್ಬಿಗೇರಿ ಒತ್ತಾಯಿಸಿದರು.
ಹೆಚ್ಚುವರಿ ಅನುದಾನ ಪತ್ರ ಬರೆಯಿರಿ: 2008-09, 2009-10, 2010-11, 2011-12ರ ಅವಧಿಯಲ್ಲಿನ ಎಸ್ಎಫ್ಸಿ ಯೋಜನೆಯ ಕಾಮಗಾರಿಗಳು ಪೂರ್ಣವಾಗಿಲ್ಲ. ಆದರೆ, ಅದಕ್ಕಾಗಿ ಕಾಯ್ದಿರಿಸಿದ ರು. 1.82 ಕೋಟಿ ಅನುದಾನ ಮಾತ್ರ ಪುರಸಭೆಯಲ್ಲಿ ಉಳಿದಿಲ್ಲ. ಆದ್ದರಿಂದ ತಾವು ಒಪ್ಪಿಗೆ ನೀಡುವುದಾದರೆ ಇದೀಗ ಬಂದಿರುವ ಅನುದಾನದಲ್ಲಿ ರು. 1.82 ಕೋಟಿ ಈ ಕಾಮಗಾರಿಗಳಿಗೆ ಬಿಡುಗಡೆ ಮಾಡುವುದಕ್ಕೆ ಸಭೆಯಲ್ಲಿ ಪ್ರಸ್ತಾಪಿಸಿದರು. ಇದೀಗ ಪ್ರಸ್ತುತ ಅವಧಿಗೆ ಬಂದ ಅನುದಾನ ನೀಡಲು ಒಪ್ಪದ ಸದಸ್ಯರು ಸರ್ಕಾರಕ್ಕೆ ಹೆಚ್ಚುವರಿಯಾಗಿ ಅನುದಾನ ನೀಡಲು ಪತ್ರ ಬರೆಯುವಂತೆ ತಿಳಿಸಿದರು. ಪುರಸಭೆ ಅಧ್ಯಕ್ಷ ಭಾರತಿ ಹಕ್ಕಿ ಸಭೆ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಸೋಮನಗೌಡ ಗೌಡ್ರ, ಫಕ್ರುದ್ದೀನ ಹಾರೋಗೇರಿ, ಚಂದ್ರಶೇಖರ ಬಡಿಗೇರ, ಕೊಟ್ರಮ್ಮ ಇಟಗಿ, ದಾನೇಶ್ವರಿ ಭಜಂತ್ರಿ, ಸುರೇಶ ಮಾಳೆಕೊಪ್ಪ, ಬಸವರಾಜ ಗಣಾಚಾರಿ, ಶಾಂತವ್ವ ಬಳ್ಳಾರಿ, ಬಸವರಾಜ ನರೇಗಲ್, ಶಂಕರಗೌಡ ಪಾಟೀಲ, ರೇಖಾ ದೇಸಾಯಿ, ಪ್ರೇಮವ್ವ ಗಣದಿನ್ನಿ, ಹೇಮಾವತಿ ಅಬ್ಬಿಗೇರಿ, ಲಿಂಗರಾಜಗೌಡ ಪಾಟೀಲ ಸೇರಿದಂತೆ 23 ಸದಸ್ಯರೂ ಉಪಸ್ಥಿತರಿದ್ದರು.  ಪ್ರಾರಂಭದಲ್ಲಿ ಈಚೆಗೆ ನಿಧನರಾದ ಮುಂಡರಗಿಯ ಸ್ವಾತಂತ್ರ್ಯಯೋಧ ಮಲ್ಲಿಕಾರ್ಜುನಯ್ಯ ಸಾಲಿಮಠ ಅವರಿಗೆ 2 ನಿಮಿಷ ಮೌನಾಚರಿಸಿದರು. ನಂತರ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ 23 ಸದಸ್ಯರೂ ಪ್ರಮಾಣವಚನ ಸ್ವೀಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement