ಅಪ್ರಾಪ್ತ ಪ್ರೇಮ: ಬಾಲಕಿ ಆತ್ಮಹತ್ಯೆ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 7
ಪ್ರೇಮ ಪ್ರಕರಣದಲ್ಲಿ ಮಾನಕ್ಕಂಜಿದ ಯುವತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಘಟನೆ ಮೂರು ದಿನಗಳ ಹಿಂದೆಯೇ ನಡೆದಿದ್ದರೂ ಬುಧವಾರ ಬಳ್ಳಾರಿಯ ವಿಮ್ಸ್ನಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
ಮೃತಳನ್ನು ಲಕ್ಷ್ಮೀ ನಾಯಕ್ (16) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅಚ್ಚರಿ ಎಂದರೆ ಪ್ರೇಮ ಪ್ರಕರಣವೇ ಆಗಿದ್ದರೂ ಬಲಿಯಾದ ಹಾಗೂ ಆರೋಪಿ ಇಬ್ಬರೂ ಅಪ್ರಾಪ್ತರೇ ಇದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಹಲವು ಮುಖ: ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ ಕುಟುಂಬಸ್ಥರು ಮಾಡುವ ಆರೋಪದಂತೆ ಯುವಕನೇ ಪ್ರೇಮಕ್ಕೆ ಒತ್ತಾಯಿಸಿ, ಒಪ್ಪದಿದ್ದಾಗ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾನೆ ಎನ್ನುತ್ತಾರೆ. ಆದರೆ, ಆರೋಪಿ ಬೆಟ್ಟದಪ್ಪ ಹೇಳುವ ಪ್ರಕಾರ, ನಾನು ಅವಳನ್ನು ಪ್ರೀತಿಸುತ್ತಿದುದು ನಿಜ. ಮನೆಯಲ್ಲಿ ಮಾತನಾಡುತ್ತಾ ಕುಳಿತಾಗ ಅವರ ಸಹೋದರ ಬಂದಿದ್ದರಿಂದ ಹೆದರಿ ಅಡುಗೆ ಮನೆಗೆ ಓಡಿ ಹೋಗಿ, ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಹೀಗಾಗಿ, ಈ ಘಟನೆ ಕುರಿತು ನಾನಾ ರೀತಿಯ ಆರೋಪಗಳು ಕೇಳಿ ಬರುತ್ತಿವೆ.
ಗ್ರಾಮಸ್ಥರು ಹೇಳುವ ಪ್ರಕಾರ, ಹುಡುಗಿಗೆ ಹುಡುಗನ ಬಗ್ಗೆ ಇಷ್ಟ ಇರಲಿಲ್ಲ. ಆದರೂ ಆಗಾಗ ಮನೆಗೆ ಹೋಗಿ ಕಾಡಿಸುತ್ತಿದ್ದ. ಕಾಟ ತಾಳದೆ ಆಕೆ ನನ್ನ ಮಾನ ಹೋಗುತ್ತದೆ ಎಂದು ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಮೂರು ದಿನದ ಹಿಂದೆ: ಮೂರು ದಿನದ ಹಿಂದೆ ಮನೆಯೊಳಗೆ ಬೆಂಕಿ ಹಚ್ಚಿಕೊಂಡು ಅರಚಾಡುತ್ತಿರುವ ವೇಳೆ ಮನೆ ಹಾಗೂ ಸುತ್ತಲಿನವರು ಹೋಗಿ ಬಾಗಿಲು ತೆರೆದಾಗ ಬಹುತೇಕ ಸುಟ್ಟು, ಅರೆಪ್ರಜ್ಞಾವಸ್ಥೆಯಲ್ಲಿದ್ದ ಲಕ್ಷ್ಮೀಯನ್ನು ಕೂಡಲೇ ಬಳ್ಳಾರಿ ವಿಮ್ಸ್ಗೆ ಸಾಗಿಸಲಾಗಿದೆ. ಅಲ್ಲಿ ಮೂರು ದಿನಗಳ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಬುಧವಾರ ಯುವತಿ ಕೊನೆಯುಸಿರೆಳೆದಿದ್ದಾಳೆ.
ಗ್ರಾಮಕ್ಕೆ ಮೃತದೇಹ ತಂದಾಗ ಗ್ರಾಮ ಶೋಕಸಾಗರದಲ್ಲಿ ಮುಳುಗಿತ್ತು. ಬಾಲಕಿಯ ಕುರಿತು ಮಮ್ಮಲ ಮರುಗಿದರು. ಎಂಥ ಒಳ್ಳೆ ಹುಡುಗಿ ಎಂಥ ಕೆಲಸ ಮಾಡಿಕೊಂಡಳು ಎಂದು ಆಡಿಕೊಳ್ಳುತ್ತಿದ್ದರು. ತನಗೆ ಇಷ್ಟವಿಲ್ಲದಿದ್ದರೆ ಮನೆಯವರ ಮುಂದೆ ಹೇಳಿ ಹುಡುಗನ ತದಿಕಿಸಬೇಕಿತ್ತು. ಹಿಂಗ ಮಾಡಿದರೆ ಏನು ಪ್ರಯೋಜನ ಎನ್ನುವ ಮಾತುಗಳು ಕೇಳಿ ಬಂದವು. ಕೆಲವರ ಪ್ರಕಾರ, ಆಕೆಯೂ ಅವನನ್ನು ಪ್ರೀತಿಸುತ್ತಿದ್ದಳು, ಆದರೆ, ಮನೆಯವರಿಗೆ ಗೊತ್ತಾಯಿತು ಎಂದು ಹೆದರಿ ಹೀಗೆ ಮಾಡಿಕೊಂಡಿದ್ದಾಳೆ ಎಂದರು.