ಭಾಷಾ ಮಾಧ್ಯಮ: ಸುಪ್ರೀಂ ತೀರ್ಪಿಗೆ ವಿರೋಧ
ಗದಗ: ಕನ್ನಡ ಕಡ್ಡಾಯವಲ್ಲ ಎಂಬ ಸುಪ್ರೀಂ ಕೋರ್ಟ್ನ ತೀರ್ಪು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ)ದ ಕಾರ್ಯಕರ್ತರು ಬುಧವಾರ ನಗರದ ಗಾಂಧಿ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಕೆ.ಎಸ್. ಕೊಡತಗೇರಿ ಮಾತನಾಡಿ, ಕನ್ನಡ ಭಾಷೆ 2 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಕನ್ನಡ ಭಾಷೆಯೆಂಬುದು ರಾಜ್ಯದಲ್ಲಿ ಪ್ರತಿಯೊಬ್ಬ ತಾಯಿ ಎಂಬ ಭಾವನೆಯಿದೆ. ಎಲ್ಲ ಮಕ್ಕಳು ಕರ್ನಾಟಕದಲ್ಲಿ ಕನ್ನಡ ಕಲಿಯಬೇಕು. ಮಗು ಆರೋಗ್ಯವಾಗಿ ಬಾಳಲು ತಾಯಿಯೇ ಎದೆ ಹಾಲು ಎಷ್ಟು ಮುಖ್ಯವು ಕನ್ನಡವು ಎಲ್ಲರಿಗೂ ಅಷ್ಟೇ ಮುಖ್ಯ. ಆದರೆ, ಸುಪ್ರೀಂ ಕೋರ್ಟ್ ಕನ್ನಡ ಕಡ್ಡಾಯವಲ್ಲ ಎಂಬ ತೀರ್ಪು ನೀಡಿರುವುದು ಕನ್ನಡ ಭಾಷೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಅನುದಾನ ರಹಿತ ಖಾಸಗಿ ಶಿಕ್ಷಣಗಳಿಗೆ ಇದು ಜಯ ಎನಿಸಿರಬಹುದು. ಆದರೆ, ಇಂತಹ ಸಂಸ್ಥೆಗಳು ಕನ್ನಡವನ್ನು ಕೊಲೆ ಮಾಡಲಿಕ್ಕೆ ಹೊರಟಿವೆ. ಸುಪ್ರಿಂ ಕೋರ್ಟ್ ಕನ್ನಡ ಭಾಷೆಯನ್ನು ಮರಣಶಾಸನ ಬರೆಯಲಿಕ್ಕೆ ಹೊರಟಂತೆ ಕಾಣುತ್ತದೆ. ಕಾರಣ ನ್ಯಾಯಾಲಯ ಮತ್ತೊಮ್ಮೆ ಪರಿಶೀಲಿಸಿ ಕನ್ನಡವನ್ನು ಉಳಿಸುವಂತಹ ಕಾರ್ಯ ಮಾಡಬೇಕು ಎಂದರು. ಜಿಲ್ಲಾ ಮುಖಂಡ ಎಸ್.ಕೆ. ದಾನಕೈ ಮಾತನಾಡಿದರು. ಗದಗ ತಾಲೂಕು ಅಧ್ಯಕ್ಷ ಗುರುಪ್ರಸಾದ ಹೀರೆಮಠ, ಶಿರಹಟ್ಟಿ ತಾಲೂಕು ಅಧ್ಯಕ್ಷ ಸುನೀಲ ಪವಾರ, ಮುಂಡರಗಿ ತಾಲೂಕು ಅಧ್ಯಕ್ಷ ಶಿವಾನಂದ ಬಾರಕೇರ, ರೋಣ ತಾಲೂಕು ಅಧ್ಯಕ್ಷ ಪ್ರಶಾಂತ ಕಲಾಲ, ಬಸವರಾಜ ನರಗುಂದ, ಬಸವರಾಜ ಕೊಟಗಿ, ಮೈಲಾರಪ್ಪ ಕಳಸಾಪುರ, ಮೈಲಾರಪ್ಪ ಹುಲಕಟ್ಟಿ, ಚನ್ನವಿರಪ್ಪ ಕೋಟಿ, ನಿಂಗಪ್ಪ ಡೋಣಿ, ಶರಣಪ್ಪ ನೇಕಾರ, ರಮೇಶ, ರಾಘು, ಜಲಾಲ ಕೊಪ್ಪಳ, ರಾಘು ಕಟ್ಟಮನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.