ಮರಳು ಮಾಫಿಯಾ: ಬೆರಳೆಣಿಕೆ ಪ್ರಕರಣ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 7
ಪೊಲೀಸ್ ಸಾಥ್ನೊಂದಿಗೆ ಜಿಲ್ಲೆಯಿಂದ ಹೊರ ಸಾಗಿಸುವ ವೇಳೆ ಮರಳು ತುಂಬಿದ ವಾಹನ ಸಮೇತ ಸಿಕ್ಕುಬಿದ್ದರೆ, ಅಧಿಕಾರಿಗಳು ಹಾಗೂ ಮರಳು ಸಾಗಾಟದಾರರು ಮೊದಲು ಅಧಿಕಾರಿಗಳೊಂದಿಗೆ ಡೀಲ್ ಮಾಡಲು ಇಳಿಯುತ್ತಾರೆ. ಡೀಲ್ ಕುದಿರಿಸಲು ಇಂತಿಷ್ಟು ಪರ್ಸ್ಂಟೇಜ್ ಎಂದು ನಿಗದಿ ಮಾಡಿಕೊಂಡು ತಮ್ಮ ವಾಹನದ ಮೇಲೆ ಯಾವುದೇ ಕೇಸ್ ಫೈಲ್ ಮಾಡಬಾರದು ಎಂದು ಒಪ್ಪಂದ ಮಾಡಿಕೊಳ್ಳುತ್ತಾರೆ. ಪರ್ಸಂಟೇಜ್ ಕೊಟ್ಟ ಬಳಿಕ ಮತ್ತೆ ಮರಳು ಸಾಗಾಟದಾರರು ನಿರ್ಭಯದಿಂದ ಮಾಫಿಯಾದಲ್ಲಿ ತೊಡಗುತ್ತಿದ್ದಾರೆ. ಹೀಗಾಗಿ ಜಿಲ್ಲಾದ್ಯಂತ 2013ರಿಂದ ಈವರೆಗೆ ಕೇವಲ ಬೆರಳೆಣಿಕೆ ಪ್ರಕರಣಗಳು ದಾಖಲಾಗಿವೆ.
ಹೌದು... ಬಹುತೇಕವಾಗಿ ಜಿಲ್ಲೆಯಲ್ಲಿಗ ನಡೆಯುತ್ತಿರುವ ಮರಳು ಮಾಫಿಯಾದಲ್ಲಿ ಹಲವು ಕುಳಗಳು ಕಾರ್ಯನಿರ್ವಹಿಸುತ್ತಿವೆ. ನಗರ ಪ್ರದೇಶದಲ್ಲಿ ಮರಳು ತುಂಬಿದ ವಾಹನಗಳು ಹೊರಟಿದ್ದರೆ, ಇಲಾಖೆ ಅಧಿಕಾರಿಗಳು ಕೂಡಲೇ ವಾಹನ ತಡೆದು ಪರೀಕ್ಷೆ ಮಾಡುತ್ತಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಇಲಾಖೆ ಅಧಿಕಾರಿಗಳಿಗೊಂದು ಕರೆ ಬರುತ್ತದೆ. ಇದು ನಮ್ಮ ವಾಹನ ಏನು ಮಾಡಬೇಡಿ ಎಂದು ಹೇಳುತ್ತಾರೆ. ಹೀಗಾಗಿ ಪ್ರಕರಣ ದಾಖಲು ಮಾಡದೇ, ದಂಡ ಕಟ್ಟಿಸಿಕೊಳ್ಳದೇ ಈ ಮಾರ್ಗದಿಂದ ನೀವು ತೆರಳಿದಿರೆ ಮತ್ತೆ ನಿಮ್ಮ ವಾಹನ ಹಿಡಿಯುತ್ತಾರೆ. ಬೇರೆ ದಾರಿಗೆ ಹೋಗಿ ಎಂದು ದಾರಿ ತೋರಿಸುತ್ತಿದ್ದಾರೆ. ಮರಳಿನ ವಾಹನ ಹಾಗೆ ಬಿಡದೆ ವಾಹನದ ವ್ಯಕ್ತಿ ಕಡೆಯಿಂದ ಇರುವಷ್ಟು ಹಣ ಪಡೆದು ಸಾಗ ಹಾಕುತ್ತಾರೆ ಎಂದು ಮರಳು ಸಾಗಾಟದಾರರೇ ನಿರ್ಭಯದಿಂದ ಹೇಳುತ್ತಾರೆ.
ಪ್ರಭಾವಿಗಳದ್ದೆ ಆಟ: ಜಿಲ್ಲೆಯಲ್ಲೀಗ ಪ್ರಭಾವಿಗಳದ್ದೇ ದೊಡ್ಡಾಟವಾಗಿದೆ. ಮರಳು ಮಾಫಿಯಾದಲ್ಲಿ ಯಾವುದೇ ಅಧಿಕಾರಿ ಮರಳು ಸಾಗಾಟ ನಡೆಸುವ ವಾಹನ ಹಿಡಿದು ಪ್ರಕರಣ ದಾಖಲು ಮಾಡಿದ್ದೇ ಆದರೆ, ಆ ವ್ಯಕ್ತಿ ಜಿಲ್ಲೆಯಲ್ಲಿ ನೌಕರಿ ಮಾಡುವುದು ತುಂಬ ಕಷ್ಟವೇ ಸರಿ. ಮರಳಿನ ವಾಹನ ಸಂಚಾರ ಕಂಡು ಪ್ರಕರಣ ದಾಖಲು ಮಾಡಲು ಮುಂದಾದರೆ ಇಲ್ಲವೇ ದಂಡ ವಿಧಿಸಲು ಮುಂದಾದರೆ ವಿನಾಕಾರಣ ಬೇರೇ ಕಡೆಯಿಂದ ಒತ್ತಡ ಬರುತ್ತವೆ. ನಾವು ಏಕೆ ಸುಮ್ಮನೆ ಸಮಸ್ಯೆ ಮೈಮೇಲೆ ಹಾಕಿಕೊಳ್ಳಬೇಕು. ಸದ್ಯದ ಸಮಸ್ಯೆಯನ್ನು ಹಾಗೇ ಸಾಗ ಹಾಕಿದರೆ ಸಾಕು. ಪ್ರಭಾವಿಗಳಿಗೆ ವಿರುದ್ಧವಾದರೆ ನಾವೇ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ.
ನಿಯತ್ತಿನಿಂದ ಕೆಲಸ ಮಾಡಿದರೆ, ಪೋನ್ ಕರೆಗಳೆ ಅಧಿಕವಾಗುತ್ತವೆ. ಇದರಿಂದ ತಪ್ಪಿಸಿಕೊಳ್ಳಲಾದರೂ ಸಮಸ್ಯೆ ದೊಡ್ಡದು ಮಾಡಿಕೊಳ್ಳದೇ, ಕಂಡು ಕಂಡು ಕಲ್ಲು ಬಂಡೆಗೆ ನಾವೇ ಏಕೆ ಹಾಯಬೇಕು. ಇರುವ ವ್ಯವಸ್ಥೆಯಲ್ಲೇ ನಡೆದರಾಯ್ತು ಎನ್ನುವ ಮಾತುಗಳು ಸ್ವತಃ ಅಧಿಕಾರಿಗಳ ಬಾಯಿಂದಲೇ ಬರುತ್ತಿವೆ.
ಪ್ರಕರಣ ವಿರಳ: ಜಿಲ್ಲಾದ್ಯಂತ ಪೊಲೀಸ್ ಇಲಾಖೆ 2013ರಿಂದ ಮೇ ತಿಂಗಳವರೆಗೆ ಕೇವಲ 6 ಪ್ರಕರಣಗಳನ್ನು ಅಕ್ರಮ ಮರಳು ಸಾಗಾಟದ ವಾಹನಗಳ ಮೇಲೆ ಪ್ರಕರಣ ದಾಖಲು ಮಾಡಿದೆ. ಹೀಗೇಕೆ ಎಂದು ವಿಚಾಸಿದರೆ, ಇಲ್ಲ ನಮಗೆ ಮರಳು ಸಾಗಾಟ ಮಾಡುತ್ತಿರುವ ಮಾಹಿತಿ ಬಂದಿದ್ದು ಇಷ್ಟೆ. ಹೀಗಾಗಿ ಆರು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿ ಮರಳು ವಾಹನಗಳನ್ನು ಗುರುತಿಸಿ ಪ್ರಕರಣ ದಾಖಲು ಮಾಡಲಾಗಿದೆ ಎನ್ನುತ್ತಿದೆ ಪೊಲೀಸ್ ಇಲಾಖೆ.
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಲ್ಲಿ 2011ರಿಂದ 2014 ಮೇ ತಿಂಗಳವರೆಗೆ ಕೇವಲ 23 ವಾಹನಗಳ ಮೇಲೆ ಪ್ರಕರಣ ದಾಖಲಾಗಿವೆ. ಅಚ್ಚರಿ ವಿಷಯವೆಂದರೆ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ವಾಹನಗಳಿಗೆ ಈವರೆಗೂ ಕೇವಲ ರು. 92 ಸಾವಿರ ದಂಡ ವಿಧಿಸಿದೆ.
ದತ್ತು ಕಮ್ಮಾರ