ಸರ್ಕಾರಿ ಕೋಟಾ ಕೌನ್ಸೆಲಿಂಗ್ ಮೊದಲು ಮಾಡಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 7
ಸ್ನಾತಕೋತ್ತರ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್ಗಳಿಗೆ ಸರ್ಕಾರವೇ ಮೊದಲು ಕೌನ್ಸೆಲಿಂಗ್ ನಡೆಸಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಜಿಲ್ಲಾ ಸಮಿತಿ ಮಂಗಳವಾರ ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಸುಪ್ರೀಂಕೋರ್ಟ್ ಆದೇಶ ಗೊಂದಲದಿಂದ ಕಾಲೇಜುಗಳ ಮಾನ್ಯತೆ ನವೀಕರಣ ವಿಳಂಬವಾಗುತ್ತಿದೆ. ಇದರಿಂದ ಕೌನ್ಸೆಲಿಂಗ್ ತಡವಾಗಿ ಆರಂಭವಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಈ ಮೊದಲು ಮಾನ್ಯತೆ ನವೀಕರಣವನ್ನು ಎಐಸಿಟಿಸಿ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) ಮಾಡುತ್ತಿತ್ತು. ಆದರೆ, ಸುಪ್ರೀಂ ಕೋರ್ಟ್ 6 ತಿಂಗಳ ಹಿಂದೆ ಮಾನ್ಯತೆ ನವೀಕರಣವನ್ನು ವಿಶ್ವವಿದ್ಯಾಲಯಗಳಿಗೆ ನೀಡಿತು. ಈಗ ಮತ್ತೆ ಸುಪ್ರೀಂ ಕೋರ್ಟ್ ಏ. 17ರಂದು ತೀರ್ಪು ನೀಡಿ ಮಾನ್ಯತೆ ನವೀಕರಣವನ್ನು ಎಐಸಿಟಿಸಿ 10 ದಿನಗಳಲ್ಲಿ ಮಾಡಬೇಕೆಂದು ಸೂಚಿಸಿದೆ. ಹೀಗಾಗಿ ಎಐಸಿಟಿಸಿಗೆ 10 ದಿನಗಳಲ್ಲಿ ರಾಜ್ಯಾದ್ಯಂತ ಕಾಲೇಜುಗಳ ನವೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಕಾರಣ ಕೌನ್ಸೆಲಿಂಗ್ ವಿಳಂಬವಾಗುವ ಸಾಧ್ಯತೆ ಹೆಚ್ಚಿವೆ. ಸರ್ಕಾರಿ ಕೋಟಾ ಸೀಟು ಭರ್ತಿಮಾಡುವವರಿಗೂ ಇತರೆ ಕೋಟಾಗಳಿಗೆ ಕೌನ್ಸೆಲಿಂಗ್ ನಡೆಸಬಾರದು ಎಂದು ಸರ್ಕಾರಕ್ಕೆ ಜಿಲ್ಲಾ ಸಮಿತಿ ಒತ್ತಾಯಿಸಿತು. ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಇತರೆ ಕೋರ್ಸ್ಗಳಿಗೆ ಸರ್ಕಾರವೇ ಮೊದಲು ಕೌನ್ಸೆಲಿಂಗ್ ನಡೆಸಬೇಕು. ಪ್ರತಿ ಜಿಲ್ಲೆಗಳಲ್ಲಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಬೇಕು.
ಕೊಪ್ಪಳ ಜಿಲ್ಲೆಗೆ ಮಂಜೂರಾದ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಬೇಕು. ಮಾನ್ಯತೆ ನವೀಕರಣ ಗೊಂದಲ ಬೇಗನೆ ಬಗೆಹರಿಸಬೇಕು. ಎಲ್ಲ ವಿಭಾಗದಲ್ಲಿ ಶೇ. 75ರಷ್ಟು ಸರ್ಕಾರಿ ಸೀಟುಗಳು 25 ಖಾಸಗಿ ಸೀಟುಗಳಿಗೆ ಬಿಟ್ಟು ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಪದಕಿ ಲೇಜೌಟ್ನಿಂದ ಪ್ರತಿಭಟನೆ ಪ್ರಾರಂಭಿಸಿ, ಸಿಂಪಿಲಿಂಗಣ್ಣ ರಸ್ತೆ ಮೂಲಕ ಕೇಂದ್ರೀಯ ಬಸ್ ನಿಲ್ದಾಣದ ಎದುರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು. ಮೇಘನಾ ಹುಲಿಹೈದರ್, ಅಮರೇಶ ಕಡಗದ, ಗೌರಮ್ಮ, ಸಂತೋಷ, ಹನುಮಂತರಾವ್, ಮಾಬುಸಾಬ್, ಅನಿತಾ, ಸಂತೋಷ, ಸುಂಕಪ್ಪ ಗದಗ, ಫಕೀರಮ್ಮ, ಶಾಂತಮ್ಮ ಇದ್ದರು.