ಕಾಯಕ ಮಹತ್ವ ಸಾರಿದ ಬಸವಾದಿ ಶರಣರು
ಗದಗ: ಪ್ರಾಮಾಣಿಕ, ನಿಯತ್ತಿನ ದುಡಿಮೆ ಎಂಬುದು ಬದುಕಿನ ಜಟಕಾಬಂಡಿ ಸಾಗಿಸುವ ಚಾಣಾಕ್ಷ ಚಾಲಕನಂತಿದೆ. ತನು-ಮನ ಬಳಸಿ ಮಾಡುವ ಕಾಯಕ ಬದುಕಿನ ಧಾರಿದ್ರ್ಯ- ಬಡತನ ನೀಗಲು ಸಾಧ್ಯ. ಅಂತಹ ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದವರು ಬಸವಾದಿ ಶರಣರು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸ್ಥಳೀಯ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಈಚೆಗೆ ಜರುಗಿದ 2170ನೇ ಶಿವಾನುಭವದಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ತ ರಿಕ್ಷಾ ಚಾಲಕ ವೃತ್ತಿಯ ಮಂಜುನಾಥ ಲಕ್ಕುಂಡಿ, ತರಕಾರಿ ಮಾರುವ ಕಾಯಕದ ಬಾಬಾಸಾಬ್ ಸೊನ್ನೇಖಾನ, ಬೆಟಗೇರಿಯ ಸಿಎಸ್‌ಐ ಆಸ್ಪತ್ರೆಯ ಮುಖ್ಯ ದಾದಿ ಸಲೋಮಿ ಪ್ರಸಾದ ಬಂಡಿ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಮಾತನಾಡಿದರು.
ಬಸವಾದಿ ಶರಣರು ಅಧ್ಯಾತ್ಮ, ಧರ್ಮ, ಜೀವನವನ್ನು ಕಾಯಕಯೋಗದೊಂದಿಗೆ ಬೆರೆಸಿದ ಮಹಾನ್ ದಾರ್ಶನಿಕರು. ದೇವರು ಕೊಟ್ಟ ಬದುಕಿನಿಂದ ಓಡಿ ಹೋಗುವ ಪಲಾಯನವಾದವನ್ನು ವಿರೋಧಿಸಿದರು. ಬದುಕನ್ನು ಪ್ರೀತಿಸುವ ಜತೆಗೆ ಅವರು ಪ್ರತಿಪಾದಿಸಿದ್ದು ಶ್ರಮ ಸಂಸ್ಕೃತಿಯ ಬದುಕು. ಅದಕ್ಕೆ ಶರಣರು ಕಾಯಕಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ ನೀಡಿದರು. ಬಸವಾದಿ ಶರಣರು ಪ್ರತಿಯೊಬ್ಬರೂ ಒಂದಿಲ್ಲೊಂದು ಕಾಯಕ ಮಾಡುತ್ತಿದ್ದರು. ಪ್ರಮಾಣಿಕವಾಗಿ ದುಡಿದು ಬಂದಿದ್ದರಲ್ಲಿ ದಾಸೋಹ ನಡೆಸುತ್ತಿದ್ದರು. ವಿವಿಧ ಕಾಯಕದಲ್ಲಿನ ತಾರತಮ್ಯ ನೀತಿ ಹೊಡೆದೋಡಿಸಿದರು. ಆದ್ದರಿಂದಲೇ ಹಡಪದ ಅಪ್ಪಣ್ಣ, ಮೋಳಿಗೆ ಮಾರಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಮುಂತಾದವರು ಸಮಾನವಾದ ಗೌರವದ ಬದುಕು ಸಾಗಿಸಿದರು ಎಂದು ಹೇಳಿದರು. ಮೈಮುರಿದು ದುಡಿದು ತಿನ್ನಬೇಕೆಂಬ ಮನೋಭಾವ ಕಡಿಮೆಯಾಗುತ್ತಿರುವುದು ಖಂಡಿತ ಒಳ್ಳೆಯದಲ್ಲ. ದುಡಿದು ತಿನ್ನುವ ಜನರೇ ಪುಣ್ಯವಂತರು, ಅವರು ಇಹಪರದಲ್ಲಿ ಸಲ್ಲುವವರು. ದುಡಿಮೆಗಾರರು, ಕಾಯಕಯೋಗಿಗಳಿಂದ ಮಾತ್ರ ಒಂದು ಸಮಾಜ, ಒಂದು ದೇಶದ ಅಭಿವೃದ್ಧಿಯಾಗಲು ಸಾಧ್ಯವಾಗುವುದು ಎಂದರು.
ವಿಶ್ವಕಾರ್ಮಿಕರ ದಿನಾಚರಣೆ ನಿಮಿತ್ತ ಕಾಯಕದ ಮಹತ್ವ ಕುರಿತು ನಿಡಗುಂದಿಯ ಸರ್ಕಾರಿ ಪಪೂ ಕಾಲೇಜಿನ ಎಸ್.ಎಸ್. ಹಿರೇಮಠ ಉಪನ್ಯಾಸ ನೀಡಿದರು. ಹುಬ್ಬಳ್ಳಿಯ ಉದ್ಯೋಗ ಮತ್ತು ತರಬೇತಿ ಇಲಾಖೆ ವಿಭಾಗೀಯ ಕಚೇರಿ ಉಪನಿರ್ದೇಶಕ ಬಸವಪ್ರಭು ಹಿರೇಮಠ ಮಾತನಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಭುದೇವ ಹಿರೇಮಠ, ಉಪಾಧ್ಯಕ್ಷ ಶೇಖಣ್ಣ ಕಳಸಾಪುರ, ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ, ಸಹಕಾರ್ಯದರ್ಶಿ ವೀರಣ್ಣ ಜ್ಯೋತಿ, ಕೋಶಾಧ್ಯಕ್ಷ ಚಂದ್ರಶೇಖರಪ್ಪ ಅರಳಿ, ಶಿವಾನುಭವ ಸಮಿತಿ ಚೇರ್‌ಮನ್ ಎಸ್.ಎನ್. ಆದಿ ಮುಂತಾದವರು ಇದ್ದರು. ಶಿವಾನುಭವ ಸಮಿತಿ ಚೇರ್‌ಮನ್ ಎಸ್.ಎನ್. ಆದಿ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.