ಹೆಚ್ಚಿದ ಬಿಸಿಲಿನ ಪ್ರಖರತೆ: ಬತ್ತಿದ ಸಣ್ಣ ಕೆರೆಗಳು
ನರಗುಂದ: ಮಳೆ ಕೊರತೆ ಹಾಗೂ ಅತಿಯಾದ ಬಿಸಿಲಿನ ಪ್ರಖರತೆಯಿಂದ ದೊಡ್ಡ ಕೆರೆಗಳು ಹಾಗೂ ನದಿಗಳಲ್ಲಿಯೇ ನೀರಿನ ಕೊರತೆ ಉಂಟಾಗುತ್ತಿದೆ. ಇನ್ನು ರೈತಾಪಿ ಜನರ ಆಶ್ರಯ ಹಾಗೂ ಕುರಿಗಾಹಿಗಳಿಗೆ ಅನುಕೂಲರವಾಗಿದ್ದ ಸಣ್ಣ ಸಣ್ಣ ಕೆರೆಗಳು ಸಂಪೂರ್ಣ ಬತ್ತಿದ್ದು ರೈತರಲ್ಲಿ ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.
ಮಲಪ್ರಭಾ ಜಲಾಶಯದ ಕಾಲುವೆಗಳ ಮೂಲಕ ಸಣ್ಣ, ಅತಿ ಸಣ್ಣ ಕೆರೆಗಳಿಗೆ ಹಿಂದಿನ ಡಿಸೆಂಬರ್‌ನಲ್ಲಿ ತುಂಬಿಸಲಾಗಿತ್ತು. ಈ 4 ತಿಂಗಳಲ್ಲಿ ಸಣ್ಣ, ಅತಿ ಸಣ್ಣ ಪಟ್ಟಣ ಮತ್ತು ಗ್ರಾಮೀಣ ಹೊರಭಾಗದ ಜಮೀನುಗಳಲ್ಲಿರುವ ಕೆರೆಗಳನ್ನು ತುಂಬಿಸಲಾಗಿತ್ತು. ಆದರೆ, ನರಗುಂದ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೆರೆಗಳಲ್ಲಿ ನೀರು ಸಂಪೂರ್ಣ ಆವಿಯಾಗಿದ್ದು ಸಾಕಷ್ಟು ತೊಂದರೆಯಾಗಿ ಪರಿಣಮಿಸಿದೆ.
ಜಾನುವಾರುಗೆ ನೀರಿಲ್ಲ: ಹೊಲದಲ್ಲಿರುವ ಈ ಕೆರೆಗಳು ರೈತರು ಮತ್ತು ಕುರಿಗಾರರಿಗೆ ಅನುಕೂಲವಾಗಿತ್ತು. ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿತವಾಗಿದ್ದರಿಂದ ಅವರೆಲ್ಲಾ ಹಗಲು ವೇಳೆಯಲ್ಲಿ ಕುರಿಗಳನ್ನು ಮೇಯಿಸಿ ರಾತ್ರಿ ಊರಿಗೆ ಬಂದು ನೀರು ಕುಡಿಸುವಂತಾಗಿದೆ. ಅದರಲ್ಲಿ ನೂರಾರು ಸಂಖ್ಯೆಯಲ್ಲಿ ಕುರಿಗಳಿರುವುದರಿಂದ ಹೊಲಗಳಲ್ಲಿನ ಕೆರೆಗಳು ಬತ್ತಿರುವುದು ಕುರಿಗಾರರಿಗೆ ತೊಂದರೆಯಾಗಿದೆ.
ನಿರ್ಲಕ್ಷ್ಯ: ನೀರಾವರಿ ತಮ್ಮ ಜಮೀನಗಳಲ್ಲಿ ಕೆರೆ ನಿರ್ಮಿಸಿದ ರೈತರು 1 ಸಲ ಕೆರೆ ಭರ್ತಿಯಾದರೆ 4-5 ತಿಂಗಳು ಕಾಲ ನೀರು ಲಭ್ಯವಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಎರಡೇ ತಿಂಗಳಲ್ಲಿಯೇ ಕೆರೆಗಳಲ್ಲಿನ ನೀರು ಸಂಪೂರ್ಣ ಬತ್ತಿದ್ದು, ಬಿಸಿಲಿನ ಪ್ರಖರತೆಗೆ ಹಿಡಿದ ಕನ್ನಡಿಯಾಗಿದೆ. ಇನ್ನು ಕೆಲ ಕೆರೆಗಳಲ್ಲಿ ನೀರಿದ್ದರೂ ಅವು ಕುಡಿಯಲು ಬಾರದಂತಹ ಸ್ಥಿತಿಗೆ ತಲುಪಿದ್ದು, ಅವುಗಳನ್ನು ಜಾನುವಾರುಗಳೇ ಕುಡಿಯುತ್ತಿಲ್ಲ. ನೀರೆಲ್ಲಾ ಕೊಳೆತ ವಾಸನೆಯಿಂದ ಕೂಡಿವೆ ಎನ್ನುವುದು ಕುರಿಗಾರರ ಅಭಿಪ್ರಾಯವಾಗಿದೆ. ಪ್ರಸ್ತುತ ವರ್ಷ ಬೇಸಿಗೆ ಪ್ರಾರಂಭದ ಸಮಯಕ್ಕೆ ಲೋಕಸಭೆ ಚುನಾವಣೆ ಬಂದಿದ್ದರಿಂದ ಈ ಕುಡಿವ ನೀರಿನ ಅಭಾವ ಇದ್ದರೂ ಯಾರೂ ಇತ್ತ ಗಮನಹರಿಸುತ್ತಿಲ್ಲ.
ಎಸ್.ಜಿ. ತೆಗ್ಗಿನಮನಿ