ನಂದನವನ ಕಾರಂಜಿ ಬಾವಿ ರಕ್ಷಣೆಗೆ ಜಿಲ್ಲಾಡಳಿತ ನಿರ್ಲಕ್ಷ್ಯ: ಕಲಬುರ್ಗಿ
ಕನ್ನಡಪ್ರಭ ವಾರ್ತೆ, ಗದಗ, ಮೇ 9
12ನೇ ಶತಮಾನದ ಪುಷ್ಕರಣಿ ನಂದನವನ ಕಾರಂಜಿಬಾವಿ ಖಾಸಗಿಯವರ ಸ್ವತ್ತಾಗಿ ಅಳಿವನಂಚಿನಲ್ಲಿದ್ದು, ಜಿಲ್ಲಾಡಳಿತ ಇದನ್ನು ರಕ್ಷಿಸದಿದ್ದಲ್ಲಿ ನಾಗರಿಕರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಶ್ರೀ ನಾಗಲಿಂಗ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ಕಲಬುರ್ಗಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವೀರನಾರಾಯಣ ದೇವಸ್ಥಾನ ಹಿಂದಿನ ನಾಗಲಿಂಗ ನಗರದಲ್ಲಿ ಈ ಪುಷ್ಕರಣಿ ಬಾವಿ ಇದೆ. ಅದನ್ನು ಖಾಸಗಿ ವ್ಯಕ್ತಿಗಳು ಮುಚ್ಚಿ ಮೇಲ್ಗಡೆ ಮನೆ ಕಟ್ಟುತ್ತಿರುವ ಕುರಿತು ಜಿಲ್ಲಾಡಳಿತ, ಪ್ರಾಚ್ಯವಸ್ತು ಇಲಾಖೆ, ನಗರಸಭೆ, ಸಂಬಂಧಪಟ್ಟ ಇಲಾಖೆಗಳಿಗೆ ಅನೇಕ ಬಾರಿ ವಿನಂತಿಸಲಾಗಿದೆ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಸಮರ್ಪಕ ಕ್ರಮ ಜರುಗಿಸಿಲ್ಲ. ಹಾಗಾಗಿ ಈ ಬಾವಿ ಮುಚ್ಚಿ ಅತಿಕ್ರಮವಾಗಿ ಕಟ್ಟಡ ಕಟ್ಟುವ ಪ್ರಯತ್ನ ನಡೆಯುತ್ತಲೇ ಇದೆ. ನಮ್ಮ ದೂರು ಆಲಿಸಿ ಸ್ಥಳ ಪರಿಶೀಲಿಸಿದ ನಗರಸಭೆ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಅತಿಕ್ರಮಣ ಕಟ್ಟಡ ಕಟ್ಟುತ್ತಿರುವುದನ್ನು, ಪುಷ್ಕರಣಿ ರಕ್ಷಿಸುವ ಕುರಿತು ಸದರಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೂ ನೋಟಿಸ್ಗೆ ಸ್ಪಂದನೆ ಇಲ್ಲದೆ ಕೆಲಸ ಅತಿಕ್ರಮಣನಡೆಯುತ್ತಿದೆ. ಜಿಲ್ಲಾಡಳಿತ ತಕ್ಷಣ ಪುರಾತನ ಕಾಲದ ಬಾವಿ ರಕ್ಷಣೆಗೆ ಆದ್ಯತೆ ನೀಡಬೇಕಿದೆ. 15 ವರ್ಷಗಳ ಹಿಂದೆ ನಾಗಲಿಂಗ ನಗರ ಸ್ಥಾಪನೆಯಾಗಿದ್ದು, ಈ ಭಾಗದಲ್ಲಿ ಸ್ಥಳೀಯ ಆಡಳಿತ ಸಾರ್ವಜನಿಕ ಶೌಚಾಲಯ, ರಸ್ತೆ, ಗಟಾರು ನಿರ್ಮಿಸಿಲ್ಲ. ಇಲ್ಲಿನ ಪುಟ್ಟರಾಜ ಉದ್ಯಾನವನ ಅತಿಕ್ರಮಣಕ್ಕೆ ಒಳಗಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಒಂದು ತಿಂಗಳಲ್ಲಿ ಕಾರಂಜಿ ಬಾವಿ ರಕ್ಷಣೆ, ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ನಾಗರಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುತ್ತೇವೆಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಶಿವು ಅಣ್ಣಿಗೇರಿ, ಮಾರುತಿ ದುಂಡಸಿ, ಗಿರಿಜಪ್ಪ ಅಂಜಿಖಾನೆ, ಅಶೋಕ ರೇವಡಿ, ಗಂಗಪ್ಪ ಅಂಜಿಖಾನೆ, ರಮೇಶ ಮೇಟಿ ಇದ್ದರು.