ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿರಾಶ್ರಿತರಿಗೆ ಮನೆ, ಸೌಲಭ್ಯ ಕಲ್ಪಿಸಿ

Vishwanath S
Updated On : 10 May 2014, 11:42 am

ನರೇಗಲ್ಲ: ಶುಕ್ರವಾರ ದಿಢೀರನೇ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರಸನ್ನಕುಮಾರ ಪಪಂ ವ್ಯಾಪ್ತಿಗೊಳಪಡುವ ಹಲವಾರು ಕಾಮಗಾರಿಗಳನ್ನು ಪರಿಶೀಲಿಸಿ ಪಪಂ ಮುಖ್ಯಾಧಿಕಾರಿ ಹಾಗೂ ಸದಸ್ಯರಿಗೆ ಸಲಹೆ, ಸೂಚನೆ ನೀಡಿದರು.
ನಾಡಕಚೇರಿ ಮುಂಭಾಗ ಮಳೆಯಿಂದಾಗಿ ನೀರು ನಿಲ್ಲುತ್ತಿದ್ದ ಸ್ಥಿತಿ ಕಂಡು ಈ ನೀರು ನಿಲ್ಲದಂತೆ ಸೂಕ್ತ ಪರಿಹಾರ ಕೈಗೊಳ್ಳಿ. ಈ ಆವರಣದಲ್ಲಿ ದನಕರುಗಳನ್ನು ಕಟ್ಟುವುದನ್ನು ವಾಹನ ನಿಲ್ಲಿಸುವುದನ್ನು ತಡೆಗಟ್ಟಿ, ಒಂದು ವೇಳೆ ಹಾಗೆ ಕಟ್ಟಿದ್ದೆ ಆದಲ್ಲಿ ಅಂಥವರಿಗೆ ರು. 5 ಸಾವಿರ ದಂಡ ವಿಧಿಸಿ ಎಂದು ಮುಖ್ಯಾಧಿಕಾರಿ ವಿಜಯಲಕ್ಷ್ಮಿಗೆ ಸೂಚಿಸಿದರು.
ಗ್ರಂಥಾಲಯ ಸ್ಥಳಾಂತರಗೊಳಿಸಿ: ಗ್ರಂಥಾಲಯ ಸ್ಥಳಾಂತರಗೊಳಿಸುವ ವಿಚಾರವಾಗಿ ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಬಗ್ಗೆ ಈ ಹಿಂದೆ ನಾನು 2-3 ಬಾರಿ ಸ್ಥಳಾಂತರಗೊಳಿಸಲು ತಿಳಿಸಿದ್ದೇನೆ. ಆದರೂ ಇಲ್ಲಿವರೆಗೆ ಆಗದಿರುವುದಕ್ಕೆ ಕಾರಣ ತಿಳಿದಿಲ್ಲ. ಕೂಡಲೇ ಈ ವಿಚಾರವಾಗಿ ಮುಖ್ಯಾಧಿಕಾರಿಯವರಿಗೆ ಆದೇಶಿಸುತ್ತೇನೆಂದು ಮುಖ್ಯಾಧಿಕಾರಿಯವರನ್ನು ಕರೆದು ಗ್ರಂಥಾಲಯ ಕಟ್ಟಡ ಎರಡು ದಿನಗಳಲ್ಲಿ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು.
ಉದ್ಯಾನ ಜಾಗೆಯಲ್ಲಿ ಗಿಡ ನೆಡಿ: ಉದ್ಯಾನಕ್ಕೆಂದು ಸೀಮಿತವಾಗಿದ್ದ ಜಾಗೆಯಲ್ಲಿ ರಾತ್ರಿ ವೇಳೆ ಕುಡುಕರ ಹಾವಳಿಯಿಂದಾಗಿ ಕುಡಿದ ಬಾಟಲಿ, ಪೌಚ್‌ಗಳನ್ನು ಬಿಸಾಡಿರುವ ದೃಶ್ಯ ನೋಡಿ ಆ ಜಾಗೆಯಲ್ಲಿ ಬಣವೆ ಒಟ್ಟಿದ್ದನ್ನು ಕಂಡು ರೋಸಿದ ಜಿಲ್ಲಾಧಿಕಾರಿ ಈ ಬಣವೆ ಯಾರದು ಮೊದಲು ತೆರವುಗೊಳಿಸಿ, ಜಾಗೆ ಸಮತಟ್ಟಾಗಿ ಮಾಡಿ ರು. 20ರಿಂದ 25 ಸಾವಿರ ವೆಚ್ಚದಲ್ಲಿ ಗಿಡಗಳನ್ನು ನೆಡುವ ವ್ಯವಸ್ಥೆ ಮಾಡಿ ಇದಕ್ಕೆ ಬೇಕಾದ ನೀರಿನ ವ್ಯವಸ್ಥೆಗೆ ಪಕ್ಕದಲ್ಲಿರುವ ಕೆರೆಯಿಂದ ಮೋಟಾರುಗಳ ಮೂಲಕ ವ್ಯವಸ್ಥೆ ಮಾಡಿ ಎಂದು ಮುಖ್ಯಾಧಿಕಾರಿಗೆ ತಿಳಿಸಿದರು.
ನಿರಾಶ್ರಿತರಿಗೆ ಮನೆ ನೀಡಿ: ಪಪಂ ವ್ಯಾಪ್ತಿಯ ಹಿಂಭಾಗದಲ್ಲಿ ನಿರ್ಮಾಣವಾಗಿದ್ದ ಗುಡಿಸಲುಗಳಿಗೆ ಭೇಟಿ ನೀಡಿ ಅವರ ಜೀವನ ಶೈಲಿ ಗಮನಿಸಿದ ಜಿಲ್ಲಾಧಿಕಾರಿ ಚಿಕ್ಕ ಚಿಕ್ಕ ಗುಡಿಸಲುಗಳಲ್ಲಿ ವಾಸವಾಗಿರುವವರಿಗೆ ಮೊದಲು ಮನೆ ನೀಡಿ ಬೇರೆಡೆಗೆ ಸ್ಥಳಾಂತರಗೊಳಿಸಿ ಇಲ್ಲಿನ ಜಾಗ ಸಮತಟ್ಟಾಗಿರುವಂತೆ ಮಾಡಿ ನೀರಿನ ಟ್ಯಾಂಕ್ ಇರುವುದರಿಂದ ಅಭಿವೃದ್ಧಿ ತ್ವರಿತವಾಗಬೇಕು. ಗುಡಿಸಲು, ಮನೆಗಳ ಮಾಲೀಕರಲ್ಲಿರುವ ದಾಖಲಾತಿಗಳನ್ನು ಪರಿಶೀಲಿಸಿ ಇಂಥವರಿಗೆ ಮನೆ ನೀಡಿ ನಂತರ ಬಾಡಿಗೆ ಮನೆಯಲ್ಲಿರುವವರು ಇನ್ನಿತತರರಿಗೆ ಮನೆಗಳನ್ನು ಪಪಂ ನಿಂದ ನೀಡುವಂತಹ ಕಾರ್ಯ ಮಾಡಿ ಎಂದು ಮುಖ್ಯಾಧಿಕಾರಿಗೆ ಹಾಗೂ ಸಂಬಂಧಿಸಿದ ಪಪಂ ಸದಸ್ಯರಿಗೆ ಸಲಹೆ ನೀಡಿದರು. ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮಿ, ಕಿರಿಯ ಅಭಿಯಂತ ಮನಿಯಾರ, ಪಪಂ ಸದಸ್ಯ ಯಲ್ಲಪ್ಪ, ಕಲ್ಮೇಶ ತೊಂಡಿಹಾಳ, ಶಶಿಧರ ಸಂಕನಗೌಡ್ರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement