ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಳೆ ಅಬ್ಬರಕ್ಕೆ ಜನತೆ ತತ್ತರ

Vishwanath S
Updated On : 10 May 2014, 11:41 am

ನರಗುಂದ: ಗುರುವಾರ ತಾಲೂಕಾದ್ಯಂತ ಸುರಿದ ಗುಡುಗು, ಸಿಡಿಲು, ಗಾಳಿ ಮಿಶ್ರಿತ ಭಾರಿ ಮಳೆಗೆ ಜನ, ಜಾನುವಾರು ಮೃತಪಟ್ಟರೆ, ಮನೆ, ಬೆಳೆಹಾನಿ ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣದ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನ ಸುರಿದ ಅಕಾಲಿಕ ಮಳೆಯಿಂದ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಸುಗ್ಗಿ ಮಾಡುವಾಗ ಸುರಿದ ಅಕಾಲಿಕ ಮಳೆಗೆ ಗೋದಿ, ಜೋಳ, ಗೋವಿನಜೋಳ, ಬಿ.ಟಿ. ಹತ್ತಿ, ಜಯಧರ ಹತ್ತಿ, ಕುಸುಬೆ, ಅಗಸಿ, ಸೂರ್ಯಕಾಂತಿ, ಕಡಲೆ ಮುಂತಾದ ಬೆಳೆಗಳು ಹಾನಿಯಾಗಿದ್ದವು. ಹಾನಿಗೆ ಪರಿಹಾರ ಕೋರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಕಂದಾಯ ಇಲಾಖೆ ಪರಿಹಾರ ನೀಡಿಲ್ಲ.
ಮೇ ತಿಂಗಳು ಪ್ರಾರಂಭವಾದಾಗಿನಿಂದ ತಾಲೂಕಿನಲ್ಲಿ ಗುಡಗು ಸಿಡಿಲಿಗೆ 2 ಬಣವೆಗಳು ಭಸ್ಮವಾಗಿವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪೂರೈಸುವ 4-5 ಟಿಸಿಗಳು ಸುಟ್ಟಿವೆ. ಗಾಳಿಗೆ ಪಟ್ಟಣದಲ್ಲಿ 20 ವಿದ್ಯುತ್ ಕಂಬ, ಹಳ್ಳಿಗಳಲ್ಲಿ 25ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗುರುವಾರ ಸಂಜೆ ಸುರಿದ ಮಳೆಗೆ ಪಟ್ಟಣದ ಅಂಬೇಡ್ಕರ ನಗರ, ರಾಚಯ್ಯ ನಗರ ಸೇರಿದಂತೆ ಗ್ರಾಮೀಣ ಭಾಗದ ಜನತಾ ಮನೆಗಳಲ್ಲಿ ನೀರು ನುಗ್ಗಿದೆ. ಮಳೆ ನೀರನ್ನು ಹೊರಗೆ ಚೆಲ್ಲುವುದರಲ್ಲಿ ಕಾಲ ಕಳೆದ ನಾಗರಿಕರು ನಿದ್ರೆ ಇಲ್ಲದೆ ಪರಿತಪಿಸಿದ್ದಾರೆ. ಇನ್ನು ಕೆಲವೆಡೆ ಹಲವು ಮಣ್ಣಿನ ಮನೆಗಳ ಗೋಡೆಗಳು ಕುಸಿದಿವೆ. ಹಲವೆಡೆ ಮನೆಗಳ ಮೇಲ್ಛಾವಣಿಗೆ ಹಾಕಿದ ತಗಡುಗಳು ಗಾಳಿ ರಭಸಕ್ಕೆ ಹಾರಿ ಹೋಗಿವೆ.
ಸದ್ಯ ಮುಂಗಾರು ಹಂಗಾಮಿಗೆ ರೈತನಿಗೆ ಮಳೆ ಬೇಕಾಗಿದೆ. ಆದರೆ, ಹೀಗೆ ಅಬ್ಬರದ ಮಳೆಯಿಂದ ಮನೆಗಳು, ಬಣವೆಗಳು ಹಾಳಾಗುತ್ತಿರುವುದು ನಿರಾಸೆ ಮೂಡಿಸಿದೆ. ಅಕಾಲಿಕ ಮಳೆ ಬರುವುದರಿಂದ ಮುಂದಿನ ದಿನಗಳಲ್ಲಿ ಬೆಳೆಗೆ ಬೇಕಾದ ಅಗತ್ಯ ಪ್ರಮಾಣದಲ್ಲಿ ಮಳೆಯಾಗಲ್ಲ ಎಂಬುದನ್ನರಿತ ರೈತರು ಚಿಂತೆಗೀಡಾಗಿದ್ದಾರೆ.


-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement