ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿಕ್ಷಕರ ವರ್ಗಾವಣೆ ತೊಡಕು ನಿವಾರಣೆ ಎಂದು?

Vishwanath S
Updated On : 10 May 2014, 11:41 am

ಕನ್ನಡಪ್ರಭ ವಾರ್ತೆ, ಗದಗ, ಮೇ 9
ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಸರ್ಕಾರಕ್ಕೆ, ಇಲಾಖೆ ಮಂತ್ರಿಗಳಿಗೆ ಪ್ರತಿ ವರ್ಷವೂ ದೊಡ್ಡ ತಲೆನೋವು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಶಿಕ್ಷಕರ ವರ್ಗಾವಣೆಗೆ ಸರ್ಕಾರ 2007 ಎ, ಬಿ, ಸಿ ವಲಯ ರಚಿಸಿ ವಿಶೇಷ ಕೌನ್ಸೆಲಿಂಗ್ ಪದ್ಧತಿ ಜಾರಿಗೆ ತಂದಿದ್ದು ದೇಶದಲ್ಲೇ ಮಾದರಿ ವ್ಯವಸ್ಥೆ ಎಂದು ಶ್ಲಾಘನೆಗೂ ಪಾತ್ರವಾಗಿದೆ.
ಆದರೆ, ಕಾನೂನಿನಿಂದ ಉಂಟಾಗಿರುವ ಅನನುಕೂಲ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸದೇ ಇರುವುದರಿಂದ ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ. ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ದಂಪತಿಗಳ ಪಾಡಂತೂ ಹೇಳತೀರದು. ಇಂಥ ಸಮಸ್ಯೆಯನ್ನು ರಾಜ್ಯದ 39 ಸಾವಿರಕ್ಕೂ ಅಧಿಕ ಶಿಕ್ಷಕರು ಎದುರಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ನಿಯಮಾವಳಿಗೆ ಮಾರ್ಪಾಡು ಮಾಡುವುದಾಗಿ ಕಾಂಗ್ರೆಸ್ ತಿಳಿಸಿತ್ತು. ರಜೆ ಮುಗಿಯುತ್ತಾ ಬಂದು, ಶಾಲೆ ಆರಂಭವಾಗುವ ದಿನಗಳು ಸಮೀಪಿಸುತ್ತಿದ್ದರೂ ಅದಕ್ಕೆ ಮುಹೂರ್ತ ಕೂಡಿ ಬಂದಿಲ್ಲ.
2007ರಲ್ಲಿ ಜಾರಿಗೆ ತಂದ ಹೊಸ ನಿಯಮಾವಳಿಯಿಂದಾಗಿ ವರ್ಗಾವಣೆ ಹೆಸರಿನಲ್ಲಿ ಶಿಕ್ಷಕರಿಂದ ಹಣ ಕೀಳುತ್ತಿದ್ದ ಪ್ರವೃತ್ತಿಗೆ ಕಡಿವಾಣ ಬಿತ್ತು. ಪಾರದರ್ಶಕ ವರ್ಗಾವಣೆ ನೀತಿ ರೂಪಿತವಾಗಿದ್ದರಿಂದ ಶಿಕ್ಷಕರು ಒಂದಿಷ್ಟು ಸಮಾಧಾನದ ನಿಟ್ಟುಸಿರೂ ಬಿಟ್ಟಿದ್ದಾರೆ.
ಲೋಪಗಳು-ಪರಿಹಾರ: ಖಾಲಿ ಇರುವ ಎಲ್ಲ ಹುದ್ದೆಗಳಿಗೆ ವರ್ಗಾವಣೆ ಮಾಡದೆ ಶೇ. 50ನ್ನು ನೇಮಕಾತಿಗೆ ಮೀಸಲಿಡಲಾಗಿತ್ತು. ಪಟ್ಟಣ ಪ್ರದೇಶಗಳಲ್ಲಿ ಖಾಲಿಯಿದ್ದ ಹುದ್ದೆಗಳು ಹಲವರಿಗೆ ಸಿಗಲಿಲ್ಲ. ಖಾಲಿ ಇರುವ ಎಲ್ಲ ಹುದ್ದೆಗಳನ್ನು ವರ್ಗಾವಣೆಗೆ ಅರ್ಜಿ ಹಾಕಿದ ಶಿಕ್ಷಕರಿಗೆ ಕೊಡಬೇಕು. ವರ್ಗಾವಣೆಯಿಂದ ಖಾಲಿಯಾದಲ್ಲಿಗೆ ಹೊಸಬರನ್ನು ನೇಮಿಸಲು ಕಾನೂನು ತಿದ್ದುಪಡಿ ತರಬೇಕು. ವರ್ಗಾವಣೆಯಲ್ಲಿ ಹೊರ ಜಿಲ್ಲೆಗಳಿಂದ ಬರುವವರಿಗೆ ಇರುವ ಶೇ. 1ರ ಮಿತಿ ತೆಗೆದು ಹಾಕಬೇಕು. ಪರೀಕ್ಷಾ ಪೂರ್ವ ಅವಧಿ (ಠ್ಠಛಛಿಛಡ್ಟಿಟಿಛ್ಠಣ ಠಜ್ಠ್ಝ್ಟಜ) ಮುಗಿಸಿದ ಎಲ್ಲ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಪತಿ-ಪತ್ನಿ ಜೋಡಣೆಗೆ ಮೀಸಲಿಡಬಾರದು. ಹೊಸ ನೇಮಕಗಳನ್ನು ಕಡ್ಡಾಯವಾಗಿ 'ಸಿ' ವಲಯಕ್ಕೆ, ಖಾಲಿ ಇಲ್ಲದಿದ್ದಲ್ಲಿ 'ಬಿ' ವಲಯಕ್ಕೆ ಹಾಕಬೇಕು. ಬಡ್ತಿ ನೀಡುವ ಮೊದಲು 'ಸಿ' ವಲಯದಲ್ಲಿ ಕೆಲಸ ಮಾಡಿದ್ದರೆ ಪರಿಗಣಿಸಿ, ವೇಟೇಜ್ ನೀಡಬೇಕು. ಟಿಜಿಟಿ ಶಿಕ್ಷಕರನ್ನು ಪ್ರೌಢಶಾಲಾ ಶಿಕ್ಷಕರೆಂದು ಪರಿಗಣಿಸಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ವರ್ಗಾಯಿಸಲು ಅವಕಾಶ ನೀಡಬೇಕು.
ಸರ್ಕಾರ ಗಮನ ನೀಡಲಿ: ಈ ವರ್ಗಾವಣೆ ನೀತಿಯಿಂದ ಶೇ. 90ರಷ್ಟು ಶಿಕ್ಷಕರಿಗೆ ಅನುಕೂಲ. 2007ರಲ್ಲಿ ಈ ಕಾನೂನು ಜಾರಿಗೆ ಬಂದ ಮೇಲೆ 2008ರಲ್ಲಿ ಚುನಾವಣೆ ನಡೆಯಿತು. ವರ್ಗಾವಣೆ ಆಗಲಿಲ್ಲ. 2009ರಲ್ಲಿ ಲೋಪಗಳು ಗಮನಕ್ಕೆ ಬಂದಿದ್ದು, ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಈ ಕಾನೂನು ರೂಪಿಸಿದ್ದ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇಲ್ಲಿಯವರೆಗೂ ಇದಕ್ಕೆ ಸ್ಪಂದನೆ ವ್ಯಕ್ತವಾಗಿಲ್ಲ ಎನ್ನುವುದು ವಿಪರ್ಯಾಸ.ಮಾರ್ಪಾಡು ಅಗತ್ಯ
ವರ್ಗಾವಣೆ ನೀತಿ ದೂರದೃಷ್ಟಿ ಹೊಂದಿದೆ. ಆದರೆ, ಸದ್ಯ ಕೆಲಸ ಮಾಡುವ ಸಿಬ್ಬಂದಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರತಿ ವರ್ಷವೂ ಪತಿ-ಪತ್ನಿ, ಅಂಗವಿಕಲ, ಅನಾರೋಗ್ಯ ಕಾರಣಕ್ಕಾಗಿ ಕೆಲವೇ ಜನರಿಗೆ ವರ್ಗಾವಣೆ ದೊರೆಯುತ್ತಿದೆ. ದೂರದ ಊರುಗಳಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೂ ಸಾಕಷ್ಟು ತೊಂದರೆಯಾಗಿದೆ. ಶಿಕ್ಷಕರು ಅರ್ಜಿ ಸಲ್ಲಿಸಿದ ಮೇಲೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಮಾಡುತ್ತಿರುವ ತಪ್ಪುಗಳಿಂದ, ವರ್ಗಾವಣೆಗೆ ಅರ್ಹತೆಯಿದ್ದರೂ ಶೇ. 25ಕ್ಕೂ ಹೆಚ್ಚು ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ವರ್ಗಾವಣೆ ನೀತಿಗೆ ಅಗತ್ಯ ಮಾರ್ಪಾಡನ್ನು ಮುಂಬರುವ ಶೈಕ್ಷಣಿಕ ವರ್ಷದೊಳಗೆ ರೂಪಿಸಬೇಕು.
- ಶಿಕ್ಷಕರ ವಿವಿಧ ಸಂಘಟನೆಗಳ ಮುಖಂಡರು


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement