ಪ್ರತಿಭಟನೆಗೆ ಸ್ಪಂದಿಸಿ ಸೇತುವೆ ಕಾಮಗಾರಿ ಪ್ರಾರಂಭ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 10
ಸಮೀಪದ ರಾಜೂರು ಗ್ರಾಮದ ಮುಖ್ಯ ರಸ್ತೆಗೆ ಕೆಳಸೇತುವೆ ಇಲ್ಲದೇ ಚರಂಡಿ ಕೊಳಚೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳಿಗೆ ತೊಂದರೆ ಆಗುತ್ತಿದ್ದು, ಇದನ್ನು ತಪ್ಪಿಸಲು ಕೆಳಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಶುಕ್ರವಾರ ರಸ್ತೆಗೆ ಮುಳ್ಳು ಜಡಿದು ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಎಚ್ಚೆತ್ತ ಗ್ರಾಪಂ ಆಡಳಿತ ಶನಿವಾರ ಕೆಳ ಸೇತುವೆ ಕಾಮಗಾರಿ ಕೈಗೊಂಡರು.
ಈ ಸಂದರ್ಭದಲ್ಲಿ ಗ್ರಾಮದ ಡಿವೈಎಫ್‌ಐ ಮುಖಂಡ ಕಳಕೇಶ ಉಕ್ಕಿಸಲ ಮಾತನಾಡಿ, ಪುರ್ತಗೇರಿ ಮತ್ತು ರಾಜೂರು ಗ್ರಾಮ ವ್ಯಾಪ್ತಿಯ ಹೊಲಗಳಿಂದ ಅಪಾರ ಪ್ರಮಾಣ ಮಳೆ ನೀರು ಗ್ರಾಮ ಪ್ರವೇಶಿಸುತ್ತದೆ. ಈ ನೀರು ಸರಾಗವಾಗಿ ಹರಿಯಲು 2 ಕಿರು ಸೇತುವೆ ನಿರ್ಮಾಣ ಅಪೂರ್ಣವಾಗಿವೆ. ಸುತ್ತಲಿನ ಬಡಾವಣೆಗಳು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿವೆ. ಇದರಿಂದ ರಸ್ತೆ ದಾಟಲು ಜನ ಹರಸಾಹಸ ಪಡಬೇಕಾಗಿದೆ. ಕೆಲ ವೃದ್ಧರು, ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ನಿರ್ಮಾಣವಾಗಿರುವ ಕೊಳಚೆ ಗುಂಡಿಯಲ್ಲಿ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇನ್ನೂ ಕೆಲವರು ರೋಗ ಪೀಡಿತರಾಗಿ ಬಳಲುತ್ತಿದ್ದಾರೆ. ಆದರೆ, ಗ್ರಾಪಂ ಆಡಳಿತ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದು ದೂರಿದರು. ಗ್ರಾಮದಲ್ಲಿ ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಿವಾಸಿಗಳ ನರಕಯಾತನೆ ಗೋಳು ಯಾರೂ ಕೇಳುವವರಿಲ್ಲದಂತಾಗಿದೆ. ತೆಗ್ಗು ದಿಣ್ಣೆಗಳಿಂದ ಕೂಡಿರುವ ಗ್ರಾಮವನ್ನು ಪ್ರವೇಶಿಸುವ ಮುಖ್ಯ ರಸ್ತೆ ಚರಂಡಿ ಕೊಳಚೆ ಹರಿಯುವ ಗಟಾರುವಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ಸಂಚರಿಸದ ದುಸ್ಥಿತಿ ನಿರ್ಮಾಣವಾಗಿದೆ. ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ ಎಂದು ಆಪಾದಿಸಿದರು.
ಬಳಿಕ ಗ್ರಾಪಂ ಸದಸ್ಯ ಶಿವಕುಮಾರ ಜಾಧವ ಮಾತನಾಡಿ, ಈ ಹಿಂದೆ 2012-13ರಲ್ಲಿ ರು. 98 ಲಕ್ಷ ಅನುದಾನ ವೆಚ್ಚದಲ್ಲಿ ರಾಜೂರು ಮತ್ತು ಕೊಡಗಾನೂರು ಗ್ರಾಮ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಜತೆ ರಾಜೂರು ಗ್ರಾಮ ಮುಖ್ಯ ರಸ್ತೆ ಮಧ್ಯೆ ಬರುವ 2 ಕಿರು ಸೇತುವೆಗಳ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಆದರೆ, ಕಾರಣಾಂತರದಿಂದ ಕಾಮಗಾರಿ ಸ್ಥಗಿತಗೊಂಡ ಪರಿಣಾಮ ಚರಂಡಿ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಇದೀಗ ಕಾಮಗಾರಿ ಆರಂಭಿಸಲಾಗಿದೆ ಎಂದರು.