ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

Mainashree
Updated On : 11 May 2014, 10:34 am

ಗಜೇಂದ್ರಗಡ: ಸಮೀಪದ ಕೊಡಗಾನೂರಲ್ಲಿ ಕಳೆದ ಎರಡು ದಿನದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಕೂಡಲೇ ದುರಸ್ತಿಗೊಳಿಸಿ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮವು ನಿರಂತರ ಜ್ಯೋತಿ ಯೋಜನೆಗೆ ಒಳಪಟ್ಟಿದ್ದರೂ ಮೇಲಿಂದ ಮೇಲೆ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಅದರಲ್ಲೂ ಕಳೆದ ಎರಡು ದಿನದಿಂದ ಗ್ರಾಮದಲ್ಲಿ ವಿದ್ಯುತ್ ಇಲ್ಲದ ಪರಿಣಾಮ ಹಿಟ್ಟಿನ ಗಿರಣಿಗಳು ಬಂದಾಗಿ, ಜತೆಗೆ ಕುಡಿಯುವ ನೀರು ಪೂರೈಕೆ ಸ್ಥಗಿತವಾಗಿದೆ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಕ್ಕೆ ನಿರಂತರ 6 ಗಂಟೆ ತ್ರೀಫೇಸ್ ವಿದ್ಯುತ್ ಪೂರೈಸಬೇಕು ಎಂದು ಸರ್ಕಾರದ ಆದೇಶ ಇದ್ದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಗೋಳು ಯಾರಿಗೆ ಹೇಳೋಣ ಎಂದು ಪ್ರತಿಭಟನಾ ನಿರತರು ಹೆಸ್ಕಾಂ ವಿರುದ್ಧ ಹರಿಹಾಯ್ದರು. ಅಧಿಕಾರಿಗಳು ರಾತ್ರಿ ಮಾತ್ರ 3 ಗಂಟೆ ತ್ರೀಫೇಸ್ ವಿದ್ಯುತ್ ಕೊಟ್ಟು ಕೈತೊಳೆದು ಕೊಳ್ಳುತ್ತಾರೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೇ ಕರೆಂಟ್ ಯಾವಾಗ ಬರುತ್ತೊ ಎಂದು ಜಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು. ವಿದ್ಯುತ್‌ನ ಅಭಾವದಿಂದ ಬೆಳೆಗೆ ಸಮಯಕ್ಕೆ ಸರಿಯಾಗಿ ನೀರುಣಿಸಲು ಆಗುತ್ತಿಲ್ಲ. ಇದರಿಂದ ಬೆಳೆ ಒಣಗುತ್ತಿವೆ. ಹೆಸ್ಕಾಂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಶೀಘ್ರದಲ್ಲಿ ಬೆಳಗ್ಗೆ ಸತತ 6 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ರೈತರು ಆಗ್ರಹಿಸಿದರು. ಕೊಡಗಾನೂರಿಗೆ ಸಮರ್ಪಕ ವಿದ್ಯುತ್ ಸರಬರಾಜ ಮಾಡಬೇಕು. ಇಲ್ಲದಿದ್ದರೆ ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹಿಸಿ ಗೊಗೇರಿ, ಕುಂಟೋಜಿ, ವದೇಗೊಳ, ಕಣವಿ, ಮಾಟರಂಗಿ, ನಾಗರಸಕೊಪ್ಪ, ಬೆಣಚಮಟ್ಟಿ, ಗ್ರಾಮಗಳ ನೂರಾರು ರೈತರು ಗಜೇಂದ್ರಗಡ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಮಾದರಿಯಲ್ಲಿ ಹೊರಾಟ ನಡೆಸುತ್ತೇವೆ ಎಂದು ಈರಪ್ಪ ನಡಕಟ್ಟಿನ, ಮಹಾಂತಯ್ಯ ಕಪ್ಲಿಮಠ, ರಾಮಪ್ಪ ರಾಠೋಡ, ಶರಣಯ್ಯಾ ಪೂಜಾರ, ರಾಚಯ್ಯಾ ಪೂಜಾರ, ಹುಸೇನಸಾಬ್ ನದಾಫ್, ರುದ್ರಪ್ಪ ಯಡ್ರಾವಿ, ಎಂ.ಬಿ. ತಳವಾರ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement