ರೊಟ್ಟಿ ಕೊಟ್ಟೇವು, ನೀರು ಕೇಳಬ್ಯಾಡ್ರಿ...
ಶಿರಹಟ್ಟಿ: ನಾವು ಬೇರೊಬ್ಬರ ಮನೆಗೆ ಹೋದಾಗ ಮುಖ ತೊಳೆಯಿರಿ, ನೀರು ಕುಡಿಯಿರಿ ಅಂತಾ ಹೇಳುವುದು ವಾಡಿಕೆ. ಆದರೆ, ತಾಲೂಕಿನ ಮಾಚೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದವರಿಗೆ ಒಂದೇ ಉತ್ತರ ಕಾಯ್ದಿದೆ ಊಟಕ್ಕೆ ರೊಟ್ಟಿ ಕೊಟ್ಟೇವು. ಆದರೆ, ನೀರು ಮಾತ್ರ ಕೇಳಬ್ಯಾಡ್ರಿ.
ತಾಲೂಕಿನ ಮಾಚೇನಹಳ್ಳಿ, ರಣತೂರ, ದೇವಿಹಾಳ, ಛಬ್ಬಿ, ಕಡಕೋಳ, ತೆಗ್ಗಿನಭಾವನೂರು, ಜಲ್ಲಿಗೇರಿ, ನವೇಭಾವನೂರು, ಕುಸಲಾಪುರ, ಶಿವಾಜಿನಗರ, ಮಜ್ಜೂರು, ವರವಿ, ಹೊಸಳ್ಳಿ, ಗುಡ್ಡದಪುರ ಗ್ರಾಮಗಳಿಗೆ ಕಳೆದ 2013ರಲ್ಲಿ ನಿರಂತರ ವಿದ್ಯುತ್ ಭಾಗ್ಯ ಲಭಿಸಿದೆ. ವಿದ್ಯುತ್ ಪರಿವರ್ತಕಗಳಿಗೆ ಕಳಪೆ ಗುಣಮಟ್ಟದ ಸಾಮಗ್ರಿ ಅಳವಡಿಸಿದ್ದರಿಂದ ಸುಡುತ್ತಿವೆ. ಹೀಗಾಗಿ ಸದ್ಯ ಎಲ್ಲ ಗ್ರಾಮಗಳೂ ಕಳೆದ 15 ದಿನಗಳಿಂದಲೂ ವಿದ್ಯುತ್ ಇಲ್ಲದೇ ಕಗ್ಗತ್ತಲೆಯಲ್ಲಿ ಕಾಲ ಕಳೆಯುತ್ತಿದೆ. ಗ್ರಾಮ ಪಂಚಾಯಿತಿಯವರಿಗೂ ಕುಡಿಯುವ ನೀರು ಪೂರೈಸಲು ಸಾಧ್ಯವಾಗದಾಗಿದೆ.
ಕುಡಿವ ನೀರಿನ ತೀವ್ರ ತೊಂದರೆ: ವಿದ್ಯುತ್ ಅಭಾವ, ಕಡು ಬಿಸಿಲಿನ ತಾಪಮಾನ ಹಾಗೂ ಸೂಕ್ತ ಜಲಮೂಲಗಳಿಲ್ಲದ ಕಾರಣ ಕುಡಿಯುವ ನೀರಿನ ತೀವ್ರ ತೊಂದರೆ ಒಂದೆಡೆಯಾದರೆ, ಅಶುದ್ಧವಾದರೂ ಕುಡಿಯಲು ನೀರಾದರೂ ಇದೆಯಲ್ಲ ಎಂಬ ಸಮಾಧಾನದೊಂದಿಗೆ ಫ್ಲೋರೈಡ್ಯುಕ್ತ ಹಾಗೂ ಗಡಸು ನೀರನ್ನೇ ಕುಡಿಯುವ ಅನಿವಾರ್ಯತೆ ಇದೆ. ಸಾಂಕ್ರಾಮಿಕ ರೋಗಗಳಿಗೆ ಸವಾಲೋಡ್ಡಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪಾತ್ರೆ ತೊಳೆಯಲು, ಸ್ನಾನ ಮಾಡಲು, ಉಟ್ಟ ಬಟ್ಟೆಗಳನ್ನು ತೊಳೆಯಲೂ ಯೋಗ್ಯವಲ್ಲದ ನೀರನ್ನೇ ಕುಡಿಯಲು ಬಳಸುವ ಅನಿವಾರ್ಯತೆ ಬಂದೊದಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ. ಹಳ್ಳ, ಕೆರೆ, ಬಾವಿಯನ್ನು ಅವಲಂಬಿಸಿರುವ ಈ ಗ್ರಾಮಗಳಲ್ಲಿ ಕೆರೆಗಳು ಬತ್ತಿವೆ. ಕಳೆದ ಹಲವಾರು ವರ್ಷಗಳಿಂದ ಫ್ಲೋರೈಡ್ಯುಕ್ತ ನೀರನ್ನೇ ಜೀವಜಲವನ್ನಾಗಿಸಿಕೊಂಡು ಬಂದ ಮಾಚೇನಹಳ್ಳಿ ಗ್ರಾಮದ ಜನರು ಹಾಗೂ ಜಾನುವಾರುಗಳು ಸದ್ಯ ತೀವ್ರ ನೀರಿನ ತೊಂದರೆ ಅನುಭವಿಸುತ್ತಿವೆ. ಬೋರ್ವೆಲ್ ಸೌಲಭ್ಯವಿದ್ದರೂ ಸರಿಯಾಗಿ ನೀರು ಬರುತ್ತಿಲ್ಲ. ವಿದ್ಯುತ್ ಅಭಾವದಿಂದ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಸುಮಾರು 2 ಕಿ.ಮೀ. ದೂರ ಹೋಗಿ ರೈತರ ಹೊಲಗದ್ದೆಗಳಿಂದ ನೀರು ತರುವ ಅನಿವಾರ್ಯತೆ ಇದೆ.
ಕಳಪೆ ಗುಣಮಟ್ಟದ ಸಾಮಗ್ರಿ ಅಳವಡಿಕೆ: ಮಾಚೇನಹಳ್ಳಿ ಗ್ರಾಮದಲ್ಲಿ 3 ವಿದ್ಯುತ್ ಪರಿವರ್ತಕಗಳಿದ್ದು, ಇವುಗಳಿಗೆ ಹೆಸ್ಕಾಂ ಇಲಾಖೆಯವರು ಸಂಪೂರ್ಣ ಕಳಪೆ ಗುಣಮಟ್ಟದ ಸಾಮಗ್ರಿ ಜೋಡಣೆ ಮಾಡಿದ್ದರಿಂದ ಮೇಲಿಂದ ಮೇಲೆ ಸುಡುತ್ತಿವೆ. ಕಳೆದ 15 ದಿನಗಳಿಂದ ಗ್ರಾಮಸ್ಥರು ಕತ್ತಲೆಯಲ್ಲಿಯೇ ಜೀವನ ಸಾಗಿಸಬೇಕಾಗಿದೆ.
ಹತ್ತಾರು ಬಾರಿ ಜಿಲ್ಲಾಧಿಕಾರಿಗಳಿಗೆ, ತಾಪಂ, ಜಿಪಂ, ಹೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಮಾಚೇನಹಳ್ಳಿ ಗ್ರಾಮದ ಗ್ರಾಪಂ ಸದಸ್ಯ ಶಂಕರ ಮರಾಠೆ ಗಂಭೀರ ಆರೋಪ ಮಾಡಿದ್ದಾರೆ.
ಮಹದೇವಪ್ಪ ಎಂ. ಸ್ವಾಮಿ