ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉಕ್ಕಿದ ಬಾವಿ ನೀರು ಚರಂಡಿಗೆ!

Mainashree
Updated On : 13 May 2014, 9:56 am

ಕನ್ನಡಪ್ರಭ ವಾರ್ತೆ, ನರಗುಂದ, ಮೇ 13
ರಾಜ್ಯಾದ್ಯಂತ ಜನರು ಕುಡಿವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ, ಲಭ್ಯವಿರುವ ನೀರಿನ ಮೂಲಗಳನ್ನು ಸಾಧ್ಯವಾದ ಮಟ್ಟಿಗೆ ಮುಂಬರುವ ಮಳೆಗಾಲದ ವರೆಗೂ ರಕ್ಷಿಸಿಕೊಳ್ಳಬೇಕು ಎನ್ನುವ ಸೂಚನೆ ಸರ್ಕಾರ ನೀಡಿದೆ. ಆದರೆ, ನರಗುಂದ ಪುರಸಭೆ ಅಧಿಕಾರಿಗಳು ಮಾತ್ರ ಇದಕ್ಕೆ ಗಮನ ನೀಡದ್ದರಿಂದ ಪಟ್ಟಣದ ದೇಸಾಯಿ ಬಾವಿಯ ಅಪಾರ ಪ್ರಮಾಣ ನೀರು ಚರಂಡಿ ಪಾಲಾಗುತ್ತಿದೆ.
ಈ ಹಿಂದೆ 2009ನೇ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ದೇಸಾಯಿಬಾವಿಯ ಅಂತರ್ಜಲ ಹೆಚ್ಚಾಗಿ ದಂಡಾಪುರ, ಕಸಬಾ ಓಣಿಗಳಲ್ಲಿ ಮನೆ, ಹಗೆಗಳು ಕುಸಿದಿದ್ದರಿಂದ ಜನತೆ ಭಯದ ವಾತವರಣದಲ್ಲಿ ಜೀವನ ಸಾಗಿಸಬೇಕಾಗಿತ್ತು. ಆಗ ಪುರಸಭೆ ಆಡಳಿತ ಮಂಡಳಿ ಮನೆ ಕುಸಿತಕ್ಕೆ ಕಾರಣ ಹುಡುಕಲು ಮುಂಬೈಯಿಂದ ವಿಶೇಷ ನೀರಿನ ತಜ್ಞರನ್ನು ಕರಿಸಿ ಪರಿಶೀಲಿಸಿದಾಗ ಈ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿದ್ದರಿಂದ ಮನೆ ಮತ್ತು ಹಗೆಗಳು ಕುಸಿಯುತ್ತವೆ. ಅದಕ್ಕೆ ದೇಸಾಯಿಬಾವಿ ನೀರನ್ನು ಮೋಟರ್ ಮೂಲಕ ಹೊರಗೆ ಹಾಕಿಸಬೇಕೆಂದು ತಜ್ಞರು ಸೂಚನೆ ನೀಡಿದ್ದರು. ಅಂದಿನಿಂದ ಪುರಸಭೆಯವರು ಬಾವಿಯ ನೀರನ್ನು ಹಗಲು ರಾತ್ರಿ ಮೋಟರ್‌ಗಳ ಮೂಲಕ ಹೊರ ಹಾಕಿಸಿದಾಗ ಸಮಸ್ಯೆ ಕಡಿಮೆಯಾಗಿತ್ತು. ಈ ಬೇಸಿಗೆಯಲ್ಲಿಯೂ ಅದನ್ನೇ ಮುಂದುವರಿಸಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಶುದ್ಧ ನೀರಿನ ಘಟಕ: ಪುರಸಭೆಯ ಆಡಳಿತ ಮಂಡಳಿ ಈ ಬಾವಿಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಬಾವಿ ಪಕ್ಕದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿ ಪಟ್ಟಣದ ಜನತಗೆ ಶುದ್ಧ ನೀರು ನೀಡಲು ಪ್ರಾರಂಭ ಮಾಡಿದರು. ಆದರೆ, ಸುಮಾರು ತಿಂಗಳಗಳಿಂದ ಈ ಶುದ್ಧ ನೀರಿನ ಘಟಕಕ್ಕೆ ಬಾವಿಯಿಂದ ನೀರು ಪೂರೈಕೆ ಮಾಡುವ ಪೈಪ್‌ಗಳು ಒಡೆದಿವೆ ಎನ್ನುವ ನೆಪ ಮಾಡಿಕೊಂಡು ಶುದ್ಧ ನೀರಿನ ಘಟಕ ಬಂದ್ ಮಾಡಿ ಬಾವಿಯಿಂದ ಎತ್ತುವ ನೀರನ್ನು ವ್ಯರ್ಥವಾಗಿ ಚರಂಡಿಗೆ ಹರಿಸುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ನೀರಿನ ಬರವಿದೆ: ಒಂದು ಕಡೆ ಸರ್ಕಾರ ಬೇಸಿಗೆಯಲ್ಲಿ ಜನತೆಗೆ ನೀರು ಪೂರೈಕೆ ಮಾಡಲಿಕ್ಕೆ ಕೋಟ್ಯಂತರ ರುಪಾಯಿ ಖರ್ಚು ಮಾಡುವ ಮೂಲಕ ನೀರು ಪೂರೈಕೆಯ ಕಾರ್ಯದಲ್ಲಿ ತೊಡಗಿದೆ. ಆದರೆ, ನರಗುಂದ ಪಟ್ಟಣದಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಅಮೂಲ್ಯವಾದ ಅಂತರ್ಜಲ ಸಂಪತ್ತನ್ನು ಸಾವಿರಾರು ರು. ಖರ್ಚು ಮಾಡಿ ನೀರು ಚರಂಡಿಗೆ ಬಿಡುತ್ತಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ.

 ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement