ಪೈಲಟ್ ಯೋಜನೆ ಖಂಡಿಸಿ ಧರಣಿ
ಗದಗ: ಸೀಮೆ ಎಣ್ಣೆಗೆ ನೇರ ಸಬ್ಸಿಡಿ ಮತ್ತು ಎಸ್‌ಎಂಎಸ್ ಮೂಲಕ ಸೀಮೆ ಎಣ್ಣೆ ಪಡೆಯಲು ಜಾರಿಗೊಳಿಸಲು ಉದ್ದೇಶಿಸಿರುವ ಪೈಲೆಟ್ ಯೋಜನೆಯನ್ನು ಕೈ ಬಿಡಲು ಆಗ್ರಹಿಸಿ ಸ್ಲಂ ಜನಾಂದೋಲನಾ ಸಮಿತಿ ಹಾಗೂ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಸದಸ್ಯರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸ್ಲಂ ಸಮಿತಿಯ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿ, ರಾಜ್ಯದ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಜನ ಈವರೆಗೂ ವಿದ್ಯುತ್ ಸಂಪರ್ಕ ಹೊಂದಿಲ್ಲ. ಅಂಥಹ ಜನ ಮೊಬೈಲ್ ಬಳಕೆ ಮಾಡುವುದು ದೂರದ ಮಾತು. ಇದನ್ನು ತಿಳಿದುಕೊಳ್ಳದೆ ರಾಜ್ಯ ಸರ್ಕಾರ ಬಡವರಿಗೆ ಎಸ್‌ಎಂಎಸ್ ಮೂಲಕ ಸೀಮೆ ಎಣ್ಣೆ ಪಡೆಯಬೇಕೆಂದು ಸುತ್ತೋಲೆ ಹೊರಡಿಸಿರುವುದು ಖಂಡನೀಯ ಎಂದರು.
ಸ್ಲಂ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ ಮಾತನಾಡಿ, ರಾಜ್ಯದಲ್ಲಿಯ ಅಕ್ರಮ ಪಡಿತರ ಚೀಟಿಗಳನ್ನು ತಡೆಹಿಡಿಯುವ ನೆಪದಲ್ಲಿ ಕೊಳಗೇರಿ ನಿವಾಸಿಗಳ ಹಾಗೂ ಬಡವರಿಗೆ ವರದಾನವಾಗಿರುವ ಸೀಮೆ ಎಣ್ಣೆ ವಿತರಣೆಯನ್ನು ಪೈಲೆಟ್ ಯೋಜನೆ (ಎಫಿಕ್ ಕಾರ್ಡ್) ಮೂಲಕ ಜಾರಿಗೊಳಿಸಲು ಉದ್ದೇಶಿಸಿರುವುದು ಖಂಡನೀಯ. ಈಗಾಗಲೇ ಅಡುಗೆ ಅನಿಲ ನೇರ ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ನೀಡಲಾಗಿದೆ. ಮತ್ತೆ ಇಂತಹದ್ದೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕೈ ಹಾಕಿರುವುದು ದುರ್ದೈವವೇ ಸಂಗತಿ ಎಂದರು.
ಸ್ಲಂ ಸಮಿತಿಯ ಅಧ್ಯಕ್ಷ ಅಶೋಕ ಮ್ಯಾಗೇರಿ, ಮಹಿಳಾ ಸಮಿತಿಯ ಅಧ್ಯಕ್ಷ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಯುವ ಸಮಿತಿಯ ಅಧ್ಯಕ್ಷ ಶರೀಫ ಬಿಳೆಯಲಿ, ಉಪಾಧ್ಯಕ್ಷ ಯಲಪ್ಪ ರಾಮಗಿರಿ ಮುಂತಾದವರು ಮಾತನಾಡಿದರು.
ಧರಣಿಯಲ್ಲಿ ಸ್ಲಂ ಸಮಿತಿಯ ಇಬ್ರಾಹಿಂ ಮುಲ್ಲಾ, ಪರುಶರಾಮ ಕಾಳೆ, ಅಬುಬಕರ ಮಕಾಂದಾರ, ಅನೀಲ ಕಾಳೆ, ಆರತಿ.ಎನ್, ನಜಮುನಿಸ್ಸಾ ಮುರಗೋಡ, ಬಸವರಾಜ ಬಿಳೆಯಲಿ, ಮೆಹರುನಿಸ್ಸಾ ಢಾಲಾಯತ, ರಾಧಾ ಬೋಡಗಲ್ಲ, ಸೊಫಿಯಾ ಹರ್ಲಾಪೂರ, ಬಾಬುಸಾಬ ಅಗಡಿ, ಯಶವಂತ ಗೋಸಾವಿ, ನವೀನ ಬಣಕಾರ, ಶಂಕ್ರಪ್ಪ ಹದ್ಲಿ, ಪೀರಸಾಬ ಬಳ್ಳಾರಿ, ಮೌಲಾಸಾಬ ಮುಜಾವರ, ರಾಜು ಬಣಕಾರ, ನಾಗರಾಜ ಮುಟಗಾರ, ಬಸವರಾಜ ಈರಣ್ಣನವರ, ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂಗಳಿಂದ ನೂರಾರು ನಿವಾಸಿಗಳು ಭಾಗವಹಿಸಿದ್ದರು.