ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಷ್ಟ್ರೀಯ ಏಕತೆಗೆ ಶಂಕರರಿಂದ ತಾತ್ವಿಕ ನೆಲೆ: ಸ್ವಾಮಿ ಚಿದ್ರೂಪಾನಂದ

Mainashree
Updated On : 13 May 2014, 9:56 am

ಕನ್ನಡಪ್ರಭ ವಾರ್ತೆ, ಗದಗ, ಮೇ 12
ಅನೇಕ ಭಾಷೆ, ಪಂಥ, ಆಚಾರ-ವಿಚಾರಗಳನ್ನು ಹೊಂದಿದ ನಮ್ಮ ದೇಶಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಶ್ರೀ ಶಂಕರಾಚಾರ್ಯರು ತಮ್ಮ ಅದ್ವೈತ ತತ್ವದ ಮೂಲಕ ರಾಷ್ಟ್ರೀಯ ಏಕತೆಗೆ ತಾತ್ವಿಕ ನೆಲೆ ಒದಗಿಸಿದರು ಎಂದು ಆರ್ಷ ವಿದ್ಯಾಪೀಠದ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಗುರುಗಳು ಹೇಳಿದರು.
ಅವರು ಇಲ್ಲಿನ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಏರ್ಪಡಿಸಿದ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. 'ಸರ್ವಂ ಖಲ್ವಿದಂ ಬ್ರಹ್ಮ' ಎಂಬ ನುಡಿಯಂತೆ ಹಿಂದೂಗಳು ಪ್ರತಿಯೊಬ್ಬನಲ್ಲಿ ಹಾಗೂ ಪ್ರತಿಯೊಂದು ವಸ್ತುವಿನಲ್ಲಿ ದೇವರನ್ನು ಕಾಣುತ್ತಾರೆ. ಕಣ-ಕಣದಲ್ಲಿಯೂ ಭಗವಂತನಿದ್ದಾನೆ. ಇದನ್ನೇ ಆಧಾರವಾಗಿಟ್ಟುಕೊಂಡು ಶ್ರೀ ಶಂಕರರು ಅದ್ವೈತ ತತ್ವ ಪ್ರತಿಪಾದನೆ ಮಾಡಿ ರಾಷ್ಟ್ರೀಯ ಏಕತೆಗೆ ತಾತ್ವಿಕ ತಳಹದಿ ನೀಡಿದರು. ಇಂದಿನ ಧಾವಂತದ ಮತ್ತು ದ್ವೇಷಮಯ ವಾತಾವರಣದಲ್ಲಿ ಏಕತೆ ಬೆಸೆಯಲು ಶ್ರೀ ಶಂಕರರ ತತ್ವಗಳು ಹೆಚ್ಚು ಪ್ರಸ್ತುತ. ಆದ್ದರಿಂದ ಶಂಕರರ ಅನುಯಾಯಿಗಳು ಪ್ರಸ್ಥಾನತ್ರಯಗಳು ಹಾಗೂ ಶಂಕರರ ಭಾಷ್ಯಗಳನ್ನು ಸ್ವಾಧ್ಯಾಯ ಮತ್ತು ಪ್ರವಚನಗಳ ಮೂಲಕ ಪ್ರಚಾರಪಡಿಸಬೇಕೆಂದು ಹೇಳಿದರು.
ಅಡವೀಂದ್ರ ಸ್ವಾಮಿಗಳ ಮಠದ ಮಹೇಶ್ವರ ಸ್ವಾಮಿಗಳು, ಎ.ಡಿ. ಗೋಂಡಖಿಂಡಿ, ಡಿ.ಬಿ. ಇನಾಮದಾರ, ದೀಪಕ ಸೊಂಡುರ, ಡಿ.ಕೆ. ದೇಶಪಾಂಡೆ, ಬಿ.ವಿ. ಮುನವಳ್ಳಿ, ಎ.ಕೆ. ತಮ್ಮಣ್ಣವರ, ದತ್ತಾತ್ರೇಯ ನಾಡಿಗೇರ, ರಾಮಚಂದ್ರ ಪೂಜಾರ, ಪ್ರಶಾಂತ ಪಾಟೀಲ, ಗಣಪತಿ ಕೌಜಲಗಿ, ಗೌರಕ್ಕ ಪಾಟೀಲ, ಡಿ.ಎಂ. ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಎಸ್.ಎಲ್. ಕುಲಕರ್ಣಿ ಮುಂತಾದವರು ಪಾಲ್ಗೊಂಡಿದ್ದರು.
ರತ್ನಾಕರ ಭಟ್ ಜೋಶಿ ವೇದಘೋಷಗೈದರು. ರಾಮಚಂದ್ರ ಮೋನೆ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ಪರಿಚಯಿಸಿದರು. ಅನೀಲ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ರವಿ ಪೂಜಾರ ವಂದಿಸಿದರು. ಶಂಕರಾಚಾರ್ಯ ಯುವಕ ಮಂಡಳದ ಸದಸ್ಯರು, ವಿವಿಧ ಆಧ್ಯಾತ್ಮಿಕ ಸಂಘಗಳ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement