ಸಕ್ಕರೆ ಕಾರ್ಖಾನೆಗೆ ಕಬ್ಬು ಬೆಳೆಗಾರರ ಮುತ್ತಿಗೆ
ಮುಂಡರಗಿ: ಸರ್ಕಾರ ಕಬ್ಬಿಗೆ 2500 ಬೆಲೆ ನಿಗದಿಪಡಿಸಿದ್ದರೂ ತಾಲೂಕಿನ ಗಂಗಾಪುರ ಗ್ರಾಮದ ವಿಜಯನಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರೈತರಿಗೆ ಕಡಿಮೆ ಬೆಲೆ ನೀಡುತ್ತಿದೆ ಎಂದು ಆರೋಪಿಸಿ ನೂರಾರು ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಾರ್ಖಾನೆಯ ಮುಖ್ಯ ದ್ವಾರವನ್ನು ಬಂದ್ ಮಾಡಿ ಒಳಗಿದ್ದವರಿಗೆ ಹೊರ ಹೋಗದಂತೆ ಮತ್ತು ಹೊರಗಿನವರನ್ನು ಒಳಹೋಗದಂತೆ ದಿಗ್ಬಂಧನೆ ಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯನಗರ ಸಕ್ಕರೆ ಕಾರ್ಖಾನೆ ಸರ್ಕಾರದ ಆದೇಶ ಉಲ್ಲಂಘಿಸಿ ಪ್ರತಿ ಟನ್ ಕಬ್ಬಿಗೆ 1800 ಬೆಲೆ ನೀಡುತ್ತಿದೆ. ಈಗಾಗಲೇ ಕಬ್ಬನ್ನು ನೀಡಿರುವ ರೈತರಿಗೆ 2-3 ತಿಂಗಳಾದರೂ ಬಾಕಿ ಹಣ ಪಾವತಿಸಿಲ್ಲ ಎಂದು ರೈತರು ಆರೋಪಿಸಿದರು.