ಪಿಸಿ ದೇಹದಾರ್ಢ್ಯ ಪರೀಕ್ಷೆ
ಗದಗ: ಜಿಲ್ಲೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸದರಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೇ 19ರಿಂದ ಜೂನ್ 2ರ ವರೆಗೆ ಸಂಹಿಷ್ಣುತೆ, ದೇಹದಾರ್ಢ್ಯ ಪರೀಕ್ಷೆ ಗದಗ ಶಹರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ಸಿಪಿಸಿ, ಮಪಿಸಿ ಹುದ್ದೆಗೆ ಆಯ್ಕೆ ಬಯಸಿರುವ ಆಕಾಂಕ್ಷಿಗಳಲ್ಲಿ ಅರ್ಹರಿರುವವರಿಗೆ ಕರೆಪತ್ರ ಇಲಾಖೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಕರೆ ಪತ್ರದಲ್ಲಿ ನೀಡಿರುವ ಸೂಚನೆ ಓದಿಕೊಂಡು, ಸಂಹಿಷ್ಣುತೆ, ದೇಹದಾರ್ಢ್ಯ ಪರೀಕ್ಷೆಗೆ ಅವರಿಗೆ ನಿಗದಿಪಡಿಸಿದ ದಿನದಂದು ಕರೆಪತ್ರ, ಗುರುತಿನ ಚೀಟಿಯೊಂದಿಗೆ ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ-8ಬಿರಲ್ಲಿ ಸೂಚಿಸಿರುವ ಯಾವುದಾದರೊಂದು ಗುರುತಿನ ಪತ್ರದೊಂದಿಗೆ ಹಾಜರಾಗುವುದು. ಸದರಿ ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ದೈಹಿಕವಾಗಿ ಸದೃಢರಿರಬೇಕು. ಸಹಿಷ್ಣುತೆ ಪರೀಕ್ಷೆಯ ಸಂದರ್ಭ ಸಂಭವಿಸುವ ಯಾವುದೇ ರೀತಿಯ ಅನಾಹುತ, ತೊಂದರೆಗಳಿಗೆ ಪೊಲೀಸ್ ಇಲಾಖೆ, ನೇಮಕಾತಿ ಸಮಿತಿ ಜವಾಬ್ದಾರರಾಗುವುದಿಲ್ಲ. ಅಭ್ಯರ್ಥಿಗಳು ಅವರ ಸ್ವಂತ ಹಿತದೃಷ್ಟಿಯಿಂದ ಅವರ ದೇಹದ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು, ಅಭ್ಯರ್ಥಿ ಆರೋಗ್ಯವು ಎಲ್ಲ ರೀತಿಯಿಂದಲೂ ಸದೃಢವಾಗಿದೆ ಎಂದು ಖಚಿತಪಡಿಸಿಕೊಂಡು ಇಲಾಖೆ ನಡೆಸುವ ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆಗೆ ಎಲ್ಲ ವಿಧದಿಂದಲೂ ಅರ್ಹನೆಂದು ಮುಂಚಿತವಾಗಿಯೇ ತಿಳಿದು ಹಾಜರಾಗಬೇಕೆಂದು ಸೂಚಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಗದಗ ಪೊಲೀಸ್ ಕಂಟ್ರೊಲ್ ರೂಮ್ ದೂರವಾಣಿ: 08372-238300ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.