ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭಕ್ತರ ಹರ್ಷೋದ್ಗಾರ ನಡುವೆ ಶ್ರೀಗಳ ಮೆರವಣಿಗೆ

Mainashree
Updated On : 15 May 2014, 9:58 am

ಶಿರಹಟ್ಟಿ: ಸರ್ವಧರ್ಮ ಸಮನ್ವಯ ಹಿಂದು- ಮುಸ್ಲಿಂ ಭಾವೈಕ್ಯತೆಯ ಶ್ರೀ ಜಗದ್ಗುರು ಫಕೀರೇಶ್ವರ ಜಾತ್ರೆ ಮೇ 14ರಂದು ಜರುಗಿತು. ಎಲ್ಲರೂ ಸ್ವಾಮೀಜಿ ನೋಡಲು ಕಾತರರಾಗಿದ್ದರು. ಎಲ್ಲರ ಬಾಯಲ್ಲೂ ಹರ ಹರ ಮಹಾದೇವ ಫಕೀರೇಶ್ವರ ಮಹಾರಾಜಕೀ ಜೈ ಎಂಬ ಮಂತ್ರ ಘೋಷ. ಕೋಮು ಸೌಹಾರ್ದ ಪ್ರತೀಕವಾಗಿರುವ ಶಿರಹಟ್ಟಿ ಸಂಸ್ಥಾನ ಮಠದ 13ನೇ ಪಟಾಧ್ಯಕ್ಷರಾದ ಜ.ಗು. ಫಕೀರ ಸಿದ್ಧರಾಮ ಶ್ರೀಗಳು ಶ್ರೀಮಠದ ಸಂಪ್ರದಾಯದಂತೆ ಜಾತ್ರಾ ಮಹೋತ್ಸವಕ್ಕೂ ಪೂರ್ವ ಭಿಕ್ಷಾಟನೆಗಾಗಿ ಮಠದಿಂದ ಮೇ 4ರಂದು ಸಂಚಾರ ಕೈಗೊಂಡಿದ್ದರು. ಬುಧವಾರ ಬೆಳಗ್ಗೆ 8.30ಕ್ಕೆ ಹರಿಪುರ ಗ್ರಾಮ ಬಿಟ್ಟು ಶಿರಹಟ್ಟಿ ಪಟ್ಟಣದ ಮೇಗೇರಿ ಓಣಿಯಲ್ಲಿರುವ ಫಕೀರೇಶ್ವರ ಗದ್ದುಗೆ (ಪಾದಗಟ್ಟಿ) ತಲುಪಿದ ಶ್ರೀಗಳು ಅಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ 9.30ಕ್ಕೆ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದ ಮೆರವಣಿಗೆಯೊಂದಿಗೆ ಮಠಕ್ಕೆ ಆಗಮಿಸಿತು. ಶ್ರೀಗಳು ಹರಿಪುರ ಗ್ರಾಮ ಬಿಡುತ್ತಿದ್ದಂತೆ ಮಠದ ಭಾವೈಕ್ಯ ಸಂಕೇತಗಳಾದ ಆನೆ ಮತ್ತು ಕುದುರೆಗಳ ಮೆರವಣಿಗೆ. ಭಜನೆ, ಡೊಳ್ಳು, ಜಾಂಜ್ ಮೇಳ, ನಂದಿಕೋಲು ಸಕಲ ವಾದ್ಯ, ವೈಭವಗಳೊಂದಿಗೆ ಮೆರವಣಿಗೆ ಸಾಗಿತು. ಶ್ರೀಗಳನ್ನು ಸಂಭ್ರಮದಿಂದ ಪಟ್ಟಣಕ್ಕೆ ಕರೆ ತರಲಾಯಿತು. ನೂರಾರು ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತಾದಿಗಳು ಶ್ರೀಗಳಿಗೆ ನಮಿಸಿ ಅವರ ಆಶೀರ್ವಾದ ಪಡೆದರು. ಹಳ್ಳಿ, ಪಟ್ಟಣ, ಜಿಲ್ಲೆಗಳಿಂದ ಭಾರಿ ಪ್ರಮಾಣದಲ್ಲಿ ಜನಸ್ತೋಮ ಸೇರಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement