ದೇಶದಲ್ಲಿ ಮೋದಿ ಅಭಿವೃದ್ಧಿ ಅಲೆ
ಕನ್ನಡಪ್ರಭ ವಾರ್ತೆ, ಕುಮಟಾ, ಮೇ 17
ಜಾತಿ, ಮತ ಹಾಗೂ ವರ್ಗ ಭೇದ ಮರೆತು ಉತ್ತರ ಕನ್ನಡದ ಜನತೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿರುವುದೇ ಅನಂತಕುಮಾರ ಹೆಗಡೆ ಬಹುಮತದಿಂದ ಗೆಲ್ಲಲು ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ ತಿಳಿಸಿದರು.
ಶನಿವಾರ ಸಂಜೆ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಪ್ರಧಾನಿಯಾಗಬೇಕೆಂದು ಮತದಾರ ಬಯಸಿದ್ದಾನೆ. ಇಡೀ ದೇಶದಲ್ಲಿ ಮೋದಿ ಅಭಿವೃದ್ಧಿ ಚಿಂತನೆಯ ಅಲೆ ಬೀಸಿದೆ. ಅನಂತಕುಮಾರ ಹೆಗಡೆ ಯಾವ ಕಳಂಕವಿಲ್ಲದೇ ಗಮನಾರ್ಹ ಸಾಧನೆ ಮಾಡಿದ್ದಾರೆ. ಅನಂತಕುಮಾರ ಹೆಗಡೆ ಸಂಸದರಾಗಿರುವಾಗ ಕೇಂದ್ರದಲ್ಲೂ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿರುವುದು ಇದೇ ಪ್ರಥಮ ಬಾರಿಯಾಗಿದೆ. ಇದರಿಂದ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅಭಿವೃದ್ಧಿಗೆ ಶಕ್ತಿ ತುಂಬಿದಂತಾಗಿದೆ. ಈ ದಿಶೆಯಲ್ಲಿ ಕಾರ್ಯ ಮಾಡಲು ಎಲ್ಲರೂ ಅವರ ಜೊತೆ ಕೈಜೋಡಿಸಬೇಕು.
ಜಿಲ್ಲೆಯ ಅಭಿವೃದ್ಧಿ ಕುರಿತು ಸಚಿವ ದೇಶಪಾಂಡೆ ನಿರ್ಲಕ್ಷ್ಯ, ಶೂನ್ಯ ಸಾಧನೆಯನ್ನು ಮತದಾರ ಮರೆತಿಲ್ಲ. ಕಾಂಗ್ರೆಸ್‌ನಲ್ಲಿ ಯುವ ಮುಖಂಡರಿಗೆ ಅವಕಾಶ ನಿಡದೇ ಪುತ್ರನಿಗೆ ಅಧಿಕಾರ ನೀಡಬೇಕೆಂಬ ಮಹತ್ವಾಕಾಂಕ್ಷೆಗೆ ಹೊರಟ ದೇಶಪಾಂಡೆ ನಡೆ ಹಿನ್ನಡೆಗೆ ಕಾರಣವಾಯಿತು. ಅಧಿಕಾರಿ ವರ್ಗದವರೂ ಅನಂತಕುಮಾರ ಹೆಗಡೆಯವರನ್ನೇ ಬೆಂಬಲಿಸುವ ಮೂಲಕ ದೇಶಪಾಂಡೆ ದರ್ಪ ರಾಜಕಾರಣಕ್ಕೆ ಉತ್ತರ ನೀಡಿದ್ದಾರೆ ಎಂದರು.
5ನೇ ಬಾರಿ ಆಯ್ಕೆಯಾದ ಅನಂತಕುಮಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸಂಸದರಿಗೆ ಪ್ರಮುಖ ಸ್ಥಾನಮಾನಗಳು ಲಭಿಸಿದರೆ ಅದು ಸಂತಸದ ಸಂಗತಿಯಾಗಿದೆ. ಜಿಲ್ಲೆಯ ಅರಣ್ಯ ಅತಿಕ್ರಮಣ, ಕೃಷಿ, ರೇಲ್ವೆ ಮುಂತಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸಂಪೂರ್ಣ ವಿಶ್ವಾಸ ಇದೆ.
ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಪ್ರಮುಖರಿಗೆ, ಚುನಾವಣೆಯ ಉಸ್ತುವಾರಿ ವಹಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಘ ಪರಿವಾರ, ಸಂಘಟನೆಯ ಉಸ್ತುವಾರಿ ವಹಿಸಿದ್ದ ಗಿರೀಶ ಪಟೇಲ, ಗಣೇಶರಾಯರು, ಭಾನುಪ್ರಕಾಶ ಮತ್ತಿತರರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ವೆಂಕಟೇಶ ನಾಯಕ, ವಿನೋದ ಪ್ರಭು, ಮದನ ನಾಯಕ, ಸೂರಜ ನಾಯ್ಕ, ಜಯಶ್ರೀ ಬರ್ಗಿ, ಅಶೋಕ ಪ್ರಭು ಮತ್ತಿತರರು ಇದ್ದರು.