ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೊಂಚಿಗೇರಿ ಗ್ರಾಮಸ್ಥರ ಗೋಳು ಕೇಳೋರಿಲ್ಲ

Lingaraj Badiger
Updated On : 19 May 2014, 11:40 am

ಶಿರಹಟ್ಟಿ: ಮಲ ಮೂತ್ರ ವಿಸರ್ಜನೆ ಮಾಡಿದ ನೀರನ್ನೇ ಕುಡಿಯಬೇಕು. ಬಯಲು ಜಾಗೆ, ರಸ್ತೆ ಪಕ್ಕದಲ್ಲಿಯೇ ಮಹಿಳೆಯರು ಬಹಿರ್ದೆಸೆಗೆ ಹೋಗಬೇಕು. ರೈತರ ಹೊಲ ಮತ್ತು ಸ್ಮಶಾನಕ್ಕೆ ಹೋಗಲು ರಸ್ತೆಯಿಲ್ಲ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಸರ್ಕಾರದ ಪ್ರತಿಯೊಂದು ಸೌಲಭ್ಯಗಳಿಂದ ಕೊಂಚಿಗೇರಿ ಗ್ರಾಮಸ್ಥರು ವಂಚಿತರಾಗಿದ್ದು, ಅವರ ಕೂಗು ಕೇಳುವವರಿಲ್ಲವೇನೊ ಎನ್ನುವಷ್ಟು ಸಮಸ್ಯೆಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ಮಹಿಳೆಯರು, ಮಕ್ಕಳು ಬಹಿರ್ದೆಸೆಗೆ ಬಯಲಿನಲ್ಲಿಯೇ ಹೋಗುತ್ತಿದ್ದು, ಮಳೆ ಬಂದರೆ ಎಲ್ಲ ಗಲೀಜು ಹಳ್ಳಕ್ಕೆ ಹರಿದು ಹೋಗುತ್ತಿದೆ. ಹಳ್ಳದ ನೀರನ್ನೇ ಟ್ಯಾಂಕ್ಗೆ ಏರಿಸಿ ಗ್ರಾಮದ ಜನರಿಗೆ ಪಂಚಾಯಿತಿಯವರು ಕುಡಿಯಲು ಪೂರೈಸುತ್ತಿದ್ದು, ಜನ ಹತ್ತಾರು ಕಾಯಿಲೆಗೆ ಸಿಲುಕಿ ನರಳುವಂತಾಗಿದೆ. ಇಂದಿಗೂ ಕುಡಿಯಲು ಶುದ್ಧವಿಲ್ಲದ, ಯೋಗ್ಯವಲ್ಲದ, ವಿಷಯುಕ್ತ ನೀರನ್ನೇ ಪೂರೈಕೆ ಮಾಡುತ್ತಿದ್ದಾರೆ. ಇಷ್ಟಾದರೂ ಇಂದಿಗೂ ಕುಡಿವ ನೀರಿಗೆ ಪರ್ಯಾಯ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಕೈಗೊಂಡಿಲ್ಲ ಎಂದು ಸಮಾಜ ಸೇವಕ ಶಿವಾನಂದ ದೇವೇಂದ್ರಪ್ಪ ವಾಲೀಕಾರ ಆರೋಪಿಸಿದ್ದಾರೆ.
ಹಣ ದುರ್ಬಳಕೆ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಪಿಡಿಒ 13ನೇ ಹಣಕಾಸು ಯೋಜನೆಯಡಿ ಯಾವುದೇ ಕಾಮಗಾರಿ ಮಾಡದೇ ರು. 2.50 ಲಕ್ಷ ಬಟವಡೆ ಮಾಡಿಕೊಂಡಿದ್ದಾರೆ. ಕೊಂಚಿಗೇರಿ ಗ್ರಾಪಂನಲ್ಲಿ ಬಾರಿ ಅವ್ಯವಹಾರ ನಡೆದಿದ್ದು, ಎರಡು ತಿಂಗಳಿಂದ ಪಿಡಿಒ ಬಂದಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಇದೇ ಯೋಜನೆಯಡಿ ಚರಂಡಿ ಕಾಮಗಾರಿ ಮಾಡದೇ ಲಕ್ಷಾಂತರ ಹಣ ದುರ್ಬಳಕೆಯಾಗಿದೆ ಎಂದು ಗ್ರಾಪಂ ಸದಸ್ಯ ನೀಲಪ್ಪ ಕಡೇಮನಿ ಗಂಭೀರವಾಗಿ ಆರೋಪಿಸುತ್ತಾರೆ.
ಗ್ರಾಮದಲ್ಲಿ 70ಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದು, ತಾಪಂ ಇಒ ಎಂ. ನಾರಾಯಣ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ ಫಲಾನುಭವಿಗಳಿಗೆ ಶೌಚಾಲಯ ಕಟ್ಟಿಕೊಂಡ ಬಿಲ್ ನೀಡಲು ಮೀನಮೇಷ ಮಾಡುತ್ತಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೊಕ್ಕರಗುಂದಿ, ಬೂದಿಹಾಳ, ಚಿಕ್ಕಸವಣೂರು ಗ್ರಾಮಗಳು ಸೇರಿ ಒಟ್ಟು 140 ಗುಡಿಸಲು ಮನೆಗಳು ವಾಪಾಸ್ ಹೋಗಿವೆ ಎಂದು ದೂರಿದರು.

ಕಾಮಗಾರಿ ಕಳಪೆ
ಕೊಂಚಿಗೇರಿ ಊರ ಹಳ್ಳಕ್ಕೆ ಕಳೆದ ವರ್ಷ ರು. 10 ಲಕ್ಷ ವೆಚ್ಚದಲ್ಲಿ ಜಿಪಂ ಇಲಾಖೆಯವರು ರೈತರ ಹೊಲಕ್ಕೆ ನೀರು ಹರಿದು ಹೋಗದಂತೆ ತಡೆಗೋಡೆ ನಿರ್ಮಿಸಿದ್ದು, ಕಳಪೆ ಕಾಮಗಾರಿಯಿಂದಾಗಿ ತಡೆಗೋಡೆ ಒಡೆದಿದೆ. ಪಂಚಾಯಿತಿಗೆ ತೆರಿಗೆ ಹಣ ಕಟ್ಟದೇ ಇದೇ ಹಳ್ಳದಲ್ಲಿ ಅಕ್ರಮ ಮರಳು ಸಾಗಾಟ ಕಾರ್ಯವೂ ಅವ್ಯಾಹತವಾಗಿ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರ ನೀಡಿದರೂ ಕ್ರಮ ಕೈಗೊಂಡಿಲ್ಲ. ಹಣದ ದುರ್ಬಳಕೆ, ಕಳಪೆ ಕಾಮಗಾರಿ ನಡೆದಿರುವ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಸದಸ್ಯ ನೀಲಪ್ಪ ಕಡೇಮನಿ, ಶಿವಾನಂದ ದೇವೇಂದ್ರಪ್ಪ ವಾಲೀಕಾರ, ಹನಮಂತಪ್ಪ ಗೌರಣ್ಣನವರ, ರಾಜು ಹತ್ತಿಕಾಳ, ಕಿರಣ ಭಜಂತ್ರಿ, ಶುಭಾನಸಾಬ ಹಾವನೂರ ಆಗ್ರಹಿಸಿದ್ದಾರೆ.
- ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement