ಕೋಳಿವಾಡ ವಿರುದ್ಧ ಕ್ರಮ ಕೈಗೊಳ್ಳಿ
ಗದಗ: ಹಾವೇರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಸೋಲಿಗೆ ಸ್ವ-ಪಕ್ಷದ ಅನೇಕ ಶಾಸಕರ ಒಳಸಂಚು ಕೂಡ ಕಾರಣವಾಗಿದೆ. ಅದಕ್ಕೆ ನಿದರ್ಶನವಾಗಿ ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿರೋಧಿ ಹೇಳಿಕೆ ನೀಡಿರುವ ಮಾಜಿ ಸಚಿವ, ಹಾಲಿ ಶಾಸಕ ಕೆ.ಬಿ. ಕೋಳಿವಾಡ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಜಾಗೃತಿ ವೇದಿಕೆ ರಾಜ್ಯ ಪ್ರಚಾರ ಸಮಿತಿ ಸದಸ್ಯ ನಿಸ್ಸಾರ್ ಅಹ್ಮದ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಸಲದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದೆ. ಗದಗ ಹಾಗೂ ಹಾವೇರಿ ಜಿಲ್ಲೆಯ ಏಳೂ ಜನ ಶಾಸಕರು ಕಾಂಗ್ರೆಸ್ ನವರಿದ್ದು, ಪ್ರಭಾವಿ ವ್ಯಕ್ತಿತ್ವದ ಓರ್ವ ಸಚಿವ ನಾಯಕರಿದ್ದರೂ ಗದಗ ಮತ್ತು ಹಾವೇರಿ ಸ್ಥಳೀಯ ಪುರಸಭೆ, ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ಇದ್ದರೂ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ್ ಅವರ ಪರ ಕೇವಲ ಬೆರಳೆಣಿಕೆ ನಾಯಕರು ಶ್ರಮಿಸಿದ್ದು ಬಿಟ್ಟರೆ ಕೆ.ಬಿ. ಕೋಳಿವಾಡರಂಥ ಶಾಸಕರು ಕಾಂಗ್ರೆಸ್ ಮಲ್ಲಪ್ಪ ಶೆಟ್ಟಿಗಳಂತೆ ವರ್ತಿಸಿ ಪಕ್ಷದ ಅಭ್ಯರ್ಥಿ ಗೆಲವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾರದೇ ತಮ್ಮ ಹುಳುಕು ಮುಚ್ಚಿಕೊಳ್ಳಲು ಈಗ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಬಾರದಿತ್ತು ಎಂದು ಸುದ್ದಿಗೋಷ್ಠಿ ಕರೆದು ಹೇಳಿಕೆ ನೀಡುತ್ತಿದ್ದಾರೆ.
ಸಲೀಂ ಅಹ್ಮದ್ ಎಲ್ಲ ಸಮುದಾಯದ ಹಿತ ಬಯಸಿ ನಡೆಯುತ್ತಿರುವ ಧೀಮಂತ ನಾಯಕರು ಅಲ್ಲದೆ, ಎಲ್ಲ ಜನತೆಯ ಅಭಿವೃದ್ಧಿ ಬಯಸಿದ್ದರು. ಅಥ ನಾಯಕರನ್ನು ಇವರು, ಅವರ ವೈಯಕ್ತಿಕ ಜಾತಿ ಧರ್ಮದ ದೃಷ್ಟಿಯಿಂದ ಅಳೆದಿದ್ದು ಖಂಡನೀಯ ಎಂದು ಹೇಳಿದ್ದಾರೆ. ಅಲ್ಲದೆ ಇವರು ಬಿಜೆಪಿ ವಿಜೇತ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಕಾಂಗ್ರೆಸ್ ದಿಂದ ಅಭಿನಂದನೆ ತಿಳಿಸುವ ಉದ್ದಟತನ ಮೆರೆದಿದು,್ದ ಇವರ ಮನದಾಳವನ್ನು ಜನತೆಗೆ ಪರಿಚಯಿಸಿದಂತಾಗಿದೆ.
ಸಲೀಂ ಅಹ್ಮದ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಅತ್ಯಂತ ವಿಳಂಬವಾಗಲು ಕೆಲ ಶಾಸಕರು, ಪ್ರಭಾವಿ ನಾಯಕರು ಕಾರಣವಾಗಿದ್ದಾರೆ. ಕಾಂಗ್ರೆಸ್ ಮತ ಬ್ಯಾಂಕ್ಗಳಂತೆ ಇರುವ ಅಲ್ಪಸಂಖ್ಯಾತ ಸಮುದಾಯವನ್ನು ಕೇವಲ ತಮ್ಮ ಸ್ವಾರ್ಥ ಸಾಧನೆ, ಅಧಿಕಾರ ದಾಹಕ್ಕಾಗಿ ದಾಳವಾಗಿ ಬಳಸಿಕೊಳ್ಳುವ ಇವರು ಇದೀಗ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬಾರದೆಂದು ಏಳೂ ಕಾಂಗ್ರೆಸ್ ಶಾಸಕರು ಚುನಾವಣೆಗೂ ಮುನ್ನ ಪತ್ರ ಬರೆದಿರುವುದು ಕಾಂಗ್ರೆಸ್ ಶಾಸಕರ ಅಲ್ಪಸಂಖ್ಯಾತ ವಿರೋಧಿ ಬಣ್ಣ ಬಯಲು ಮಾಡಿದೆ. ಆದ್ದರಿಂದ ಇಂಥ ಮುಸ್ಲಿಂ ವಿರೋಧಿ ಕಾಂಗ್ರೆಸ್ ಶಾಸಕರ ವಿರುದ್ಧ ನಾಡಿನ ಅಲ್ಪಸಂಖ್ಯಾತ ಸಮುದಾಯದ ಜನತೆ ಜಾಗ್ರತರಾಗಬೇಕೆಂದು ಕೋಳಿವಾಡ ಅವರ ಕಾಂಗ್ರೆಸ್ ಸದಸ್ಯತ್ವ ಶೀಘ್ರ ರದ್ದುಗೊಳಿಸಬೇಕು. ಸಚಿವರಾಗುವ ಕನಸು ಕಾಣುತ್ತಿರುವ ಕೋಳಿವಾಡ ಅವರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ನೀಡಿದ್ದೆ ಆದರೆ ರಾಜ್ಯಾದ್ಯಂತ ಅಲ್ಪಸಂಖ್ಯಾತ ಸಮುದಾಯದ ಸಂಘಟನೆಗಳಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಖಾಜಿ ತಿಳಿಸಿದ್ದಾರೆ.