ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ಲಾಸ್ಟಿಕ್ ಪಯಣಕ್ಕೆ ಬ್ರೇಕ್ ಬೀಳುವುದೇ?

Lingaraj Badiger
Updated On : 19 May 2014, 11:45 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 18
ಜೀವ ಸಂಕುಲದ ಜತೆಗೆ ಪರಿಸರಕ್ಕೆ ಮಾರಕವಾದ 40 ಮೈಕ್ರಾನ್ಗಿಂತ ಕಡಿಮೆ ಗುಣಮಟ್ಟ ಪ್ಲಾಸ್ಟೀಕ್ಗಳ ನಿಷೇಧ ಕಾಯ್ದೆ ಜಾರಿಯಾಗಿ 3 ವರ್ಷ ಕಳೆದರೂ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಹೀಗಾಗಿ ಪಟ್ಟಣದ ಮಾರುಕಟ್ಟೆಯ, ವ್ಯಾಪಾರ ಮಳಿಗೆಗಳಲ್ಲಿ ಕಡಿಮೆ ದರ್ಜೆಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ಮಾರಾಟ ಜೋರಾಗಿದೆ.
ಕವಡೆಕಾಸಿನ ಕಿಮ್ಮತ್ತಿಲ್ಲ: ಸ್ಥಳೀಯ ಪುರಸಭೆ ಆಡಳಿತ ಪ್ಲಾಸ್ಟಿಕ್ ನಿರ್ವಹಣೆ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನದಲ್ಲಿ ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಪರಿಸರ ಮೇಲೆ ದುಷ್ಪರಿಣಾಮ ಬೀರುವ ಹಿನ್ನಲೆಯಿಂದ ಕೇಂದ್ರ ಪರಿಸರ ಇಲಾಖೆ ಫೆ. 4ರಿಂದ ಪ್ಲಾಸ್ಟಿಕ್ ನಿರ್ವಹಣೆ ಕಾಯಿದೆ 2011ನ್ನು ಜಾರಿಗೆ ತಂದಿದೆ. ಹೊಸ ಕಾಯ್ದೆ ಜಾರಿಯಾದರೂ ಅನುಷ್ಠಾನ ತರುವಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನ ದೂರುತ್ತಾರೆ.
ಯಥಾಸ್ಥಿತಿ ಮುಂದುವರಿಕೆ: ಕಳೆದ ವರ್ಷ ಪುರಸಭೆ ಆಡಳಿತ ಎಲ್ಲ ವರ್ತಕರು ಹಾಗೂ ಸಾರ್ವಜನಿಕರ ಸಭೆ ನಡೆಸಿ, 40 ಮೈಕ್ರಾನ್ಗಿಂತ ಕಡಿಮೆ ಗುಣಮಟ್ಟ ಕ್ಯಾರಿಬ್ಯಾಗುಗಳ ನಿಷೇಧ ಕಾಯ್ದೆ ಜಾರಿಗೆ ಕಠಿಣ ಕ್ರಮ ಎಚ್ಚರಿಕೆ ನೀಡಲಾಗಿತ್ತು. ಅಂಗಡಿಯಲ್ಲಿರುವ ಪ್ಲ್ಯಾಸ್ಟಿಕ್ ಖಾಲಿ ಮಾಡಲು ಒಂದು ತಿಂಗಳ ಗಡುವು ನೀಡಲಾಗಿತ್ತು. ಆದರೆ ಗಡುವು ಮುಗಿದ ಬಳಿಕ ಅಧಿಕಾರಿಗಳು ಮರೆತಿರುವರು. ಕ್ಯಾರಿಬ್ಯಾಗ್ ಬಳಿಕೆದಾರರಿಗೂ ಇದೇ ಬೇಕಿತ್ತು. ಹೀಗಾಗಿ ಪಟ್ಟಣದಲ್ಲಿ ಹಿಂದಿನಂತೆ ಕಡಿಮೆ ದರ್ಜೆ ಪ್ಲಾಸ್ಟಿಕ್ ಬಳಕೆ ಯಥೇಚ್ಚವಾಗಿ ಮುಂದುವರೆದಿದೆ.
ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣದ ಜೋಡು ರಸ್ತೆ, ಗದಗ, ರೋಣ ರಸ್ತೆಯ ಅಂಗಡಿಯಲ್ಲಿ ಕ್ಯಾರಿಬ್ಯಾಗುಗಳ ಬಳಿಕೆ ಎಗ್ಗಿಲ್ಲದೆ ನಡೆದಿದೆ. ಇನ್ನೂ ಕೆಲ ಅಂಗಡಿ ಹೊರಗಡೆ ಕ್ಯಾರಿಬ್ಯಾಗ ನೇತು ಹಾಕಿ ಮಾರಾಟ ಲಂಗುಲಗಾಮಿಲ್ಲದೆ ನಡೆದಿದೆ. ಇದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.  
ಕ್ಯಾರಿಬ್ಯಾಗ್ ಕೊಡದಿದ್ದರೆ ವ್ಯಾಪಾರಕ್ಕೆ ಧಕ್ಕೆ: ಈಗಾಗಲೇ ತಯಾರಿಸಿದ ಕ್ಯಾರಿಬ್ಯಾಗುಗಳನ್ನು ಖಾಲಿ ಮಾಡುವಂತೆ ಕಳೆದೆರಡು ವರ್ಷದ ಹಿಂದೆ ಪುರಸಭೆ ಆಡಳಿತ ಸೂಚಿಸಿತ್ತು. ಆದರೆ ಜೋಡುರಸ್ತೆ ಸೇರಿದಂತೆ ಮುಖ್ಯ ಮಾರುಕಟ್ಟೆ ಸುತ್ತಿದಾಗ ಹೆಚ್ಚಿನ ಗುಣಮಟ್ಟದ ಪ್ಲಾಸ್ಟಿಕ್ ಯಾರೂ ಬಳಸುತ್ತಿಲ್ಲ. ಪ್ಲಾಸ್ಟಿಕ್ ನಿಷೇಧವಾಗಿರುವ ಬಗ್ಗೆ ಕೆಲ ವ್ಯಾಪಾರಿಗಳಿಗೆ ಗೊತ್ತೇ ಇಲ್ಲ. ಇನ್ನು ಕೆಲವರಿಗೆ ಗೊತ್ತಿದ್ದರೂ, ಏನಾಗುತ್ತದೋ ನೋಡೋಣ ಎನ್ನುವ ಮನೋಭಾವ. ಈಗಿರುವ ಕ್ಯಾರಿಬ್ಯಾಗ್ ಖಾಲಿಯಾದ ನಂತರ ಪರ್ಯಾಯ ಮಾರ್ಗಗಳ ಬಗ್ಗೆ ಗಮನಿಸೋಣ ಎನ್ನುತ್ತಾರೆ ಕೆಲ ವ್ಯಾಪಾರಿಗಳು. ಮತ್ತೇ ಕೆಲವರಿಗೆ ಕ್ಯಾರಿಬ್ಯಾಗ್ ಕೊಡದಿದ್ದರೆ ತಮ್ಮ ವ್ಯಾಪಾರಕ್ಕೇ ಧಕ್ಕೆಯಾಗುತ್ತದೆ ಎನ್ನುವ ಆತಂಕವೂ ಕಾಡುತ್ತಿದೆ.
ಕಾಯ್ದೆ ಪಾಲನೆ ಶೂನ್ಯ: ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಹೂ ಮಾರುವವರು, ದಿನಸಿ ವ್ಯಾಪಾರಿಗಳು ಎಲ್ಲರೂ ಪ್ಲಾಸ್ಟಿಕ್ ಕ್ಯಾರಿಬ್ಯಾಗುಗಳನ್ನೇ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ ಕವರಗಳಲ್ಲೇ ಮಾಂಸ ಪ್ಯಾಕ್ ಮಾಡಲಾಗುತ್ತಿದೆ. ಮಳಿಗೆಗಳಲ್ಲಿ ಕಡಿಮೆ ದರ್ಜೆಯ ಪ್ಲಾಸ್ಟಿಕ್ ಬ್ಯಾಗುಗಳನ್ನೂ ಇಂದಿಗೂ ಮಾರಾಟ ಮಾಡಲಾಗುತ್ತಿದೆ. ಜನರೂ ಬರಿಗೈಯಲ್ಲೇ ಮಾರುಕಟ್ಟೆಗೆ ಬಂದು ಕ್ಯಾರಿ ಬ್ಯಾಗುಗಳಲ್ಲಿ ತರಕಾರಿ, ದಿನಸಿ ಒಯ್ಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ 40 ಮೈಕ್ರಾನ್ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಕಂಡು ಬಂದರೆ ಜಿಲ್ಲಾಕಾರಿಗಳೇ ಹೊಣೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯಾಧ್ಯಕ್ಷ ಸದಾಶಿವಯ್ಯ ಹೊರಡಿಸಿರುವ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ.
ಮಣ್ಣಿನ ಫಲವತ್ತತೆ ಕಡಿಮೆ: ಅಧಿಕಾರಿಗಳು ನಡೆಸುವ ದಾಳಿಯಿಂದ ಮೆತ್ತಗಾಗಿರುವ ಪ್ಲ್ಯಾಸ್ಟಿಕ್ ಚೀಲ ವ್ಯಾವಾರಿಗಳು ಈ ಹಿಂದೆ ಖರೀಧಿಸಿದ ಲಕ್ಷಾಂತರ ರು. ಮೌಲ್ಯದ 40 ಮೈಕ್ರಾನ್ ಒಳಗಿನ ಪ್ಲಾಸ್ಟಿಕ್ ಬಳಕೆಯಿಂದ ಜೀವ ಸಂಕುಲಕ್ಕೆ ದೊಡ್ಡ ಅಪಾಯವಿದೆ ಎನ್ನುತ್ತದೆ ವೈಜ್ಞಾನಿಕ ವರದಿ. ಮಣ್ಣಿನ ಫಲವತ್ತತೆ ಕಡಿಮೆಗೊಳಿಸುವ ಅಪಾಯಕಾರಿ ಶಕ್ತಿ ಪ್ಲಾಸ್ಟಿಕ್ಕಿಗಿದೆ. ಮಳೆಯ ನೀರನ್ನು ಭೂಮಿಯೊಳಗೆ ಇಂಗದಂತೆ ಇದು ತಡೆಯಬಲ್ಲದು. ಉತ್ತಮ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಇದು ತಡೆಯೊಡ್ಡುತ್ತದೆ. ಗಿಡಗಳ ಬೇರು ಭೂಮಿಯೊಳಗೆ ಚಾಚಿಕೊಳ್ಳದಂತೆ ನೋಡಿಕೊಳ್ಳುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement