ಮಲ್ಲಮ್ಮ ಚರಿತ್ರೆ ಮರುಪರಿಶೀಲನೆ
ಮುಂಡರಗಿ: ಜಗಜ್ಯೋತಿ ಬಸವಣ್ಣನವರ ಚರಿತ್ರೆಯನ್ನು ಅನೇಕ ಹಿರಿಯರು ಮರುಪರಿಶೀಲನೆ ಮಾಡಿದಂತೆ ಹೇಮರಡ್ಡಿ ಮಲ್ಲಮ್ಮನವರ ಚರಿತ್ರೆಯನ್ನು ಮರುಪರಿಶೀಲನೆ ಮಾಡುವುದು ಅವಶ್ಯವಿದೆ. ಇದರಿಂದ ಮಲ್ಲಮ್ಮನವರ ಕುರಿತ ಇನ್ನೂ ಅನೇಕ ಸಂಗತಿಗಳು ಹೊರಬರುತ್ತವೆ ಎಂದು ಎರೆಹೊಸಳ್ಳಿಯ ವೇದಾನಂದ ಸ್ವಾಮಿಗಳು ಹೇಳಿದರು.
ಭಾನುವಾರ ಹೆಸರೂರ ರಸ್ತೆಯಲ್ಲಿರುವ ನಿಯೋಜಿತ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್ ಹಾಗೂ ರಡ್ಡಿ ಸಮಾಜ ಯುವ ಘಟಕ ಆಶ್ರಯದಲ್ಲಿ ಜರುಗಿದ ಶಿವಶರಣಿ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮನನ್ನು ಚರಿತ್ರೆ ಮೂಲಕ ಸಂಕುಚಿತಗೊಳಿಸಲಾಗಿದೆ. ಆದ್ದರಿಂದ ಮಲ್ಲಮ್ಮ ಹಾಗೂ ವೇಮನ ಅವರ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡುವುದಕ್ಕಾಗಿಯೇ ಧಾರವಾಡದಲ್ಲಿ ರು. 3 ಕೋಟಿ ಅನುದಾನದಲ್ಲಿ ವೇಮನ ಪೀಠ ಪ್ರಾರಂಭಿಸಲಾಗಿದೆ. ಮಲ್ಲಮ್ಮ ಈಗಲೂ ಹೆಚ್ಚು ಆಪ್ತರಾಗಲು ಕಾರಣ ಅವಳು ಜನಸಾಮಾನ್ಯ ಮಹಿಳೆ ಪಡುವ ಕಷ್ಟಕ್ಕೆ ತೀರಾ ಹತ್ತಿರ ಮತ್ತು ವಾಸ್ತವವಾಗಿರುವದರಿಂದ ಹೆಚ್ಚು ಸ್ಮರಣೀಯವಾಗಿದ್ದಾಳೆ ಎಂದರು.
ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಹೇಮರಡ್ಡಿ ಮಲ್ಲಮ್ಮನವರಲ್ಲಿ ದಾನ ಗುಣವಿತ್ತು. ಒಂದು ಹೆಣ್ಣಿಗೆ ಗೌರವ ತಂದುಕೊಡುವ ತ್ಯಾಗ, ಉತ್ತಮ ಸಂಸ್ಕೃತಿ, ಸಂಸ್ಕಾರದ ಪ್ರತೀಕವಾಗಿ ಮಹಿಳಾ ಕುಲಕ್ಕೆ ಮಾರ್ಗದರ್ಶನವಾಗುವಂತೆ ಆದರ್ಶವಾಗಿ ಬಾಳಿದ ಮಹಿಳೆಯಾಗಿದ್ದ ಹೇಮರಡ್ಡಿ ಮಲ್ಲಮ್ಮ, ಉಸುಕು ಬಿತ್ತಿ ಕಡಲೆ ಬೆಳೆಯುವ ಶಕ್ತಿ ಹಾಗೂ ಭಕ್ತಿಯನ್ನು ಹೊಂದಿದ್ದರು. ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನದಿಂದ ಪಂಚಾಕ್ಷರಿ ಗವಾಯಿಗಳ ಮಠಕ್ಕೆ ಅನುಕೂಲವಾಗಿದೆ. 365 ಪ್ರಯೋಗಗಳು ಪ್ರದರ್ಶನವಾಗಿದ್ದು ಎಂದೂ ಮರೆಯಲಾರದಂತ ವಿಷಯ ಎಂದರು.
ಅತಿಥಿ ಉಪನ್ಯಾಸಕ ಡಾ. ರಾಜಶೇಖರ ದಾನರಡ್ಡಿ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ಜೀವನ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎಸ್. ಮೇಟಿ ಅಧ್ಯಕ್ಷತೆ ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಬಿ.ಆರ್. ಯಾವಗಲ್, ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ, ವಾಸಣ್ಣ ಕುರಡಗಿ, ಅಂದಪ್ಪ ಮೇಟಿ, ಬಿ.ಎಚ್. ಪಾಟೀಲ, ಎಂ.ಎ. ರಡ್ಡೇರ್, ಟಿ. ಪ್ರಭಾಕರ ಇತರರಿದ್ದರು.