ಕಣ್ಣಿನ ಸಂರಕ್ಷಣೆ ಮಾಡಿಕೊಳ್ಳಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 19
ಮನುಷ್ಯನ ಅವಯವಗಳಲ್ಲಿ ಕಣ್ಣು ಒಂದಾಗಿದ್ದು, ಕಣ್ಣೇ ವ್ಯಕ್ತಿಯ ವಿಕಸನಕ್ಕೆ ದಾರಿ ದೀಪವಾಗಿದೆ. ಕಣ್ಣನ್ನು ಹೆಚ್ಚಿನ ಸಂರಕ್ಷಣೆ ಮಾಡಿ ಜಾಗರೂಕತೆಯಿಂದ ರಕ್ಷಿಸಿಕೊಳ್ಳಬೇಕೆಂದು ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ ಕರೆ ನೀಡಿದರು.
ಸೋಮವಾರ ಪಟ್ಟಣದ ಸಿ.ಸಿ. ನೂರಶೆಟ್ಟರ ವಿದ್ಯಾ ಪ್ರಸಾರ ಸಂಸ್ಥೆಯಲ್ಲಿ ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನೇತ್ರ ಉಚಿತ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಣ್ಣಿನ ಬೇನೆಯಿಂದ ಬಳಲುವ ಅನೇಕ ರೋಗಿಗಳು ಕಡು ಬಡವರಿದ್ದು, ಅಂಥವರಿಗೆ ಉಚಿತ ಚಿಕಿತ್ಸೆ ಏರ್ಪಡಿಸಿರುವ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಕ್ತದಾನದಿಂದ ಜೀವದಾನ ಮಾಡಬಹುದು. ಮರಣಾನಂತರ ನೇತ್ರದಾನದಿಂದ ಅಂಧರಿಗೆ ದೃಷ್ಟಿದಾನ ಮಾಡಬಹುದು. ರಕ, ನೇತ್ರದಾನ ಮಹಾದಾನವಾಗಿದ್ದು ಈ ಕಾರ್ಯಕ್ಕೆ ಸಾರ್ವಜನಿಕರ ಸ್ಪಂದನೆ ಅಗತ್ಯ. ನೇತ್ರದಾನದ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಇದೆ. ಸತ್ತವರನ್ನು ಕಣ್ಣು ಸಮೇತ ಮಣ್ಣಿನಲ್ಲಿ ಹೂಳುವುದರಿಂದ ಅಂಧರ ಬಾಳಿಗೆ ಬೆಳಕಾಗುವ ಕಣ್ಣುಗಳು ಮಣ್ಣಲ್ಲಿ ಹೂತು ಹೋಗುತ್ತವೆ. ಇದು ತಪ್ಪು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಓಂಕೇಶ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ 180 ಜನರಿಗೆ ನೇತ್ರ ತಪಾಸಣೆ ಮಾಡಲಾಯಿತು. 12 ಜನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದು, ಧಾರವಾಡಕ್ಕೆ ತೆರಳಲು ತಿಳಿಸಲಾಯಿತು. ನೇತ್ರ ತಜ್ಞ ಡಾ. ಪ್ರಮೋದ, ಸಂಸ್ಥೆಯ ನವೀನಕುಮಾರ, ಮುಖಂಡರಾದ ಸುರೇಶ ಅಕ್ಕಿ, ಬಾಲಚಂದ್ರ ಇಟಗಿ ಮತ್ತಿತರರು ಇದ್ದರು.