ದೊರೆಯದ ಸಬ್ಸಿಡಿ: ತಪ್ಪದ ಪರದಾಟ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 19
ಸ್ವಂತ ನಿವೇಶನ ಹೊಂದಿದ ಪಟ್ಟಣದ 200ಕ್ಕೂ ಹೆಚ್ಚು ಫಲಾನುಭವಿಗಳು ನಮ್ಮ ಮನೆ ಯೋಜನೆ ಅಡಿ ಕಡು ಬಡವರು ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದು, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಬ್ಸಿಡಿ ರು. 75 ಸಾವಿರ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಸರ್ಕಾರ ಪಟ್ಟಣ, ನಗರ ಪ್ರದೇಶದ ಬಡವರಿಗೆ ಸ್ವಂತ ಸೂರು ಕಲ್ಪಿಸುವ ಯೋಜನೆ ಅರ್ಹ ಫಲಾನುಭವಿಗಳಿಗೆ ದೊರೆಯದಂತಾಗಿದೆ. ಕೆಲವು ಮನೆಗಳು ಅಪೂರ್ಣಗೊಂಡಿದ್ದು, ಬೀಳುವ ಹಂತದಲ್ಲಿವೆ. ತಕ್ಷಣ ಪರಿಶೀಲನೆ ನಡೆಸಿ ಹಣ ನೀಡುವಂತೆ ಫಲಾನುಭವಿಗಳು ಅಂಗಲಾಚಿದ್ದಾರೆ.
2012-13ನೇ ಸಾಲಿನಲ್ಲಿಯೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಅದರಂತೆ ಹಿಂದಿನ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿ ನೀಡಿದ ಭರವಸೆಯಂತೆ ಸ್ವಂತ ನಿವೇಶನದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲಾಗಿದೆ. ಪಪಂ ಕಾರ್ಯಾಲಯಕ್ಕೆ ಹಂತ ಹಂತವಾಗಿ ಪೋಟೋ-ನಿವೇಶನದ ದಾಖಲೆಗಳನ್ನು ನೀಡಲಾಗಿದೆ. ದುಡ್ಡು ಇಲ್ಲದ ಕಾರಣ ಮನೆ ಅರ್ಧಕ್ಕೆ ನಿಂತಿದ್ದು, ಮಳೆ ಸುರಿದರೆ ನೆಲಸಮವಾಗುವ ಸಾಧ್ಯತೆ ಇದೆ ಎಂದು ಫಲಾನುಭವಿ ರಮೇಶ ಕರ್ಜಗಿ ಅಳಲು ತೋಡಿಕೊಳ್ಳುತ್ತಾರೆ.
ಎರಡು ವರ್ಷಗಳಿಂದ ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ಅಲೆದಾಡಿ ಫಲಾನುಭವಿಗಳು ಬೇಸತ್ತಿದ್ದು, ಸಾಲದ ಶೂಲಕ್ಕೆ ಸಿಲುಕಿ ನಾಲ್ಕಾರು ಫಲಾನುಭವಿಗಳು ಅಸುನೀಗಿದ್ದಾರೆ. ಇಷ್ಟೆಲ್ಲ ಅವಘಡಗಳು ಸಂಭವಿಸಿದರೂ ಅಧಿಕಾರಿಗಳ ಉಡಾಫೆ ಧೋರಣೆಯಿಂದಾಗಿ ಫಲಾನುಭವಿಗಳನ್ನು ಸತಾಯಿಸುತ್ತಿದ್ದಾರೆ ಎಂದು ಫಲಾನುಭವಿಗಳಾದ ಮೃತ್ಯುಂಜಯ ಹಿರೇಮಠ, ಫಕೀರೇಶ ಬಾರಕೇರ ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ತಹಸೀಲ್ದಾರ್ ಮೂಲಕ ಡಿಸಿಗೆ ಮನವಿ ನೀಡಿದ್ದು, ಸರ್ಕಾರದಿಂದ ಫಲಾನುಭವಿಗಳು ಆಯ್ಕೆಯಾದ ಪಟ್ಟಿಯೂ ಬಂದಿದ್ದು, ಸ್ಥಳೀಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ವಿಳಂಬ ನೀತಿಯನ್ನು ಅಧಿಕಾರಿಗಳು ಮುಂದುವರಿಸಿದಲ್ಲಿ ಹೆಂಡತಿ, ಮಕ್ಕಳೊಂದಿಗೆ ಕಾರ್ಯಾಲಯದ ಎದುರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತದೆ ಎಂದು ಮಮ್ಮದ್ ರಫೀ ಒಂಟಿ, ಬಾಬುಸಾಬ ಮಸೂತಿ, ಮಲ್ಲಿಕಾರ್ಜುನ ಪಿಳಗೀಮಠ ಎಚ್ಚರಿಕೆ ನೀಡಿದ್ದಾರೆ.
ಸ್ಥಾನಿಕವಾಗಿ ಎಲ್ಲ ಪರಿಶೀಲಿಸುವೆ
ಕಳೆದ ಸಾಲಿನಲ್ಲಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹಿಂದೆ ಇದ್ದ ಅಧಿಕಾರಿಗಳು, ಆಡಳಿತ ಮಂಡಳಿ ಅನುಸರಿಸಿದ ವಿಳಂಬ ನೀತಿ ಮತ್ತು ಯೋಜನೆಯಂತೆ ಮನೆಗಳನ್ನು ಕಟ್ಟಿಕೊಳ್ಳದಿರುವುದರಿಂದ ಸಹಾಯಧನದ ಚೆಕ್ ನೀಡಲು ವಿಳಂಬವಾಗುತ್ತಿದೆ. 285 ಚದರ ಅಡಿ ಅಳತೆಯಲ್ಲಿ ಮನೆ ಕಟ್ಟಿಕೊಳ್ಳಬೇಕು. ಅಳತೆಗೂ ಮೀರಿ ಮನೆ ಕಟ್ಟಿಕೊಂಡಿದ್ದಾರೆ. ಬುನಾದಿ, ಲಿಂಟಲ್, ರೂಫ್ ಲೆವಲ್ ಹಂತದ ಪೋಟೊ ನೀಡಿಲ್ಲ. ಆರ್ಥಿಕವಾಗಿ ಸದೃಢರಿದ್ದವರು, ಫಲಾನುಭವಿಗಳು ಇದ್ದ ಮನೆಗಳಿಗೆ ಸುಣ್ಣ ಬಣ್ಣ ಬಳಿದು ಸಹಾಯಧನ ಪಡೆಯಲು ಮುಂದಾಗಿದ್ದಾರೆ. ಸ್ಥಾನಿಕವಾಗಿ ಎಲ್ಲ ಪರಿಶೀಲನೆ ನಡೆಸಿ, ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಜಿಲ್ಲಾಧಿಕಾರಿ ಅನುಮೋದನೆಗೆ ಕಳುಹಿಸಿ ಚೆಕ್ ಬಂದ ಬಳಿಕ ನೀಡುತ್ತೇವೆ.
- ಆರ್. ಎಸ್. ಸುಣಗಾರ
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ
ಸೂಕ್ತ ಕ್ರಮ ಕೈಗೊಳ್ಳುತ್ತೇವೆ
ಹಿಂದೆ ಫಲಾನುಭವಿಗಳಿಂದ ಅರ್ಹ ದಾಖಲೆಗಳನ್ನು ಪಡೆದುಕೊಂಡೇ ಆಯ್ಕೆ ಮಾಡಿದ್ದಾರೆ. ಪದೇ ಪದೆ ಪಪಂ ಮುಖ್ಯಾಧಿಕಾರಿಗಳು ಬದಲಾವಣೆ ಆಗುತ್ತಿದ್ದು, ಕಾಯಂ ಸಿಬ್ಬಂದಿ ಇಲ್ಲದ ಕಾರಣ ಎಲ್ಲ ಕೆಲಸ, ಕಾರ್ಯಗಳಿಗೂ ಹಿನ್ನಡೆಯಾಗುತ್ತಿದೆ. ಸಾರ್ವಜನಿಕರು ನಮಗೆ ಛೀಮಾರಿ ಹಾಕುತ್ತಿದ್ದಾರೆ. ನಮ್ಮ ಮನೆ ಯೋಜನೆ ಫಲಾನುಭವಿಗಳಿಗೆ ಚೆಕ್ ನೀಡಲು ರು. 28 ಲಕ್ಷ ಅನುದಾನ ಬಂದಿದ್ದು, ತಿಂಗಳಲ್ಲಿ ನೀಡದಿದ್ದರೆ ಸರ್ಕಾರಕ್ಕೆ ವಾಪಾಸು ಹೋಗುವ ಸಾದ್ಯತೆ ಇದೆ. ತುರ್ತಾಗಿ ಎಲ್ಲ ಪರಿಶೀಲನೆ ಮಾಡಿ ಫಲಾನುಭವಿಗಳಿಗೆ ಚೆಕ್ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ.
- ನಾಗರಾಜ ಲಕ್ಕುಂಡಿ
ಪಪಂ ಅಧ್ಯಕ್ಷ
- ಮಹದೇವಪ್ಪ ಎಂ. ಸ್ವಾಮಿ