ಪಪಂಗೆ ರು. 32.86 ಲಕ್ಷ ಉಳಿತಾಯ
ನರೇಗಲ್ಲ: ಸ್ಥಳೀಯ ಪಟ್ಟಣ ಪಂಚಾಯಿತಿಯ 2014-15ನೇ ಸಾಲಿನ ಮುಂಗಡ ಪತ್ರವನ್ನು ಅಧ್ಯಕ್ಷರ ಪರ ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮಿ ರು. 32.86 ಲಕ್ಷ ಉಳಿತಾಯದ ಮುಂಗಡ ಪತ್ರವನ್ನು ಮಂಡಿಸಿದರು.
ವಿವಿಧ ಮೂಲಗಳಿಂದ ಪಟ್ಟಣ ಪಂಚಾಯತಿಗೆ ಬರಬಹುದಾದ ಆದಯದ ಬಗ್ಗೆ ವಿವರಣೆ ನೀಡಿದ ಅವರು, ಒಟ್ಟು ರು. 9.84 ಕೋಟಿ ಆದಾಯ ನಿರೀಕ್ಷೆ ಇದೆ. ಇದರಲ್ಲಿ ಅಭಿವೃದ್ದಿ ಮತ್ತಿತರ ವೆಚ್ಚ ರು. 9.56 ಕೋಟಿ ಖರ್ಚಾಗುವ ಸಾಧ್ಯತೆ ಇದ್ದು, ಇದು ಉಳಿತಾಯದ ಬಜೆಟ್ ಆಗಿದೆ ಎಂದರು.
ಮುಖ್ಯಾಧಿಕಾರಿ ಮಂಡಿಸಿದ ಉಳಿತಾಯದ ಮುಂಗಡ ಪತ್ರವನ್ನು ಎಲ್ಲರೂ ಸ್ವಾಗತಿಸಿದರು. ಪಟ್ಟಣದಲ್ಲಿ ತಲೆದೋರಿರುವ ಕುಡಿಯುವ ನೀರಿನ ಕುರಿತು ಚರ್ಚೆ ನಡೆಯಿತು. ನೀರು ಪೂರೈಕೆಗೆ ಬೇಕಾದ ಹಣದಲ್ಲಿ ಇನ್ನಷ್ಟು ಕೊರತೆ ಬಿದ್ದಿರುವುದರಿಂದ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಜಿ.ಎಸ್. ಪಾಟೀಲ ತಕ್ಷಣ ಮೇಲಧಿಕಾರಿಗಳೊಂದಿಗೆ ಮಾತನಾಡಿ, ಹಣ ಬಿಡುಗಡೆಗೆ ಸೂಚಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸದಸ್ಯ ರಮೇಶ ಕಳಕೊಣ್ಣವರ ಮತ್ತು ಕಲ್ಮೇಶ ತೊಂಡಿಹಾಳ ಮಾತನಾಡಿ, ಓಣಿಯಲ್ಲಿರುವ ಬಾವಿಗಳಲ್ಲಿ ಸಾಕಷ್ಟು ನೀರಿದೆ. ಅದಕ್ಕೆ ಮೋಟಾರ್ ಹಚ್ಚಿಕೊಟ್ಟರೆ ಆ ಓಣಿಯ ಜನರಿಗಾದರೂ ನೀರಿನ ವ್ಯವಸ್ಥೆಯಾಗುತ್ತದೆ ಎಂದರು. ತಕ್ಷಣ ಸ್ಪಂದಿಸಿದ ಶಾಸಕರು ಪ್ರಾಯೋಗಿಕವಾಗಿ ಒಂದೆರಡು ಕಡೆ ಇದನ್ನು ಪ್ರಯೋಗ ಮಾಡಲು ಸೂಚಿಸಿದರು. ಖಾತೆ ಬದಲಾವಣೆ ವಿಷಯ ಚರ್ಚೆಗೆ ಬಂದಾಗ ಸದಸ್ಯರೊಬ್ಬರು ಖಾತೆ ಬದಲಾವಣೆಗೆ ಕೊಟ್ಟು ಆರು ತಿಂಗಳು ಗತಿಸಿದರೂ ಇನ್ನೂ ಖಾತೆ ಬದಲಾವಣೆ ಆಗಿಲ್ಲ. ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ ಘಟನೆಯೂ ನಡೆಯಿತು.
ಅನಧಿಕೃತ ನಲ್ಲಿ: ಪಟ್ಟಣದಲ್ಲಿ ಒಟ್ಟು 61 ಅನಧಿಕೃತ ನಳಗಳಿವೆ ಎಂಬುದನ್ನು ಸಭೆಯ ಗಮನಕ್ಕೆ ತರಲಾಯಿತು. ಬಸ್ ನಿಲ್ದಾಣದಲ್ಲಿ ಸಂಸ್ಥೆಯವರು ವಾಣಿಜ್ಯ ಮಳಿಗೆಗೆಳನ್ನು ನಿರ್ಮಿಸಿದ್ದಾರೆ. ಅವುಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ಹೀಗಾದರೆ ಅಲ್ಲಿನ ಡಬ್ಬಾ ಅಂಗಡಿಗಳವರ ಪರಿಸ್ಥಿತಿ ಏನು ಎಂದು ಸದಸ್ಯ ಯಲ್ಲಪ್ಪ ಮಣ್ಣೊಡ್ಡರ ಪ್ರಶ್ನಿಸಿದರು. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡುವುದಾಗಿ ಮುಖ್ಯಾಧಿಕಾರಿ ಹೇಳಿದರು. ಲೆಕ್ಕಾಧಿಕಾರಿ ಸೀತಿಮನಿ ಸಭೆಯ ನಡಾವಳಿಗಳನ್ನು ನಿರೂಪಿಸಿದರು. ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಅಭಿಯಂತ ಜೆ.ಕೆ. ಉಳ್ಳಟ್ಟಿ ವಂದಿಸಿದರು.