ಬದುಕಿಗೆ ನೆರವಾದ ನೇರಳೆ!
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 19
ಇಲ್ಲಿನ ಜೋಡು ರಸ್ತೆ ಹಾಗೂ ಮುಖ್ಯ ಮಾರುಕಟ್ಟೆ ಫುಟ್ಪಾತ್ ಮೇಲೆ ಕುಳಿತು ನೇರಳೆ ಹಣ್ಣುಗಳನ್ನು ಮಾರುತ್ತಲೇ ಎಷ್ಟೋ ಮಹಿಳೆಯರು ಜೀವನದ ದಾರಿ ಕಂಡುಕೊಂಡಿದ್ದಾರೆ. ಪಟ್ಟಣದ ಯಾದವ ಕುಲ (ಗೊಲ್ಲರು) ಓಣಿ ಮಹಿಳೆಯರು ಉರಿ ಬಿಸಿಲನ್ನೂ ಲೆಕ್ಕಿಸದೆ ಬುಟ್ಟಿ ತುಂಬ ಹಣ್ಣುಗಳನ್ನು ಇಟ್ಟುಕೊಂಡು, ಕೊಳ್ಳುವವರಿಗಾಗಿ ಕಾಯುತ್ತಿದ್ದಾರೆ.
ತೋಟ ಮತ್ತು ಹೊಲದ ಬದುವಿನಲ್ಲಿ ಹೇರಳವಾಗಿ ಬೆಳೆಯುವ ನೇರಳೆಗೆ ರೋಗಬಾಧೆ ಕಮ್ಮಿ. ಬೆಳೆಯಲು ಖರ್ಚೂ ಹೆಚ್ಚಲ್ಲ. ಆದಾಯ ಮಾತ್ರ ಭರ್ಜರಿ. ಈ ಕಾರಣಕ್ಕೆ ಕೊಳವೆ ಬಾವಿ ನೀರಾವರಿ ಅವಲಂಬಿಸಿರುವ ರೈತರು ತಮ್ಮ ತೋಟಗಳಲ್ಲಿ ನೇರಳೆ ಮರದ ನೆರಳುಗಳನ್ನು ಹಬ್ಬಿಸಿದ್ದಾರೆ. ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣದ ಸುತ್ತಲಿನ ಜವಳು (ಮಸಾರಿ) ಪ್ರದೇಶದಲ್ಲಿ ಈಚೆಗೆ ನೇರಳೆಯನ್ನು ಹೇರಳವಾಗಿ ಬೆಳೆಯಲಾಗುತ್ತಿದೆ.
ನೇರಳೆ ವಿಧಗಳು: ನೇರಳೆಯಲ್ಲಿ ಜವಾರಿ, ಹೈಬ್ರಿಡ್ ತಳಿಗಳಿವೆ. ಹೈಬ್ರಿಡ್ ಜಾಂಬೊಲಿನ್, ರಾಜಾ ಜಾಂಬೊಲಿನ್, ಸೀಡ್ಲೆಸ್ ಜಾಂಬೊಲಿನ್, ನರೇಂದ್ರನ್ ಜಾಂಬೊಲಿನ್ ಪ್ರಮುಖ. ಹಳ್ಳಿಗರು ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ಎಮ್ಮೆ ನೇರಳೆ, ನಾಯಿ ಗೋಲಿ (ದುಂಡು) ನೇರಳೆ ಎಂದು ಕರೆಯುತ್ತಾರೆ. ಗಜೇಂದ್ರಗಡ, ಗೋಗೇರಿ, ಕಾಲಕಾಲೇಶ್ವರ, ರಾಜೂರು, ನಾಗೇಂದ್ರಗಡ, ಲಕ್ಕಲಕಟ್ಟಿ, ನಾಗರಸಕೊಪ್ಪ, ಭೈರಾಪುರ ಮುಂತಾದೆಡೆ ನೇರಳೆ ಬೆಳೆ ಕಾಣಬಹುದು.
ನಿರ್ವಹಣೆ ವಿಧಾನ: ಒಂದು ಅಡಿ ಚೌಕಾದ ತಗ್ಗು ಅಗೆದು, ಎಂಟು ಅಡಿ ಅಂತರದಲ್ಲಿ ಎಕರೆಗೆ 100 ಗಿಡ ನೆಡಬಹುದು. ಕೊಟ್ಟಿಗೆ, ಎರೆಹುಳು ಗೊಬ್ಬರ ಹಾಕಿ, ನೀರುಣಿಸಿ, ಸಸಿ ಬೆಳೆಸಬೇಕು. ನಾಲ್ಕು ವರ್ಷದವರೆಗೆ ಸಸಿ ಪೋಷಿಸಿದರೆ ಹಣ್ಣು ಕೊಡಲಾರಂಬಿಸುತ್ತದೆ. ಪ್ರತಿ ವರ್ಷ ಗಿಡದ ಸುತ್ತ 500 ಗ್ರಾಂ ಯೂರಿಯಾ, 300 ಗ್ರಾಂ ಪೊಟ್ಯಾಷಿಯಂ ಗೊಬ್ಬರ ಹಾಕಿ ನೀರುಣಿಸಬೇಕು. ವಾರ್ಷಿಕ ರು. 1.20 ಲಕ್ಷ ಖರ್ಚಾಗುತ್ತದೆ. ಖರ್ಚಿನ ದುಪ್ಪಟ್ಟು ಹಣ ಸಂಪಾದನೆಯಾಗುತ್ತದೆ ಎಂದು ನೇರಳೆ ಹಣ್ಣು ಬೆಳೆಗಾರರು ತಿಳಿಸುತ್ತಾರೆ. ಸಾಮಾನ್ಯವಾಗಿ ನೇರಳೆ ಜನವರಿ, ಫೆಬ್ರವರಿಗೆ ಹೂ ಬಿಟ್ಟು ಮಾರ್ಚ್ ತಿಂಗಳಲ್ಲಿ ಕಾಯಿ ಕಟ್ಟಿ ಏಪ್ರಿಲ್, ಮೇ ತಿಂಗಳಲ್ಲಿ ಹೇರಳವಾಗಿ ಹಣ್ಣು ಸುರಿಯುತ್ತದೆ. ಕಾಯಿ ಹಣ್ಣಾಗುವ ಕಾಲಕ್ಕೆ ನೀಲಿ, ಕೇಸರಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತದೆ. 70 ವರ್ಷ ಜೀವಿತಾವಧಿಯ ನೇರಳೆ ಮರವೊಂದು ನಾಲ್ಕರಿಂದ ಐದು ವರ್ಷಕ್ಕೆ ಹಣ್ಣು ಬಿಡಲಾರಂಭಿಸಿ ಸುದೀರ್ಘ ಅರವತ್ತು ವರ್ಷದವರೆಗೆ ಗುಣಮಟ್ಟದ ಹಣ್ಣುಗಳನ್ನು ನೀಡುತ್ತದೆ.
ಪ್ರತಿ ವರ್ಷ ಜುಲೈ ತಿಂಗಳಲ್ಲಿ ಮರಕ್ಕೆ 20 ಕೆಜಿ ಉಪ್ಪು ಕಟ್ಟಿದರೆ, ಹಣ್ಣುಗಳನ್ನು ಹೆಚ್ಚಿಗೆ ನೀಡುತ್ತದೆ. ಕೆಜಿ ನೇರಳೆಗೆ ಮಾರುಕಟ್ಟೆಯಲ್ಲಿ ರು. 50ರಿಂದ ರು. 100 ದರವಿದೆ.
ಏನು ಉಪಯೋಗ?: ಈಗ ಬಹುತೇಕ ಎಲ್ಲರನ್ನೂ ಕಾಡುವ ಮಧುಮೇಹಕ್ಕೆ ನೇರಳೆ ಹಣ್ಣು ರಾಮಬಾಣ. ಬಾಯಿಯ ದುರ್ಗಂಧ, ತೊದಲುವಿಕೆ ನಿವಾರಣೆ, ಪಚನ ಕ್ರಿಯೆ ವೃದ್ಧಿ, ಗಂಟಲು ನೋವು, ಗೂರಲು, ಉಬ್ಬಸ ತಡೆಗೂ ಉಪಯುಕ್ತ.
- ಡಿ.ಜಿ. ಮೋಮಿನ್