ಬೇಸಿಗೆ ಶಿಬಿರಗಳಲ್ಲಿ ತರಬೇತಿ ಸಿಗಲಿ
ಮುಂಡರಗಿ: ಪಠ್ಯಕ್ರಮ ಪೂರ್ಣಗೊಳಿಸುವ ಭರದಲ್ಲಿ ಮಕ್ಕಳಲ್ಲಿರುವ ಕಲೆ, ಪ್ರತಿಭೆ ಹೊರಹಾಕಲು ಶಾಲಾ ಅವಧಿಯಲ್ಲಿ ಸಾಧ್ಯವಾಗಲ್ಲ. ಮಕ್ಕಳು ವಿವಿಧ ಇಲಾಖೆ, ಸಂಘ-ಸಂಸ್ಥೆಗಳು ಏರ್ಪಡಿಸುವ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡು ವಿಶೇಷ ತರಬೇತಿ ಪಡೆದುಕೊಳ್ಳಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಸಲಹೆ ನೀಡಿದರು.
ತಾಲೂಕು ಬಾಲ ಭವನ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಮಹಾಗಣಪತಿ ಗ್ರಾಮೀಣ ಸಮಾಜ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಸ್ಥಳೀಯ ಎಸ್.ಎಂ. ಭೂಮರಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಮನೋ ವಿಕಾಸಕ್ಕೆ ವಿವಿಧ ತರಬೇತಿಗಳ ಅಗತ್ಯವಿದ್ದು, ಎಲ್ಲ ತರಬೇತಿಯನ್ನು ಶಾಲೆಗಳಲ್ಲಿ ನೀಡಲು ಅಸಾಧ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ತಮ್ಮಲ್ಲಿ ಅಡಗಿರುವ ಕಲೆಯನ್ನು ಹೊರಹಾಕಲು ಸೂಕ್ತ ವೇದಿಕೆಗಳು ಇಲ್ಲದಂತಾಗುತ್ತವೆ. ವಿದ್ಯಾರ್ಥಿಗಳು ವಿಶೇಷ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಹೆಚ್ಚಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಮಾತನಾಡಿ, ಮಕ್ಕಳು ಸದಾ ಕಾಲಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಂಥ ಮಕ್ಕಳ ಸಂಕುಚಿತ ಮನಸ್ಸುಗಳನ್ನು ಸಮಗ್ರವಾಗಿ ವಿಕಾಸಗೊಳಿಸಲು ಸರ್ಕಾರ ಏರ್ಪಡಿಸುವ ವಿಶೇಷ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ. ಎಲ್ಲ ಮಕ್ಕಳು ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎಸ್. ವಾರದ ಮುಂತಾದವರು ಮಾತನಾಡಿದರು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಸದಸ್ಯ ಸುರೇಶ ಮಾಳೆಕೊಪ್ಪ, ಎಲ್.ಬಿ. ಹೊಸಳ್ಳಿ, ಕನ್ಯಾಳ, ಮಂಜುನಾಥ ಇಟಗಿ, ಎ.ಪಿ. ದಂಡಿನ ಹಾಜರಿದ್ದರು. ಶ್ರುತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಹಾಗಣಪತಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಬಿಳಿಮಗ್ಗದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.