ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಸಕ ಕೋಳಿವಾಡ ಉಚ್ಚಾಟಿಸದಿದ್ದರೆ ಉಗ್ರ ಹೋರಾಟ

Lingaraj Badiger
Updated On : 20 May 2014, 12:41 pm

ರೋಣ: ಅಲ್ಪಸಂಖ್ಯಾತರ ಭಾವನೆಗೆ ನೊವುಂಟು ಮಾಡುವ ರೀತಿ ಹೇಳಿಕೆ ನೀಡಿದ್ದಲ್ಲದೇ, ಪಕ್ಷ ವೀರೋಧಿ ಚಟುವಟಿಕೆ ನಡೆಸಿದ ಶಾಸಕ ಕೆ.ಬಿ. ಕೋಳಿವಾಡ ಅವರನ್ನು ಕಾಂಗ್ರೆಸ್ನಿಂದ ಕೂಡಲೇ ಉಚ್ಚಾಟಿಸಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರೋಣ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಬಾವಾಸಾಬ ಬೇಟಗೇರಿ ಆಗ್ರಹಿಸಿದರು.
ಈ ಕುರಿತು ಸೋಮವಾರ ಸಂಜೆ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಣಿಬೆನ್ನೂರು ತಾಲೂಕಿನಲ್ಲಿ ಅಲ್ಪಸಂಖ್ಯಾತರ ಮತಗಳಿಂದ ಜಯ ಗಳಿಸಿದ ಕೋಳಿವಾಡರು ಅದನ್ನು ಮರೆತು, ಲೋಕಸಭೆ ಚುನಾವಣೆಗೂ ಮುನ್ನ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ನೀಡಬಾರದು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ಅಲ್ಲದೆ ಚುನಾವಣೆ ಬಳಿಕ ಸೋಲಿಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದೆ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡಿದ್ದು, ಅಲ್ಪಸಂಖ್ಯಾತರ ಭಾವನೆ ಕೆರಳುವಂತೆ ಮಾಡಿದೆ. ಸಲೀಂ ಅಹ್ಮದರ ಸೋಲಿನಲ್ಲಿ ನೇರವಾಗಿ ಕೋಳಿವಾಡರೇ ಕೈವಾಡವಿದೆ ಎಂದು ಆರೋಪಿಸಿದರು.
ಮುಖಂಡ ಇನಾಯತ ತರಪದಾರ, ಪುರಸಭೆ ಮಾಜಿ ಉಪಾಧ್ಯಕ್ಷ ಯೂಸೂಫ ಇಟಗಿ, ಪುರಸಭೆ ಸದಸ್ಯ ಶಫೀಕ ಮೂಗನೂರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಉಪಾಧ್ಯಕ್ಷ ಎ.ಎ. ತಹಸೀಲ್ದಾರ್, ಕೆ.ಬಿ. ಹರ್ಲಾಪುರ, ಖಲೀಲ ರಾಮದುರ್ಗ, ಜೀವನಸಾಬ ಉಮಚಗಿ, ಫಯಾಜಅಹ್ಮದ್ ಕಲಾದಗಿ, ಬಾಷಾಸಾಬ ಚಿನ್ನೂರ, ಗೈಬುಸಾಬ ತಹಸೀಲ್ದಾರ್, ಜಂಗ್ಲಿಸಾಬ ಇಟಗಿ, ಎಂ.ಎಂ. ಅತ್ತಾರ, ಅಬ್ದುಲಸಾಬ ಬೇಟಗೇರಿ, ಇಕ್ಬಾಲಸಾಬ್ ಯಲಿಗಾರ ಇತರರಿದ್ದರು.

ಕೋಳಿವಾಡ ಶಾಸಕ ಸ್ಥಾನ ರದ್ದುಗೊಳಿಸಿ: ಕೆಲೂರ
ಮುಂಡರಗಿ: ಒಂದು ಕ್ಷೇತ್ರದ ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವ ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ಅವರು ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಬಾರದಿತ್ತು ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಮುಂಡರಗಿ ಅಲ್ಪಸಂಖ್ಯಾತ ವೇದಿಕೆ ಅಧ್ಯಕ್ಷ ನಬೀಸಾಬ್ ಕೆಲೂರ ಹೇಳಿದರು.
ಸೋಮವಾರ ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋಳಿವಾಡ ಅವರು ಶಾಸಕರಾಗುವ ಸಮಯದಲ್ಲಿ ಅಲ್ಪಸಂಖ್ಯಾತ ಮತಗಳನ್ನು ಪಡೆಯಬೇಕಾದರೆ ಏನೆಲ್ಲ ಭರವಸೆಗಳನ್ನು ನೀಡಿದ್ದಾರೆ. ಆ ಯಾವುದೇ ಒಂದು ಭರವಸೆಗಳೂ ಈಡೇರಿಲ್ಲ. ಕೋಳಿವಾಡ ಅವರಿಗೆ ಅಲ್ಪಸಂಖ್ಯಾತ ಮತಗಳು ಬೇಕು, ಅದೇ ಜನಾಂಗದವರೊಬ್ಬರು ಲೋಕಸಭೆ ಸದಸ್ಯರಾಗಲು ಟಿಕೆಟ್ ಪಡೆದರೆ ಅದು ಇವರಿಗೆ ಇಷ್ಟವಿಲ್ಲ ಎಂದರೆ ಏನರ್ಥ.
ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರಿಯಾಶೀಲ ಯುವನಾಯಕ ಸಲೀಂ ಅಹ್ಮದ್ ಅವರಿಗೆ ಜಾತಿ-ಧರ್ಮ ಇಲ್ಲ. ಎಲ್ಲ ಧರ್ಮದವರೊಂದಿಗೂ ಅನ್ಯೋನ್ಯ ಸಂಬಂಧಗಳನ್ನು ಹೊಂದಿದ್ದಾರೆ.
ಕೋಳಿವಾಡ ಅವರು ಕಾಂಗ್ರೆಸ್ನಲ್ಲಿದ್ದುಕೊಂಡೆ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಎಂದು ಟಿಕೆಟ್ ನೀಡಿ ಅವರು ಚುನಾವಣೆಯಲ್ಲಿ ಸೋತ ನಂತರ ಸಲೀಂಅಹ್ಮದ್ ಅವರಿಗೆ ಟಿಕೆಟ್ ನೀಡಿದ್ದು ತಪ್ಪು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸಮಂಜಸ. ಈ ಕೂಡಲೇ ಕೋಳಿವಾಡರ ಶಾಸಕ ಹಾಗೂ ಇವರ ಪಕ್ಷದ ಸದಸ್ಯತ್ವ ರದ್ದುಗೊಳಿಸುವಂತೆ ಪಕ್ಷದ ಅಧ್ಯಕ್ಷ, ಸಿಎಂ ಸಿದ್ದರಾಮಯ್ಯನವರಿಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸುವುದಾಗಿ ಕೆಲೂರ ತಿಳಿಸಿದರು.
ಗದಗ ಜಿಲ್ಲೆಯಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ಅವರ ಪುತ್ರ ಮಿಥುನ್ಗೌಡ ಪಾಟೀಲ ಅವರನ್ನು ಹೊರತುಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಯಾವ ಶಾಸಕ, ಮುಖಂಡರೂ ಮನಸ್ಸಿಗೆ ಹಚ್ಚಿಕೊಂಡು ಕೆಲಸ ಮಾಡಲಿಲ್ಲ. ಮುಂಡರಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ರಾಜ್ಯದ ವಿವಿಧ ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್ ಅಧ್ಯಕ್ಷರು ಗುರುತಿಸಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದು ಹಾಗೂ ರಾಜ್ಯದಲ್ಲಿ ಯುವ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿರುವುದೇ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ. ಹಾಗಾದರೆ ಕೋಳಿವಾಡ ಅವರು ತಿಳಿಸಿದ ವ್ಯಕ್ತಿಗೆ ಟಿಕೆಟ್ ದೊರೆಯದಿರುವುದರಿಂದ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿಲ್ಲವೆ? ಇವರು ಅಭ್ಯರ್ಥಿ ಸೋಲಿನ ಹೊಣೆ ಹೊತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕೆಲೂರ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸುಬಾನ್ಸಾಬ್, ಜವಳಿ, ಎಂ.ಎಚ್. ತಳಗಡೆ, ಶಿರಾಜ್ ಡಂಬಳ, ಮರ್ದಾನಸಾಬ್ ತಳಗಡೆ, ಶಂಶುದ್ದೀನ ಹಾರೋಗೇರಿ, ಶಾನು ಮುಲ್ಲಾ, ಜಂದೀಸಾಬ್ ಬಿಸ್ತಿ, ರಹಮತ್ಅಲಿ ಮುಲ್ಲಾ, ಖಾಜೇಸಾಬ್ ಅಳವಂಡಿ, ರಾಜಾಭಕ್ಷಿ ಬೆಟಗೇರಿ ಇತರರು ಉಪಸ್ಥಿತರಿದ್ದರು.

ಉಚ್ಚಾಟಿಸದಿದ್ದರೆಬೀದಿಗಿಳಿದು ಹೋರಾಟ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 19
ಹಾವೇರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ರ ಸೋಲಿಗೆ ಕಾರಣವಾದ ಹಾಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ರಾಣಿಬೆನ್ನೂರು ಕ್ಷೇತ್ರ ಶಾಸಕ ಕೆ.ಬಿ. ಕೋಳಿವಾಡರನ್ನು ಪಕ್ಷದಿಂದ ಉಚ್ಛಾಟಿಸಿ ಹೈಕಮಾಂಡ್ ಕ್ರಮ ಜರುಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾನಸಾಬ್ ಆರಗಿದ್ದಿ ಆಗ್ರಹಿಸಿದರು.
ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಕಾರ್ಯಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಸೇರಿ ಸರ್ವ ಧರ್ಮೀಯರ ಶ್ರಯೋಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸಲೀಂ ಅಹ್ಮದ್ರಿಗೆ ಟಿಕೆಟ್ ನೀಡಿತ್ತು. ಆದರೆ, ಪಕ್ಷದಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ಜಯಶೀಲರಾಗಬೇಕಾಗಿದ್ದ ಸಲೀಂ ಅಹ್ಮದರು ಶಾಸಕ ಕೆ.ಬಿ. ಕೋಳಿವಾಡರಂತಹ ಮೀರಸಾಧಕರ ಕುತಂತ್ರದಿಂದಾಗಿ ಸೋಲಬೇಕಾಯಿತು ಎಂದು ದೂರಿದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಮುಂದಾಗುವ ಹಾನಿಗೆ ಅಲ್ಪಸಂಖ್ಯಾತರು ಕಾರಣರಲ್ಲ ಎಂದು ಪಕ್ಷದ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಅಂಜುಮನ್ ಇಸ್ಲಾಂ ಕಮಿಟಿ ಮುಖ್ಯಸ್ಥ ಎಂ.ಎಚ್. ಕೋಲಕಾರ, ಹಾಜಿ ಅಲ್ಲಾಭಕ್ಷ ಗೋಡೆಕಾರ, ಎಂ.ಕೆ. ಹಿರೇಹಾಳ, ಹಾಜಿ ಪಿ.ಕೆ. ಬಾಗವಾನ್, ಎ.ಜಿ. ತಾಳಿಕೋಟಿ, ಹಸನ್ ತಟಗಾರ, ರಾಜೇಸಾಬ ಹಣಗಿ, ದಾವಲಸಾಬ ವಣಗೇರಿ, ಮಹಮ್ಮದಲಿ ಬುಕ್ಕಿಟಗಾರ, ಮಾಬುಸಾಬ್ ಗೋಡೆಕಾರ, ಬಾಬಣ್ಣ ಗೊಲಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement