ಪಕ್ಷದ ಸೋಲಿನಿಂದ ಹಿನ್ನಡೆ
ಕನ್ನಡಪ್ರಭ ವಾರ್ತೆ, ಗದಗ, ಮೇ 20
ರಾಜ್ಯದಲ್ಲಿ ಕಾಂಗ್ರೆಸ್ ಸಾಧನೆ ನಮಗೆಲ್ಲಾ ಸ್ವಲ್ಪ ಹಿನ್ನಡೆಯಾಗಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಮಂಗಳವಾರ ಸಂಜೆ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶಾದ್ಯಂತ ಮೋದಿ ಹಾಗೂ ಬಿಜೆಪಿಯವರು ಜನರ ಭಾವನೆಗಳೊಂದಿಗೆ ಆಟವಾಡಿ ಗೆಲುವು ಸಾಧಿಸಿದ್ದಾರೆ. ಇದು ನನ್ನ ದೃಷ್ಟಿಯಲ್ಲಿ ದೇಶಾದ್ಯಂತ ಒಂದು ಆಸಕ್ತ ವರ್ಗದ ಗೆಲುವಾಗಿದೆ. ಎಲ್ಲರ ಗೆಲುವಲ್ಲ. ಆದರೆ ದೇಶದ ಜನರು ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೇಗೆ ಕಟ್ಟಬೇಕು ಎಂದು ಚಿಂತನೆ ನಡೆಸಲಾಗುವುದು ಎಂದರು.
ಸಲೀಂ ಅಹ್ಮದ ಸೋಲಿನ ಕುರಿತ ಪ್ರಶ್ನೆಗೆ ತೀರಾ ಖಾರವಾಗಿ ಉತ್ತರಿಸಿದ ಸಚಿವ ಎಚ್ಕೆ ಕೆಲವರು ಹಾಲಿನಲ್ಲಿ ಉಪ್ಪು ಹಾಕುವ ಕೆಲಸ ಮಾಡುತ್ತಾರೆ. ಅದಕ್ಕೆ ನಾನು ಉತ್ತರ ಕೊಡುವುದಿಲ್ಲ. ಮಾಧ್ಯಮಗಳಲ್ಲಿ ಬರುವ ಹೇಳಿಕೆಗಳನ್ನೇ ಗಮನಿಸಿ, ಅವುಗಳನ್ನು ಸಾಕಷ್ಟು ವ್ಯತ್ಯಾಸಗಳಿವೆ, ತಮಗೆ ಹೇಗೆ ಬೇಕೋ ಹಾಕಿ ಮಾಡಿದ್ದಾರೆ ಎಂದರು.
ಕೋಳಿವಾಡ ಅವರ ಹೇಳಿಕೆ ಕುರಿತು ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿರುವ ಕುರಿತ ಪ್ರಶ್ನೆಗೆ ನೀವು ಈ ಕುರಿತು ಅವರನ್ನೇ ಕೇಳಿ ಎಂದರು.
ನನ್ನ ಸೋಲಿಗೆ ಟಿಕೆಟ್ ಹಂಚಿಕೆಯಲ್ಲಾದ ವಿಳಂಬವೇ ಕಾರಣ ಎಂದು ಸಲೀಂ ಅಹ್ಮದ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದಾಗ, ಈ ಬಗ್ಗೆ ಅವರನ್ನೇ ಕೇಳಿ ಎಂದಿದ್ದು ವಿಶೇಷವಾಗಿತ್ತು. ನಿಮ್ಮ ಪಕ್ಷದ ಶಾಸಕರೇ ಸೋಲಿನ ಬಗ್ಗೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಸೋಲಿಗೆ ಕಾರಣ ಎಂದು ಹೇಳಿದ್ದಾರೆ ಎಂದಾಗ, ಈ ಬಗ್ಗೆ ನಾನು ಪಕ್ಷದ ವೇದಿಕೆಗಳಲ್ಲಿ ಮಾತನಾಡುತ್ತೇನೆ ಇಲ್ಲಿ ಬೇಡ ಎಂದರು. ಇನ್ನು ಪದವೀಧರ ಕ್ಷೇತ್ರದ ಚುನಾವಣೆ ಕುರಿತ ಪ್ರಶ್ನೆಗೆ 10ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಈ ಬಗ್ಗೆ ಇನ್ನು ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಸದ್ಯದಲ್ಲಿ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದರು.
ರಾಜ್ಯದಲ್ಲಿನ ಸರ್ಕಾರ ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ್ದು ನಮ್ಮ ಪ್ರನಾಳಿಕೆಯಲ್ಲಿ ಹೇಳಿದ್ದ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ. ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲ ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ರಾಜ್ಯದಲ್ಲಿ ಶೌಚಾಲಯಗಳ ನಿರ್ಮಾಣ ಮತ್ತು ಶುದ್ಧ ಕುಡಿವ ನೀರಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಮುಂಬರುವ ವರ್ಷದಲ್ಲಿ 2 ಸಾವಿರ ನೂತನ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.