ಬದು ನಿರ್ಮಾಣ ಕಳಪೆ: ತಾಪಂಸದಸ್ಯರಿಂದ ಅಧಿಕಾರಿ ತರಾಟೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 20
ಜಲಾನಯನ ಇಲಾಖೆಯಡಿ ತಾಲೂಕಿನ ಅನೇಕ ಗ್ರಾಮಗಳ ರೈತರ ಹೊಲದಲ್ಲಿ ಕಳಪೆ ಗುಣಮಟ್ಟದ ಬದು ನಿರ್ಮಾಣ ಮಾಡಿದ್ದು, ಮಳೆ ಸುರಿದರೆ ಒಡೆದು ಹೋಗುವ ಎಲ್ಲ ಸಾಧ್ಯತೆಗಳು ಮೇಲ್ನೋಟಕ್ಕೆ ಕಾಣುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರೈತರು ಮೋಸಕ್ಕೀಡಾಗುತ್ತಿದ್ದಾರೆ ಎಂದು ತಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಕಂಠಿಗೌಡ್ರ ಜಲಾನಯನ ಇಲಾಖೆ ಅಧಿಕಾರಿ ದೀಕ್ಷಿತ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮಂಗಳವಾರ ತಾಪಂ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಅವರು, ಬದು ನಿರ್ಮಾಣ ಮಾಡಿದ ಮೇಲೆ ಸಸಿ ನೆಡಬೇಕೆಂಬ ನಿಯಮವಿದ್ದು, ಎಲ್ಲಿಯೂ ಸಸಿ ನೆಡದೇ ಲಕ್ಷಾಂತರ ಹಣ ಗುಳುಂ ಮಾಡಿದ್ದಾರೆ. ಇಲಾಖೆ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳಿಗಾಗಲಿ, ರೈತರಿಗಾಗಲಿ ತಿಳಿಸದೇ ಮನಸೋ ಇಚ್ಛೆ ಕಾಮಗಾರಿ ಮಾಡಿ ಸರ್ಕಾರದ ಹಣ ಕೊಳ್ಳೆ ಹೊಡೆದಿದ್ದರಿಂದಲೇ ಲೋಕಾಯುಕ್ತ ಅಧಿಕಾರಿಗಳ ಕೈಗೂ ಸಿಕ್ಕು ಬಿದ್ದಿದ್ದು, ಇನ್ನಾದರೂ ಎಚ್ಚರ ವಹಿಸಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ರೈತ ಸಂಪರ್ಕ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಬರುತ್ತಿಲ್ಲ. ಅನೇಕ ಬಾರಿ ಇಂಥ ಘಟನೆಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ರೈತರಿಗೆ ತೀವ್ರ ತೊಂದರೆಯಾಗುತ್ತಿದ್ದು, ಗಮನಹರಿಸಬೇಕು. ಕೃಷಿ ಇಲಾಖೆಯಿಂದ ನಗರ ಪ್ರದೇಶ ರೈತರಿಗೆ ಮಾತ್ರ ತಾಡಪತ್ರಿ ವಿತರಣೆ ಮಾಡಿದ್ದು, ಗ್ರಾಮೀಣ ರೈತರು ಇದರಿಂದ ವಂಚಿತರಾಗಿದ್ದು, ವ್ಯವಸ್ಥೆ ಬದಲಿಸಿಕೊಳ್ಳಬೇಕು ಎಂದರು.
ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ಜನರು ಕುಡಿವ ನೀರಿಗೆ ತೀವ್ರ ಪರದಾಡುತ್ತಿದ್ದು, ಜಿಲ್ಲಾ ಪಂಚಾಯಿತಿ ಇಲಾಖೆ ಅಧಿಕಾರಿಗಳಿಗೆ ಹತ್ತಾರು ಬಾರಿ ತಿಳಿಸಿದರೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಜನ ಫ್ಲೋರೈಡ್ಯುಕ್ತ, ಮಲಿನಗೊಂಡ ನೀರನ್ನೆ ಕುಡಿಯುವ ಅನಿವಾರ್ಯತೆ ಬಂದಿದ್ದು, ತುರ್ತಾಗಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ ಅಧಿಕಾರಿಗಳ ಗಮನ ಸೆಳೆದರು.
ಉತ್ತಮ ಫಲಿತಾಂಶಕ್ಕೆ ಅಭಿನಂದನೆ: ಏಪ್ರಿಲ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ವರ್ಷಕ್ಕಿಂತಲೂ ತಾಲೂಕಿಗೆ ಉತ್ತಮ ಫಲಿತಾಂಶ ಬಂದಿದ್ದು, ಪರೀಕ್ಷೆ ಪೂರ್ವ ತಯಾರಿ ಬಗ್ಗೆ ಮಕ್ಕಳಿಗೆ ಕಾರ್ಯಾಗಾರ, ತಜ್ಞರಿಂದ ತಿಳಿವಳಿಕೆ, ಪ್ರತಿ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಪರೀಕ್ಷೆ ಕುರಿತು ಚರ್ಚೆ ನಡೆಸಿ ಉತ್ತಮ ಫಲಿತಾಂಶ ಬರಲು ಶ್ರಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹಾಗೂ ಶಿಕ್ಷಕ ವೃಂದಕ್ಕೆ ತಾಪಂ ಅಧ್ಯಕ್ಷರು, ಸದಸ್ಯರು ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷೆ ಸುನಂದಾ ಬಿದರಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರದ ಕವಲೂರ, ತಾಪಂ ಇಒ ಎಂ.ನಾರಾಯಣ, ಸದಸ್ಯ ನಿಂಬಣ್ಣ ಮಡಿವಾಳರ, ಸುಶೀಲಾ ಲಮಾಣಿ, ಪಾರ್ವತೆವ್ವ ಈಟಿ, ಫಕೀರವ್ವ ಮುಂಡವಾಡ ಮತ್ತಿತರರು ಸಭೆಯಲ್ಲಿದ್ದರು.