ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಛಾಯಾಗ್ರಾಹಕನ ಮೇಲೆ ಹಲ್ಲೆ: ಖಂಡನೆ

Vishwanath S
Updated On : 22 May 2014, 10:55 am

ಗದಗ: ಕೊಪ್ಪಳದಲ್ಲಿ ಪತ್ರಿಕಾ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಗದಗ ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕೊಪ್ಪಳ ಜಿಲ್ಲೆಯ ಸಿಮ್ಲಾ ಕ್ರಾಸ್ ಬಳಿ ಸಾರ್ವಜನಿಕರು ಮತ್ತು ಸಂಘಟನೆಗಳು ಪ್ರತಿಭಟನೆ ನಡೆಸುವ ಸಂದರ್ಭ ಕನ್ನಡಪ್ರಭ ದಿನಪತ್ರಿಕೆ ಛಾಯಾಗ್ರಾಹಕ ನಾಬಿರಾಜ ದಸ್ತೇನವರ ಮೇಲೆ ಹಲ್ಲೆ ನಡೆಸಿದ ಘಟನೆ ಜರುಗಿದ್ದು, ಹಲ್ಲೆ ನಡೆಸಿದವರ ಬಗ್ಗೆ ತನಿಖೆ ನಡೆಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ನಿಷ್ಪಕ್ಷಪಾತ ವರದಿ ಮಾಡುತ್ತಿದ್ದರೂ ಕೂಡ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದರಿಂದ ನಿಷ್ಪಕ್ಷಪಾತ ವರದಿ ಮಾಡಲು ವಿನಾಕಾರಣ ತೊಂದರೆಯಾಗುತ್ತಿದೆ.
ಇಂಥ ಘಟನೆಗಳು ಪದೇ ಪದೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಪಾರದರ್ಶಕ ವರದಿ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದೆ. ಶರತ್ ಮಹೇಂದ್ರಕರ, ಶಂಕರ ಗುರಿಕಾರ, ವಿನಾಯಕ ಚೌಡಾಪುರ, ಯಚ್ಚರಪ್ಪ ಮಹೇಂದ್ರಕರ, ರಾಮು ವಗ್ಗಿ, ಲಕ್ಷ್ಮಣ ವಗ್ಗಿ, ಬನೇಶ ಕುಲಕರ್ಣಿ, ಚನ್ನಯ್ಯ ಹಿರೇಮಠ, ವಸಂತ ಮಹೇಂದ್ರಕರ ಇತರರು ಪಾಲ್ಗೊಂಡಿದ್ದರು.
ಬಾಲ್ಯ ವಿವಾಹ ತಡೆ
ಗದಗ: ಅಪ್ರಾಪ್ತ ಇಬ್ಬರು ಬಾಲಕಿಯರನ್ನು ಮನೆಯವರೇ ವಿವಾಹ ಮಾಡುತ್ತಿರುವ ವಿಷಯವನ್ನರಿತ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಬುಧವಾರ ವಿವಾಹ ಸ್ಥಳಕ್ಕೆ ತೆರಳಿ ವಿವಾಹವನ್ನು ನಿಲ್ಲಿಸುವ ಮೂಲಕ ಬಾಲ್ಯವಿವಾಹವನ್ನು ತಡೆಹಿಡಿದ ಘಟನೆ ತಾಲೂಕಿನ ಯಲಿಶಿರೂರು ಗ್ರಾಮದಲ್ಲಿ ಜರುಗಿದೆ.
ಈ ಮೊದಲು ನಿಶ್ಚಯಿಸಿದಂತೆ 1998ರ ಜನವರಿ 1ರಂದು ಮತ್ತು 1996ರ ಜುಲೈ 15ರಂದು ಜನಿಸಿರುವ ಇಬ್ಬರು ಬಾಲಕಿಯರಿಗೆ ಪಾಲಕರು ಬುಧವಾರ ಮದುವೆ ಮಾಡುವ ಸರ್ವ ಸಿದ್ಧತೆ ಕೈಗೊಂಡಿದ್ದರು. ಬಾಲ್ಯ ವಿವಾಹವಾಗುತ್ತಿರುವ ಘಟನೆಯ ಅರಿತ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಭಾರತಿ ಶೆಟ್ಟರ್ ನೇತೃತ್ವದಲ್ಲಿ ವಿವಾಹ ಸ್ಥಳಕ್ಕೆ ತೆರಳಿ ಬಾಲ್ಯ ವಿವಾಹವಾಗುತ್ತಿರುವುದನ್ನು ತಡೆಹಿಡಿದು ಇಬ್ಬರೂ ಬಾಲಕಿಯರನ್ನು ಗದುಗಿನ ಮಕ್ಕಳ ರಕ್ಷಣಾ ಸಮಿತಿ ಹಾಜರುಪಡಿಸಲಾಯಿತು.
ನಂತರ ಇಬ್ಬರು ಬಾಲಕಿಯರ ಪೋಷಕರನ್ನು ಕರೆಯಿಸಿ ಪೋಷಕರಿಂದ ಈ ಇಬ್ಬರೂ ಮಕ್ಕಳಿಗೆ 18 ವರ್ಷ ಪೂರ್ಣಗೊಂಡ ಬಳಿಕ ವಿವಾಹ ಮಾಡಿಕೊಡಲಾಗುವುದು ಎಂಬ ಮುಚ್ಚಳಿಕೆ ಬರೆಯಿಸಿಕೊಂಡು ನಂತರ ಇಬ್ಬರೂ ಬಾಲಕಿಯರನ್ನು ಪೋಷಕರೊಂದಿಗೆ ಕಳಿಸಲಾಯಿತು.
ಬೆಟಗೇರಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆ: ಚೇಂಬರ್
ಗದಗ: ಒಂದು ತಿಂಗಳಿಂದ ಬೆಟಗೇರಿ ಭಾಗದಲ್ಲಿ ವಿದ್ಯುತ್ ಸರಬರಾಜು ಏಕಾಏಕಿ ನಿಲ್ಲಿಸಲಾಗುತ್ತದೆ. ಅಲ್ಪಸ್ವಲ್ಪ ಗಾಳಿ, ಗುಡುಗು ಸಿಡಿಲಿಗೂ ಸರಬರಾಜು ನಿಲುಗಡೆ ಮಾಡಲಾಗುತ್ತಿದೆ. ಗಾಳಿ ಮಳೆ ಇಲ್ಲದಿದ್ದರೂ ಅದೇಷ್ಟೋ ಸಲ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಈ ಬಗ್ಗೆ ನಮ್ಮ ಸಂಸ್ಥೆ ಪ್ರತಿನಿಧಿಗಳು ಸಂಸ್ಥೆಗೆ ದೂರು ಕೊಟ್ಟಿದ್ದಾರೆ. ಕಾರಣ ತಾವು ಸಂಬಂಧಪಟ್ಟವರಿಂದ ಏಪ್ರಿಲ್ 15ರ ನಂತರ ಆದ ವಿದ್ಯುತ್ ನಿಲುಗಡೆ ವಿವರ ಪಡೆದು ನಿಲುಗಡೆಗೆ ಇದ್ದ ಕಾರಣ ಕುರಿತು ಮಾಹಿತಿ ಪಡೆದು ನಮ್ಮ ಸಂಸ್ಥೆಗೆ ಕಳಿಸಿಕೊಡುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಕಾರ್ಯ ಮತ್ತು ಪಾಲನೆ ವಿಭಾಗ ಹೆಸ್ಕಾಂ ಗದಗ ಅವರಿಗೆ ಪತ್ರದ ಮೂಲಕ ಗದಗ ಜಿಲ್ಲಾ ಚೇಂಬರ್ ಸಂಸ್ಥೆಯ ವಿದ್ಯುತ್ ಉಪ ಸಮಿತಿ ಚೇರ್‌ಮನ್ ಆರ್.ಕೆ. ರಂಗ್ರೇಜ ಕೋರಿರುತ್ತಾರೆಂದು ಸಂಸ್ಥೆ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ಉರೂಸ್
ನರೇಗಲ್ಲ: ಸ್ಥಳೀಯ ಹಜರತ್ ಸಯ್ಯದ್ ಶಾ ರಹಿಮಾನ್ ಶಾವಲಿಯವರ ಉರುಸು ಮೇ 23ರಿಂದ 25ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಉರೂಸ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 23ರಂದು ಬೆಳಗ್ಗೆ 10ಕ್ಕೆ ಉರೂಸಿನ ಉದ್ಘಾಟನಾ ಸಮಾರಂಭ ಜರುಗಲಿದ್ದು, ನರೇಗಲ್ಲ ದರ್ಗಾದ ಅಬ್ದುಲ್ ರಹಿಮನ್ ಶಾವಲಿ ಅಜ್ಜನವರು ಸಾನ್ನಿಧ್ಯ ವಹಿಸಲಿದ್ದಾರೆ. ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳು ಅಧ್ಯಕ್ಷತೆ ವಹಿಸಲಿದ್ದು, ರೋಣದ ಗುಲಗಂಜಿ ಮಠದ ಗುರುಪಾದ ದೇವರು, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಆಡ್ನೂರಿನ ಪಂಚಕ್ಷರ ಶ್ರೀಗಳು, ರೋಣ ದರಗಾದ ಷಾ. ಸುಲೇಮಾನ್ ಶಾವಲಿಯವರು ಪಾಲ್ಗೊಳ್ಳುವರು.
24ರಂದು ಶನಿವಾರ ಸಂಜೆ ಉರೂಸಿನ ಮೆರವಣಿಗೆ ನಡೆಯಲಿದ್ದು, ನಂತರ ಹಾಸ್ಯ ಮತ್ತಿತರ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ. ಬಿನ್ನಾಳದ ಜೀವನಸಾಬ್ ವಾಲಿಕಾರ ವಿಶೇಷ ಉಪನ್ಯಾಸ ನೀಡಲಿದ್ದು, ರಾತ್ರಿ 9.30ಕ್ಕೆ ಜನಪದ ಕಲಾ ತಂಡದವರಿಂದ ಅನೇಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಹೇಳಿಕೆ ಖಂಡಿಸಿ ಕೋಳಿವಾಡ ಭಾವಚಿತ್ರ ದಹನ
ಗದಗ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಖಂಡ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ನೀಡಬಾರದಿತ್ತು. ಅದಕ್ಕಾಗಿಯೇ ಪಕ್ಷ ಸೋಲುವಂತಾಯಿತು ಎನ್ನುವ ಕೋಳಿವಾಡ ಅವರ ಹೇಳಿಕೆ ಖಂಡಿಸಿ ರಾಜ್ಯ ಮುಸ್ಲಿಂ ಜಾಗೃತ ವೇದಿಕೆ ಪದಾಧಿಕಾರಿಗಳು ಬುಧವಾರ ನಗರದ ಗಾಂಧಿ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಹಾಗೂ ಭಾವಚಿತ್ರ ಸುಟ್ಟು ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮುಖಂಡರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಸೋಲಲು ನೇರ ಕೋಳಿವಾಡರಂಥ ಪಕ್ಷ ವಿರೋಧಿ ಶಾಸಕರೇ ಕಾರಣರಾಗಿದ್ದಾರೆ. ಅವರು ಶಾಸಕರಾಗುವ ವೇಳೆ ಅಲ್ಪ ಸಂಖ್ಯಾತರ ಮತಗಳನ್ನು ಪಡೆದು ಈಗ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಈ ಕುರಿತು ಶೀಘ್ರ ಪಕ್ಷದ ರಾಜ್ಯಾಧ್ಯಕ್ಷ ಡಾ. ಪರಮೇಶ್ವರ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕೆಲ ಹೊತ್ತು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೆ.ಬಿ. ಕೋಳಿವಾಡರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ನಡೆಸಿ, ನಂತರ ಭಾವಚಿತ್ರ ಸುಟ್ಟು ಹಾಕುವ ಮೂಲಕ ಅಲ್ಪಸಂಖ್ಯಾತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿರಾಜ್ ಖಾಜಿ, ಜಾವೇದ ಸುಂಕದ, ಬಿ.ಎ. ಶಿರಹಟ್ಟಿ, ಶಾಹೀದ್ ಸುಂಕದ, ಎಂ.ಐ. ಮುಲ್ಲಾ, ಎಂ.ಯು. ದೊಡ್ಡಮನಿ, ರಫೀಕ್ ಮುಲ್ಲಾ, ಎಂ.ಡಿ. ಸವದತ್ತಿ, ಶಬ್ಬೀರ ರೋಣದ, ಎಸ್.ಎಸ್. ಇನಾಂದಾರ, ಇಮಾಮ್ ಶಿರಹಟ್ಟಿ, ಇಮಾನ ತಳಕಲ್ಲ, ಸಮೀರ ಮುಳಗುಂದ, ಇಸೂಫ್ ಕೊಟ್ಟೂರ, ಶಫೀ ರೋಣ, ಮೆಹಬೂಬ ಮಿರ್ಜಿ, ಶಫೀ ಬಬರ್ಜಿ, ಇರ್ಫಾನ್ ಕಾಗದಾಗಾರ, ಸದ್ದಾಂ ಹುಬ್ಬಳ್ಳಿ, ಇಮ್ತಿಯಾಜ್ ಶೇಖ್, ಜಾಹಾಂಗೀರ ಅಹ್ಮದ್ ಮುಳಗುಂದ, ಅಕ್ಬರ್ ಬಳ್ಳಾರಿ, ಸೋಹೆಲ್ ಶಿರಹಟ್ಟಿ, ತೌಶಿಫ್ ನರಗುಂದ, ಇಸ್ಮಾಯಿಲ್ ಕಲಾದಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement