ಪುರಸಭೆ ದುರಾಡಳಿತ ಖಂಡಿಸಿ ಧರಣಿ
ಗಜೇಂದ್ರಗಡ: ಸಾರ್ವಜನಿಕರ ಆಸ್ತಿ ಮತ್ತು ತೆರಿಗೆ ಹಣ ದುರ್ಬಳಕೆ ಮಾಡಿ ತುಘಲಕ್ ದರ್ಬಾರ ನಡೆಸುತ್ತಿರುವ ಪುರಸಭೆ ಆಡಳಿತ ಜತೆ ದುರಾಡಳಿತದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಆವರಣದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.
ಬಿಜೆಪಿ ಆಡಳಿತ ನಡೆಸುತ್ತಿರುವ ಪುರಸಭೆ ವ್ಯಾಪ್ತಿಯ 21ನೇ ವಾರ್ಡಿನಲ್ಲಿ ಮೈಸೂರು ಮಠಕ್ಕೆ ತೆರಳುವ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್ ತೆರವುಗೊಳಿಸಿ, ಅದೇ ಸ್ಥಳದಲ್ಲಿ ಪುರಸಭೆ ಮಾಹಿತಿ ನಿಡದೇ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿವುದನ್ನು ತೆರವುಗೊಳಿಸಬೇಕು. ಪುರಸಭೆ ಅಧ್ಯಕ್ಷರು ಸದಸ್ಯರ ಗಮನಕ್ಕೆ ತರದೇ ಪೌರಾಡಳಿತ ನಿಯಮ ಗಾಳಿಗೆ ತೂರಿ ಕರ್ನಾಟಕ ಜನಹಿತ ವೇದಿಕೆಗೆ ರು. 1 ಲಕ್ಷ ದಾನ ನೀಡಿ ಸಾರ್ವಜನಿಕರ ತೆರಿಗೆ ಹಣ ಲಪಾಟಿಯಿಸಿದ್ದಾರೆ. ಅಲ್ಲದೇ ಹಲವಾರು ಸಾರ್ವಜನಿಕ ಆಸ್ತಿ ಮತ್ತು ಹಣವನ್ನು ಬಿಜೆಪಿ ಮುಖಂಡರು ಲಪಾಟಾಯಿಸಿರುವ ಬಗೆಗೆ ದಾಖಲೆಗಳಿವೆ. ಈ ಅನ್ಯಾಯ ಸರಿ ಪಡಿಸುವರೆಗೂ ಧರಣಿ ಮುಂದುವರೆಸುತ್ತೇವೆ ಎಂದರು.
ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ರವಿ ಗಡೇದವರ, ಸುಭಾನಸಾಬ ಆರಗಿದ್ದಿ, ಉಮೇಶ ರಾಠೊಡ, ನ್ಯಾಯವಾದಿ ಎಂ.ಎಚ್. ಕೋಲಕಾರ, ಸಾಹಿತಿ ಎಫ್.ಎಸ್. ಕರಿದರಗನವರ, ಕೊಟ್ರೇಶ ಚಿಲಕಾ, ಮೋಹನಸಾ ರಾಯಬಾಗಿ ಮಾತನಾಡಿ, ಸ್ಥಳೀಯ ಪುರಸಭೆ ಒಡೆತನದ ಸಾರ್ವಜನಿಕ ಆಸ್ತಿಯನ್ನು ಕೆಲ ಬಿಜೆಪಿ ಮುಖಂಡರು ಖೊಟ್ಟಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಬಳಿಸಿರುವದು ತಡೆ ಹಿಡಿಯಬೇಕು. ಮತ್ತು ಜನಹಿತ ವೇದಿಕೆಗೆ ನೀಡಿರುವ ದೇಣಿಗೆ ಹಿಂಪಡೆಯಬೇಕು. ಅಲ್ಲಿವರೆಗೆ ಧರಣಿ ನಿಲ್ಲುವದಿಲ್ಲ ಎಂದು ಎಚ್ಚರಿಸಿದರು.
ಸ್ಥಳೀಯ ಪುರಸಭೆ ಆಡಳಿತ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪಟ್ಟಣದಲ್ಲಿನ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟುತ್ತಿರುವ ಕಟ್ಟಡಕ್ಕೆ ಪುರಸಭೆ ಆಡಳಿತ ಬೆಂಗಾವಲಾಗಿ ನಿಂತಿದೆ. ಇದರ ಬಗೆಗೆ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅಕ್ರಮ ಕಟ್ಟಡವನ್ನು ತೆರವುಗೊಳಿಸದಿದ್ದರೆ ಪುರಸಭೆಗೆ ಬೀಗ ಹಾಕಿ ಧರಣಿ ಸತ್ಯಾಗ್ರಹ ಮಾಡಲಾಗುವುದು. ಮುಂದಾಗುವ ಅವಘಡಗಳಿಗೆ ಜಿಲ್ಲಾಡಳಿತ ಹೊಣೆ ಎಂದು ಎಚ್ಚರಿಕೆ ನೀಡಿ, ನ್ಯಾಯ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಸದಸ್ಯ ಸುಜಾತಾ ಚುಂಚಾ, ಶಾರದಾ ರಾಠೋಡ, ಶಾರಮ್ಮ ತಳವಾರ, ಚಂಬಣ್ಣ ಚವಡಿ, ಶ್ರೀಧರ ಗಂಜಿಗೌಡರ, ಅಜೀತ ವಂದಕುದರಿ, ಹಸನ್ ತಟಗಾರ, ದಾದೇಸಾಬ ಹಣಗಿ, ಶಂಕರ ರಾಠೋಡ, ಎನ್.ಎಚ್. ಬಸವಾ, ಹನಮಂತಪ್ಪ ಕಲ್ಲೋಡ್ಡರ, ವೆಂಕಟೇಶ ಮುದ್ಗಲ್, ಭೀಮಣ್ಣ ತಳವಾರ, ಶರಣಪ್ಪ ಕೊಟಗಿ, ದತ್ತು ಬಾಕಳೆ ಇದ್ದರು.
ಪುರಸಭೆ ವ್ಯಾಪ್ತಿ 21ನೇ ವಾರ್ಡ್ನ ಚೌಕಿಮಠ ರಸ್ತೆ ಬಳಿಯ ಪುರಸಭೆ ಜಾಗೆಯಲ್ಲಿ ಯಲ್ಲಮ್ಮ ಅರಳಿಗಿಡದ ಎಂಬುವರು ಅನಧಿಕೃತ ಕಟ್ಟಡ ಕಾಮಗಾರಿ ಮಾಡುತ್ತಿರುವ ಬಗ್ಗೆ ಕರಿಯಪ್ಪ ತಾತಾಜಿ ಕೊರವರ ಸಮಾಜ ಕ್ಷೇಮಾಭಿವೃದ್ಧಿ ಸಂಘ ಏ. 26ರಂದು ನೀಡಿದ ತಕರಾರು ಅರ್ಜಿ ಮೇರೆಗೆ ಪುರಸಭೆಯಿಂದ ಪರಿಶೀಲಿಸಲಾಗಿ ಕಟ್ಟಡ ನಿರ್ಮಾಣ ಸಂಪೂರ್ಣ ಅನಧಿಕೃತವಾಗಿದ್ದು, ಪುರಸಭೆಯಲ್ಲಿ ಮೂಲ ದಾಖಲೆಗಳಿಲ್ಲದ್ದರಿಂದ ಕಟ್ಟಡ ತೆರವುಗೊಳಿಸಲು 3 ನೋಟಿಸ್ ನೀಡಲಾಗಿದ್ದು, ಮೇ 27ರೊಳಗೆ ಯಲ್ಲಮ್ಮ ಅರಳಿಗಿಡದರು ಸ್ವಯಂಪ್ರೇರಣೆಯಿಂದ ಕಟ್ಟಡ ತೆರವುಗೊಳಿಸಲು ಮುಂದಾಗದಿದ್ದಲ್ಲಿ ಪುರಸಭೆ ಕಾಯ್ದೆ 1964 ಕಲಂ 189 ಮತ್ತು 216ರಡಿ ಪುರಸಭೆಯಿಂದ ಕಟ್ಟಡ ತೆರವು ಕಾರ್ಯಾಚರಣೆ ನಡೆಸಲಾಗುವುದು. ಕರ್ನಾಟಕ ಜನಹಿತ ವೇದಿಕೆಗೆ ರು. 1 ಲಕ್ಷ ನೀಡಿದ ದಾನಕ್ಕೆ ಸಂಬಂಧಿಸಿದಂತೆ ಪುರಸಭಾ ಆಡಳಿತ ಮಂಡಳಿ ಹೊಣೆಗಾರಲ್ಲ. ಈ ಕುರಿತು ಡಿಸಿಗೆ ಲಿಖಿತ ಮಾಹಿತಿ ನೀಡಲಾಗಿದೆ.
-ಬಿ.ಟಿ. ಬಂಡಿವಡ್ಡರ, ಪುರಸಭೆ ಪ್ರಭಾರ ಮುಖ್ಯಾಧಿಕಾರಿ