ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೆಟಗೇರಿ-ಗದಗದ ಐವರು ಯುವತಿಯರು ನಾಪತ್ತೆ

Vishwanath S
Updated On : 22 May 2014, 10:54 am

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೂರು ವಾರಗಳ ಅವಧಿಯಲ್ಲಿ ಐವರು ಯುವತಿಯರು ನಾಪತ್ತೆಯಾಗಿದ್ದಾರೆ. ಹೆಣ್ಣು ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಐವರು ನಾಪತ್ತೆಯಾಗಿದ್ದರೂ ಒಂದು ದೂರು ಮಾತ್ರ ದಾಖಲಾಗಿದ್ದು, ಇದಕ್ಕೆ ಪುಷ್ಟಿ ನೀಡುತ್ತಿದೆ.
ಸುಮಾರು 20 ದಿನಗಳ ಅವಧಿಯಲ್ಲಿ ಐವರು ಯುವತಿಯರು ನಾಪತ್ತೆಯಾಗಿರುವ ವಿಚಾರ ಅವಳಿ ನಗರದಲ್ಲಿ ಭಾರಿ ಚರ್ಚೆ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ಹಾಗೂ ರಾಜೀವ್ ಗಾಂಧಿ ನಗರ ಠಾಣೆ ವ್ಯಾಪ್ತಿಯಲ್ಲಿ ಒಬ್ಬಳು ಯುವತಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ. ಬೆಟಗೇರಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಅದರಲ್ಲೂ ಅಪಹರಣ ಎಂದು ನಮೂದಿಸಲಾಗಿದೆ. ಉಳಿದ ಯುವತಿಯರ ನಾಪತ್ತೆ ಬಗ್ಗೆ ಇನ್ನೂ ಪ್ರಕರಣ ದಾಖಲಾಗಿಲ್ಲ.
ಮಾರಾಟ ಜಾಲ ಶಂಕೆ: ಈ ಹಿಂದೆ ಹುಬ್ಬಳ್ಳಿ-ಧಾರವಾಡ ಹಾಗೂ ಕಲಘಟಗಿ ಭಾಗದಲ್ಲಿ ಹುಡುಗಿಯರ ಮಾರಾಟ ಜಾಲ ವ್ಯಾಪಕವಾಗಿ ಕೆಲಸ ಮಾಡುತ್ತಿತ್ತು. ಅಲ್ಲಿ ಕೆಲ ವರ್ಷಗಳಿಂದ ಪೊಲೀಸರು ಬಿಗು ಕ್ರಮ ಕೈಗೊಂಡಿದ್ದರಿಂದ ಈ ಜಾಲ ಗದಗ ಮತ್ತು ಕೊಪ್ಪಳ ಜಿಲ್ಲೆಯತ್ತ ದೃಷ್ಟಿ ನೆಟ್ಟಿತು. ಬಡ ಅಮಾಯಕ ಹೆಣ್ಣು ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲೂ ಇಂತಹ ಪ್ರಕರಣಗಳು ನಡೆಯುತ್ತಿವೆ. ವಿಚಿತ್ರವೆಂದರೆ ಹೆತ್ತವರೂ ತಮ್ಮ ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಲು ಮುಂದೆ ಬಾರದಿರುವುದು ತನಿಖೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
ವದಂತಿ: ಯುವತಿಯರಿಗೆ ಆಮಿಷವೊಡ್ಡಿ (ಕೆಲವು ಬಾರಿ ಪ್ರೀತಿಯ ನೆಪ) ಕರೆದೊಯ್ದು, ದೂರದ ಮುಂಬೈ ನಗರದಲ್ಲಿ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ ಎಂಬ ಸಂಶಯ ಜನರನ್ನು ಕಾಡುತ್ತಿದೆ. ಪೊಲೀಸರಿಗೆ ದೂರು ಕೊಡಲು ಹೋದರೆ, ಮಕ್ಕಳ ಬಗ್ಗೆ ಪೂರ್ಣ ಮಾಹಿತಿ ಇರುವುದಿಲ್ಲ. ಸುಳ್ಳ... ಏನಾರ ಹೇಳಿ ಜನರಲ್ಲಿ ಗೊಂದ್ಲಾ ಹಿಡಿಸಬ್ಯಾಡ್ರಿ, ಖಚಿತ ಮಾಹಿತಿ ಇದ್ರ ಹೇಳ್ರಿ.. ತಕ್ಷಣಾ ಹಿಡ್ಕೊಂಡ್ ಬರತೀವಿ ಅಂತಾರ, ಆದ್ರ ದಿನಾ ದಿನಾ ಇಂತಾ ಪ್ರಕರಣಗಳು ಅವಳಿ ನಗರದಲ್ಲಿ ಹೆಚ್ಚೆಚ್ಚು ಆಗಾಕತ್ತಾವ ಎಂದು ಸಣ್ಣ ಅಂಗಡಿ ವ್ಯಾಪಾರಸ್ಥನೊಬ್ಬ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾನೆ.
 ಪೊಲೀಸರಿಗೆ ತಲೆನೋವು
ನಾಪತ್ತೆ ಪ್ರಕರಣಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತವೆ. ಆದರೆ, ಹುಡುಗಿಯರ ನಾಪತ್ತೆ ವಿಷಯವಾಗಿ ಪಾಲಕರು ಮಾಧ್ಯಮ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿಯನ್ನೇ ನೀಡುವುದಿಲ್ಲ. ಮಕ್ಕಳು ಕಾಣೆಯಾಗಿ 21 ದಿನ ಕಳೆದಿವೆ. ದೂರು ಕೊಡುವುದರಿಂದ ಮನೆಯ ಮರ್ಯಾದೆ ಹೋಗುತ್ತದೆ, ಉಳಿದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ, ಇಂದಲ್ಲ ನಾಳೆ ಮಗಳು ಮನೆಗೆ ಬರುತ್ತಾಳೆ ಎನ್ನುವ ವಿಶ್ವಾಸದಲ್ಲಿ ಪೋಷಕರು ಕಾಲ ದೂಡುತ್ತಾರೆ. ಮಾಧ್ಯಮವರು ಕೇಳಲು ಹೋದರೂ ಮನೆಯಲ್ಲಿ ಯಾರೂ ಇಲ್ಲ ಎಂದು ಸಾಗಹಾಕುತ್ತಾರೆ. ಪೊಲೀಸರಿಗೆ ದೂರು ನೀಡದ ಹೊರತು ತನಿಖೆ ಸಾಧ್ಯವಿಲ್ಲ. ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುವುದೂ ಕಷ್ಟವಾಗಿದ್ದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ. ಉಳಿದವರು ನಾಪತ್ತೆಯಾಗಿರುವ ಬಗ್ಗೆ ನಮಗ್ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಪೊಲೀಸರು ವ್ಯಾಪಕ ಬಲೆ ಬೀಸಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ.
- ಎಂ.ಬಿ. ಗೊರವನಕೊಳ್ಳ, ಪಿಎಸ್‌ಐ, ಬೆಟಗೇರಿ


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement