ಮಳೆ, ಗಾಳಿಗೆ ಹಾನಿ: ಮೂವರಿಗೆ ಗಾಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 21
ಸಮಿಪದ ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಜೋರಾಗಿ ಬೀಸಿದ ಮಳೆ, ಗಾಳಿಗೆ ರಾಮಣ್ಣ ಬಾರ್ಕಿ ಎನ್ನುವವರ ಮನೆಯ ತಗಡುಗಳು ಕಿತ್ತು ಹೋಗಿ ಆತನ ಮೂರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಜರುಗಿದೆ.
ಗ್ರಾಮದಲ್ಲಿನ ಇನ್ನು ಹಲವು ಮನೆಯ ತಗಡುಗಳು ಕಿತ್ತು ಹೋಗಿ ಅಪಾರ ಹಾನಿ ಸಂಭವಿಸಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಕನೋಜ ಅವರು ತಿಳಿಸಿದ್ದಾರೆ.
ಶಿಗ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಒಮ್ಮೆಲೆ ಮಳೆ ಗಾಳಿ ಜೋರಾಗಿ ಬೀಸಲು ಪ್ರಾರಂಭಿಸಿದಾಗ ರಾಮಣ್ಣ ಬಸಪ್ಪ ಬಾರ್ಕಿ ಎನ್ನುವವರ ಮನೆಯ ಸುಮಾರು 30 ಸಿಮೆಂಟ್ ತಗಡುಗಳು ಕಿತ್ತು ಅಪಾರ ಹಾನಿ ಸಂಭವಿಸಿದೆ. ಅಲ್ಲದೆ ಮನೆಯಲ್ಲಿದ್ದ ಹೆಣ್ಣು ಮಗಳಾದ ಜಯಲಕ್ಷ್ಮೀ ಹಾಗೂ ಮೋಕ್ಷಾ ಮತ್ತು ಆದಮ್ ಎನ್ನುವ ಗಂಡು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದೆ ಸಂದರ್ಭ ಮನೆಯಲ್ಲಿದ್ದ ಕಲರ್ ಟಿವಿ ಮಿಕ್ಷರ್ ಗ್ರೈಂಡರ್, ಕುರ್ಚಿಗಳು ಕಪಾಟು, ಕಾಟು ಹಾಗೂ ಮನೆಯಲ್ಲಿನ ಪಾತ್ರೆ ಪಗಡಗಳು ಹಾಳಾಗಿವೆ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಆಗಮಿಸಿ ಪರಿಶೀಲಿಸಿದ್ದು, ಸುಮಾರು ರು. 90 ಸಾವಿರ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ ಎಂದು ಅವರು ತಿಳಿಸಿದರು. ಹಾನಿಯ ವರದಿಯನ್ನ್ನು ತಹಸೀಲ್ದಾರ್‌ಗೆ ತಲುಪಿಸಲಾಗುತ್ತದೆ ಎಂದು ಗ್ರಾಮಲೆಕ್ಕಾಧಿಕಾರಿ ಕನೋಜ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಪದ್ಮರಾಜ ಪಾಟೀಲ, ನೀಲಪ್ಪ ತಳವಾರ, ಚಂದ್ರು ತಳವಾರ ಮೊದಲಾದವರು ಉಪಸ್ಥಿತರಿದ್ದರು.
ಸಂಕನೂರಗೆ ಟಿಕೆಟ್: ಸ್ವಾಗತ
ಮುಂಡರಗಿ: ವಿಧಾನ ಪರಿಷತ್ ಪಶ್ಚಿಮ ಪದವೀಧ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಪ್ರಾ. ಎಸ್.ವಿ. ಸಂಕನೂರ ಅವರಿಗೆ ಟಿಕೇಟ್ ನೀಡಿರುವ ಬಿಜೆಪಿ ವರಿಷ್ಟರ ಕ್ರಮ ಸ್ವಾಗತಾರ್ಹ ಎಂದು ಶಿರಹಟ್ಟಿ ವಿಧಾನಸಭ ಮತಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ತಿಳಿಸಿದ್ದಾರೆ.
ಅವರು ಬುಧವಾರ ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದರು. 2008 ರಲ್ಲಿ ಜರುಗಿದ ಇದೇ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಗೆಲವುನ್ನೂ ಸಾಧಿಸಿದ್ದ ಮೋಹನ್ ಲಿಂಬಿಕಾಯಿ ಒಂದೇ ಒಂದು ಬಾರಿ ಈ ಕ್ಷೇತ್ರದತ್ತ ಹಾಗೂ ಈ ಕ್ಷೇತ್ರದಲ್ಲಿ ಮತನೀಡಿದ ಮತದಾರರತ್ತ ತಿರುಗಿ ನೋಡಿಲ್ಲ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಜರುಗುವ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಆದ್ದರಿಂದ ಇಂದು ಪ್ರಾ. ಎಸ್.ವಿ. ಸಂಕನೂರ ಅವರಿಗೆ ಟಿಕೇಟ್ ಘೋಷಣೆಯಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಖುಷಿ ತಂದಿದೆ. ಸಂಕನೂರ ಅವರಿಗೆ ಸಾಕಷ್ಟು ಜನ ಬೆಂಬಲವಿದ್ದು, ಇವರು ಖಂಡಿತವಾಗಿ ಅತ್ಯಧಿಕ ಮತಗಳ ಅಂತರದಲ್ಲಿ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.