ಲಿಂಬಿಕಾಯಿ ಪಕ್ಷದ ನಿಲುವು ವಿರೋಧಿಸದಿರಲಿ
ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಸ್.ವಿ. ಸಂಕನೂರ ಅವರನ್ನು ಆಯ್ಕೆ ಮಾಡುವಲ್ಲಿ ಸ್ವತಃ ಯಡಿಯೂರಪ್ಪನವರ ಸಹಮತಿಯೂ ಇದೆ. ಹೀಗಿರುವಾಗ ಯಡಿಯೂರಪ್ಪನವರ ಬಣವನ್ನು ಪಕ್ಕಕ್ಕೆ ಸರಿಸುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ ಎಂದು ಪ್ರಶ್ನಿಸಿರುವ ಮಾಜಿ ಸಚಿವ ಕಳಕಪ್ಪ ಬಂಡಿ, ಸಂಕನೂರ ಸೂಕ್ತ ಅಭ್ಯರ್ಥಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್.ವಿ. ಸಂಕನೂರ ಅಭ್ಯರ್ಥಿಯಾಗಬೇಕೆಂದು ತಾವೂ ಸಹ ಸೂಚಿಸಿದ್ದೇವೆ. ಏಕೆಂದರೆ ಸಂಕನೂರ ಶಿಕ್ಷಕರ ಮತ ಕ್ಷೇತ್ರ ಹಾಗೂ ಪದವೀಧರ ಮತ ಕ್ಷೇತ್ರದಲ್ಲಿ ಕಳೆದ 1985ರಿಂದಲೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 1990 ಹಾಗೂ 1996ರ ಚುನಾವಣೆಯಲ್ಲಿ ಅವರು ಸ್ಪರ್ಧಿಸಿ ಸೋತಿದ್ದರೂ ಈ ಕ್ಷೇತ್ರದ ಮತದಾರರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಅನ್ಯ ಪಕ್ಷದಲ್ಲಿ ಅವರಿಗೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಇದೀಗ ಬಿಜೆಪಿಯಲ್ಲಿ ಅವರಿಗೆ ವೇದಿಕೆ ಸಿಕ್ಕಿದೆ. ಸಂಕನೂರ ಪ್ರಭಾವಿ ಹಾಗೂ ಕ್ಷೇತ್ರದ ಆಳ ಅಗಲವನ್ನು ಅರಿತಿರುವ ವ್ಯಕ್ತಿ. ಹೀಗಾಗಿ ಅವರಿಗೆ ಟಿಕೆಟ್ ನೀಡಲು ಪಕ್ಷದ ಕೋರ್ ಕಮಿಟಿ ನಿರ್ಧರಿಸಿದೆ ಎಂದವರು ತಿಳಿಸಿದ್ದಾರೆ.
ಮೋಹನ ಲಿಂಬಿಕಾಯಿಯವರು ಇದೇ ಕ್ಷೇತ್ರವನ್ನು ಪ್ರತಿನಿಧಿಸಿ ಗೆಲವು ಸಾಧಿಸಿದ್ದು ನಿಜ. ಆದರೆ ರಾಜಕೀಯದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು ಹಾಗೂ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಯೋಚಿಸಿ ಸಂಕನೂರ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆಂದ ಮಾತ್ರಕ್ಕೆ ಲಿಂಬಿಕಾಯಿಯವರನ್ನು ಪಕ್ಕಕ್ಕೆ ಸರಿಸಲಾಗಿದೆ ಅಥವಾ ಯಡಿಯೂರಪ್ಪ ಬಣವನ್ನು ದೂರ ಮಾಡಲಾಗುತ್ತಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಯಡಿಯೂರಪ್ಪ ಸೇರಿದಂತೆ ಶೋಭಾ ಕರಂದ್ಲಾಜೆ, ಶಿವಕುಮಾರ ಉದಾಸಿಯವರಿಗೆ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ ಅವರ ಗೆಲುವಿಗೆ ಕಾರಣವೂ ಆಗಿದೆ. ಒಂದೊಮ್ಮೆ ಯಡಿಯೂರಪ್ಪ ಬಣ ಕಡೆಗಣಿಸುವುದೇ ಆಗಿದ್ದರೆ ಇವರಿಗೆಲ್ಲ ಟಿಕೆಟ್ ಸಿಗುತ್ತಿರಲಿಲ್ಲ. ಯಡಿಯೂರಪ್ಪನವರೂ ನಮ್ಮ ನಾಯಕರು. ಹೀಗಾಗಿಯ ಇಲ್ಲಿ ಯಡಿಯೂರಪ್ಪ ಬಣ ಮತ್ತೊಂದು ಬಣವಿಲ್ಲ. ಎಲ್ಲರೂ ಬಿಜೆಪಿಯ ಸೂರಿನಲ್ಲಿರುವವರು. ಲಿಂಬಿಕಾಯಿಯವರಿಗೆ ಟಿಕೆಟ್ ಸಿಗದಿರುವುದರಿಂದ ಅಸಮಾಧಾನವಾಗಿರಬಹುದು. ಹಾಗೆಂದ ಮಾತ್ರಕ್ಕೆ ಪಕ್ಷದ ನಿಲುವಿಗೆ ವಿರುದ್ಧ ಮಾತನಾಡುವುದು ಸರಿಯಲ್ಲ. ಮುಂದೊಂದು ದಿನ ಲಿಂಬಿಕಾಯಿಯವರಿಗೆ ಬೇರೆ ಕ್ಷೇತ್ರದಿಂದ ಅವಕಾಶ ಸಿಗಲೂಬಹುದು. ಸಂಯಮ ಕಳೆದುಕೊಳ್ಳುವುದು ಬೇಡ ಎಂದು ಬಂಡಿ ತಿಳಿಸಿದ್ದಾರೆ.