ಇಂದು ಹುಬ್ಬಳ್ಳಿಯಲ್ಲಿ ಸಾರಿಗೆ ನೌಕರರ ಧರಣಿ
ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗಾಗುತ್ತಿರುವ ಕಿರುಕುಳ ವಿರುದ್ಧ ಹಾಗೂ ಬಾಕಿ ವೇತನಗಳನ್ನು ಪಡೆಯಲು ಹುಬ್ಬಳ್ಳಿಯ ವಾಕರ ಸಾರಿಗೆ ನಿಗಮ ಕೇಂದ್ರ ಕಚೇರಿ ಎದುರು ಮೇ 23ರಂದು ಒಂದು ದಿನ ಸಾಮೂಹಿಕ ಧರಣಿ ನಡೆಸುವುದಾಗಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಗದಗ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ವೆಂಕಟೇಶ ದಾಸರ ಹೇಳಿದರು.
ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ವಿವಿಧ ಬೇಡಿಕೆಗಳ ಸಾಮೂಹಿಕ ಧರಣಿ ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ನಡೆಯಲಿದ್ದು, ಹಿರಿಯ ಕಾರ್ಮಿಕ ಧುರೀಣ ಡಾ. ಕೆ.ಎಸ್. ಶರ್ಮಾ ಧರಣಿ ನೇತೃತ್ವ ವಹಿಸುವರು. ವಾಯವ್ಯ ಕರ್ನಾಟಕ ಸಾರಿಗೆ ನಿಗಮ ವ್ಯಾಪ್ತಿಗೆ ಬರುವ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಚಿಕ್ಕೋಡಿ, ಗದಗ, ಹಾವೇರಿ, ಬಾಗಲಕೋಟೆ, ಶಿರಸಿ ವಿಭಾಗಗಳು ಹಾಗೂ ಅವುಗಳ ಘಟಕಗಳು, ಪ್ರಾದೇಶಿಕ ಕಾರ್ಯಾಗಾರ (ಹುಬ್ಬಳ್ಳಿ)ದಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಅನೇಕ ಬೇಡಿಕೆಗಳು ಈಡೇರದೇ ತೊಂದರೆ ಅನುಭವಿಸುತ್ತಿದ್ದಾರೆ. ಸಂಸ್ಥೆಯ ಪುರುಷ ಹಾಗೂ ಮಹಿಳಾ ಕಾರ್ಮಿಕರು ಹೇಳತೀರದ ಕಿರುಕುಳಗಳನ್ನು ಅನುಭವಿಸುತ್ತಾ ಅಮಾನುಷ ಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ದಬ್ಭಾಳಿಕೆ ಹೆಚ್ಚುತ್ತಿದ್ದು, ಅಮಾನವೀಯ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಮಿಕರು ಕಾನೂನು ಪ್ರಕಾರ ದೊರೆಬೇಕಾದ ಬಾಕಿ ವೇತನ ಹಾಗೂ ಇತರ ಸೌಲಭ್ಯಗಳಿಂದ ವಂಚಿತರಾಗಿದ್ದು, ಅವುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಈಗಾಗಲೇ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಕುರಿತು ನೋಟಿಸ್ ನೀಡಿದ್ದು, ಮೊದಲನೇ ಹಂತವಾಗಿ ಶುಕ್ರವಾರ ಸಾಂಕೇತಿಕವಾಗಿ ಸಾಮೂಹಿಕ ಧರಣಿ ಕೈಗೊಳ್ಳಲಾಗುತ್ತಿದೆ. ಗದಗ ವಿಭಾಗದ ಗದಗ-ಬೆಟಗೇರಿ, ರೋಣ, ನರಗುಂದ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ವಿಭಾಗೀಯ ಕಾರ್ಯಾಗಾರದಿಂದ ನೂರಾರು ಜನ ನೌಕರರು ಪಾಲ್ಗೊಳ್ಳಲಿದ್ದಾರೆ. ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಎಲ್ಲ ವಿಭಾಗಗಳ ಎಲ್ಲ ಘಟಕಗಳಿಂದ ಪದಾಧಿಕಾರಿಗಳು ಹಾಗೂ ಸಕ್ರಿಯ ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಹತ್ತಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಜಿಲ್ಲಾ ಘಟಕ ಅಧ್ಯಕ್ಷ ಎನ್.ಎಚ್. ಕಳಸಣ್ಣವರ, ಕಾರ್ಯಾಧ್ಯಕ್ಷ ಎಸ್.ಬಿ. ಖಟವಟೆ, ಉಪಾಧ್ಯಕ್ಷ ಎನ್.ಬಿ. ಬಾಣದ, ಪ್ರಧಾನ ಕಾರ್ಯದರ್ಶಿ ಎಸ್.ಕೆ. ಅಯ್ಯನಗೌಡ್ರ, ಮಾರ್ಗದರ್ಶಕ ಬಸವಣ್ಣೆಯ್ಯ ಹಿರೇಮಠ, ಪದಾಧಿಕಾರಿ ಶ್ರೀನಿವಾಸ ಮುಧೋಳೆ, ಬಿ.ಪಿ. ಹೊಸಮನಿ, ಮಹದೇವಪ್ಪ ತಳವಾರ, ಆರ್.ಜಿ. ಅರಮನಿ, ಎಂ.ಎ. ಸಿದ್ದಾಪುರ ಇತರರು ಉಪಸ್ಥಿತರಿದ್ದರು.