ಪ್ರಾಚೀನ ಅವಶೇಷ ರಕ್ಷಿಸಿ
ಗದಗ: ಕಾಲಗರ್ಭದಲ್ಲಿ ಹೂತು ಹೋಗಿದ್ದ ಹಾಗೂ ಮರೆತು ಹೋಗಿದ್ದ ಸ್ಮಾರಕ, ಶಾಸನಗಳು, ನಾಣ್ಯಗಳು ಕಾಲ ಭಗ್ನಾವಶೇಷಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇತಿಹಾಸದ ಬಳುವಳಿಯಾಗಿ ನೀಡಬೇಕಾಗಿರುವುದು ಎಲ್ಲರ ಕರ್ತವ್ಯ ಎಂದು ಗದಗ ಜಿಲ್ಲಾ ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯದ ಕ್ಯೂರೇಟರ್ ರಾಜಾರಾಮ ಅಭಿಪ್ರಾಯಪಟ್ಟರು.
ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಲ್ಲಿ ನಗರದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ನಡೆದ ವಿಶ್ವ ಪ್ರಾಚ್ಯವಸ್ತು ಸಂಗ್ರಹಾಲಯ ದಿನಾಚರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದಿನ ಜನರ ಜೀವನ ಶೈಲಿ, ರಾಜ ಮನೆತನಗಳ ಆಳ್ವಿಕೆ, ಅವರು ಬಳಸುತ್ತಿದ್ದ ವಸ್ತುಗಳು, ಕಲೆಗೆ ಅವರು ನೀಡುತ್ತಿದ್ದ ಪ್ರೋತ್ಸಾಹ ಈ ಎಲ್ಲವುಗಳನ್ನು ನಾವು ಪ್ರಾಚ್ಯವಸ್ತುಗಳಿಂದ ತಿಳಿಯಬಹುದಾಗಿದ್ದು, ಇನ್ನರ್‌ವ್ಹೀಲ್ ಕ್ಲಬ್ ಇಂಥ ಕಾರ್ಯಕ್ರಮ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಚ್ಯವಸ್ತು ಸಂಶೋಧಕ ಅ.ದ. ಕಟ್ಟಿಮನಿ, ಮಾನವನ ಲೌಕಿಕ ಅವಶೇಷಗಳು ಆತ ಬಳಸಿದ ಶೀಲಾಯುಧಗಳು, ಲೋಹೋಪಕರಣಗಳು, ಮಣ್ಣಿನ ಪಾತ್ರೆಗಳು, ವಾಸಿಸುವ ಗುಹೆಗಳಿಂದ ನಾವು ಹಿಂದಿನ ಜನರ ಜೀವನ ಶೈಲಿ ಅರಿಯಬಹುದಾಗಿದ್ದು, ಗುಡಿ-ಗುಂಡಾರಗಳು, ಕೋಟೆ-ಕೊತ್ತಲಗಳು, ಶೀಲಾ-ಶಾಸನಗಳು, ದತ್ತಿ ದಾನಿಗಳಿಂದ ಆಯಾ ಕಾಲದ ಅರಸರ ಆಡಳಿತ ವೈಖರಿ ಕಲೆಗೆ ಅವರು ನೀಡುತ್ತಿದ್ದ ಪ್ರೋತ್ಸಾಹ ಉತ್ತಮ ಆಡಳಿತ ಅರಿಯಬಹುದಾಗಿದೆ. ಸ್ಮಾರಕ, ಅವಶೇಷಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಅವುಗಳನ್ನು ಸಂಗ್ರಹಿಸಿ, ಉಳಿಸಿ ಮುಂದಿನ ಪೀಳಿಗೆಗೆ ಇತಿಹಾಸ ಓದಲು ಆಸಕ್ತಿ ಬರುವಂತೆ ನಾವೆಲ್ಲರೂ ಪ್ರಯತ್ನಿಸಬೇಕು ಎಂದರು. ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಮಾತನಾಡಿ, ಇತಿಹಾಸವು ಭೂತ ಕಾಲದ ಚಿಂತನೆ ಹಾಗೂ ಘಟನೆಗಳ ಸಹಜ ಪ್ರತಿಬಿಂಬವಾಗಿದೆ. ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲಾರರು ಎಂಬಂತೆ ನಾವು ಮೊದಲು ಇತಿಹಾಸ ತಿಳಿಯಲು ಇಂತಹ ಪ್ರಾಚ್ಯವಸ್ತು ಸಂಗ್ರಹಾಲಯಗಳು ಉಪಯೋಗಕಾರಿ ಎಂದರು. ಆಶಾ ಹುಕ್ಕೇರಿ, ಡಾ. ಪದಕಿ, ವಿ.ಆರ್. ಮಾಳೆಕೊಪ್ಪಮಠ, ಹೇಮಾ ಪೊಂಗಾಲಿಯಾ, ಸುಶೀಲಾ ಕೋಟಿ, ಸುಮಾ ಪಾಟೀಲ, ವಿದ್ಯಾ ಸೂಡಿಶೆಟ್ಟರ್, ಸವಿತಾ ಪಾಟೀಲ, ಜ್ಯೋತಿ ಪಟ್ಟೇದ, ಕಾವ್ಯಾ, ಸಂತೃಪ್ತಿ, ರೇಶ್ಮಾ ಬಸರಿಗಿಡಿದ ಇತರರಿದ್ದರು. ಶಾಂತಾ ಮುಂದಿನಮನಿ ಪ್ರಾರ್ಥಿಸಿದರು. ಪ್ರೇಮಾ ಮೇಟಿ ಸ್ವಾಗತಿಸಿದರು. ಕವಿತಾ ದಂಡಿನ ನಿರೂಪಿಸಿದರು. ಸಂಧ್ಯಾ ಕೋಟಿ ವಂದಿಸಿದರು.