ಮಳೆಗಾಲ ಸಿದ್ಧತೆ ನಡೆಸದ ಹೆಸ್ಕಾಂ
ಶಿರಹಟ್ಟಿ: ತಾಲೂಕಿನಲ್ಲಿ ಮೇಲಿಂದ ಮೇಲೆ ವಿದ್ಯುತ್ ಅಪಾಯದಿಂದಾಗಿ ರೈತರು, ಜಾನುವಾರುಗಳು ಸಾವನ್ನಪ್ಪಿದ ಘಟನೆಗಳು ನಡೆದರೂ ಇನ್ನೂ ಪೂರ್ವ ಸಿದ್ಧತೆಗೆ ಹೆಸ್ಕಾಂ ಇಲಾಖೆ ಸಿಬ್ಬಂದಿ ಮುಂದಾಗದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ವಾಲಿ ನಿಂತಿವೆ. ಮತ್ತೆ ಕೆಲವೆಡೆ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಹಲವೆಡೆ ವಿದ್ಯುತ್ ವ್ಯವಸ್ಥೆ ಅಪಾಯದ ಕರೆಗಂಟೆ ಬಾರಿಸುತ್ತಿವೆ. ಇವೆಲ್ಲ ಸಮಸ್ಯೆಗಳನ್ನು ಮಳೆಗಾಲಕ್ಕೂ ಪೂರ್ವ ಸರಿಪಡಿಸಬೇಕಾದ ಇಲಾಖೆ ಸುಮ್ಮನೆ ಕುಳಿತಿದೆ. ಸರಿಪಡಿಸುವ ಮುನ್ಸೂಚನೆ ಕೂಡ ಕಾಣುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಹೆಚ್ಚಬಹುದು ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣ.
ಜೀವ ಭಯದಲ್ಲಿ ಕಾಲ ದೂಡುವ ಜನತೆ: ತಾಲೂಕಿನ ಛಬ್ಬಿ ಗ್ರಾಮದಲ್ಲಿ ವೆಂಕಟೇಶ ಲಮಾಣಿ ಎಂಬುವವರ ಮನೆ ಮೇಲೆಯೇ ವಿದ್ಯುತ್ ತಂತಿ ಹಾಕಿದ್ದು, ಮಾಳಿಗೆ ಮೇಲಿರುವ ಕಬ್ಬಿಣದ ಪೈಪ್ಗೆ ತಂತಿ ತಗುಲಿ ವಿದ್ಯುತ್ ಸಂಚಲನವಾಗುತ್ತಿದ್ದು, ಹಲವಾರು ಬಾರಿ ಹೆಸ್ಕಾಂ ಮತ್ತು ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ. ಮನೆಯಲ್ಲಿ ಯಜಮಾನರಿಲ್ಲದ ಸಮಯದಲ್ಲಿ ಮಕ್ಕಳು ತಂತಿ ಗಮನಿಸದೇ ಆಟವಾಡುತ್ತಿದ್ದು, ಯಾವುದೇ ಸಮಯದಲ್ಲೂ ಮಕ್ಕಳ ಜೀವಕ್ಕೆ ತೊಂದರೆ ಆಗುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಪಾಯ ಸಂಭವಿಸುವ ಮೊದಲೇ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
ಬುಧವಾರ ಗಾಳಿ ಬೀಸಿ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಹಲವಾರು ವಿದ್ಯುತ್ ಕಂಬಗಳು ಬಿದ್ದಿವೆ. ಗ್ರಾಮ ವಿದ್ಯುತ್ ಸಂಪರ್ಕ ಕಳೆದುಕೊಂಡು ಕತ್ತಲಲ್ಲಿ ಮುಳುಗಿದೆ. ತಂತಿ ಹರಿದು ಚಲ್ಲಾಪಿಲ್ಲಿಯಾಗಿವೆ. ಗ್ರಾಮಾಂತರ ಭಾಗದಲ್ಲಿ ಹಲವೆಡೆ ವಿದ್ಯುತ್ ತಂತಿಗಳು ತೀರಾ ಶಿಥಿಲಾವಸ್ಥೆ ತಲುಪಿವೆ. ಹೆಸ್ಕಾಂ ಇಲಾಖೆ ಗಮನಕ್ಕೆ ತಂದರೂ ಗ್ರಾಮದತ್ತ ತಿರುಗಿ ನೋಡುತ್ತಿಲ್ಲ. ರಸ್ತೆ ಪಕ್ಕದಲ್ಲೇ ಇರುವ ರೈತರ ಹೊಲದಲ್ಲಿಯೂ ವಿದ್ಯುತ್ ಕಂಬ ಬಿದ್ದಿದ್ದು, ತುರ್ತು ಸರಿಪಡಿಸಿದಲ್ಲಿ ಸಂಭವನೀಯ ಹಲವು ಅನಾಹುತಗಳನ್ನು ಸಪ್ಪಿಸಲು ಸಾಧ್ಯ.
ಪ್ರಾಣಾಪಾಯದಿಂದ ಪಾರು: ಬುಧವಾರ ಸುರಿದ ಮಳೆಗೆ ಛಬ್ಬಿ ಗ್ರಾಮದ ರಾಮವ್ವ ಠಾಕರೆಪ್ಪ ಲಮಾಣಿ, ಗಂಗವ್ವ ನಾನೆಪ್ಪ ಲಮಾಣಿ ಸೇರಿದಂತೆ ಹತ್ತಾರು ಮನೆ ಮಾಳಿಗೆಯ ಮಣ್ಣು ಕುಸಿದಿದ್ದು, ಮನೆಯಲ್ಲಿರುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲವರ ಮೇಲ್ಛಾವಣಿಯ ತಗಡುಗಳು ಹಾರಿ ಹೋಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಮನೆಯವರು ಆಗ್ರಹಿಸಿದ್ದಾರೆ.
-ಮಹದೇವಪ್ಪ ಎಂ. ಸ್ವಾಮಿ